ADVERTISEMENT

ಜನರಿಗೆ ಮೋದಿ ಹುಚ್ಚು ಹಿಡಿಸಿದ ಮಾಧ್ಯಮಗಳು: ಕಾಂಗ್ರೆಸ್‌ ನಾಯಕಿ ಪ್ರತಿಭಾ ಕುಳಾಯಿ‌

ಕಾಂಗ್ರೆಸ್‌ ನಾಯಕಿ ಪ್ರತಿಭಾ ಕುಳಾಯಿ‌ ಟೀಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 13:50 IST
Last Updated 19 ಸೆಪ್ಟೆಂಬರ್ 2020, 13:50 IST
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಮಹಿಳಾ ಕಾಂಗ್ರೆಸ್ ಹಾಗೂ ಬ್ಲಾಕ್ ಮಹಿಳಾ ಕಾಂಗ್ರೆಸ್‌ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್‌ ನಾಯಕಿ ಪ್ರತಿಭಾ ಕುಳಾಯಿ‌‌ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಮಹಿಳಾ ಕಾಂಗ್ರೆಸ್ ಹಾಗೂ ಬ್ಲಾಕ್ ಮಹಿಳಾ ಕಾಂಗ್ರೆಸ್‌ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್‌ ನಾಯಕಿ ಪ್ರತಿಭಾ ಕುಳಾಯಿ‌‌ ಮಾತನಾಡಿದರು.   

ಉಡುಪಿ: ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳು ಮೋದಿ ಜಪ ಮಾಡುತ್ತಾ ಜನರಿಗೆ ಮೋದಿಯ ಹುಚ್ಚು ಹಿಡಿಸಿದ್ದಾರೆ ಎಂದು ಕಾಂಗ್ರೆಸ್‌ ನಾಯಕಿ ಪ್ರತಿಭಾ ಕುಳಾಯಿ‌ ಟೀಕಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕರದ ವೈಫಲ್ಯಗಳ ವಿರುದ್ಧ ಜಿಲ್ಲಾ ಮಹಿಳಾ ಕಾಂಗ್ರೆಸ್ ಹಾಗೂ ಬ್ಲಾಕ್ ಮಹಿಳಾ ಕಾಂಗ್ರೆಸ್‌ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದ್ದರೂ ಯುವಕರು ಮೋದಿ ಜಪ ಮಾಡುವುದನ್ನು ನಿಲ್ಲಿಸಿಲ್ಲ. ಇದಕ್ಕೆ ಮೋದಿ ಪರವಾಗಿ ನಡೆಯುತ್ತಿರುವ ವ್ಯವಸ್ಥಿತ ಪ್ರಚಾರ ಕಾರಣ’ ಎಂದರು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆ ಕುಸಿದರೂ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಇದನ್ನು ಪ್ರಶ್ನಿಸಿದರೆ 60 ವರ್ಷಗಳಲ್ಲಿ ಕಾಂಗ್ರೆಸ್‌ ಸಾಧನೆ ಏನು ಎಂದು ಬಿಜೆಪಿಗರು ಕೇಳುತ್ತಾರೆ. ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಒಂದು ಸೂಜಿ ಸಹ ಉತ್ಪಾದನೆ ಆಗುತ್ತಿರಲಿಲ್ಲ. ಬಳಿಕ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿಯಾಯಿತು. ಪಾಕಿಸ್ತಾನದ ವಿರುದ್ಧ ಯುದ್ಧ ಗೆದ್ದೆವು. ಈ ವಿಚಾರಗಳನ್ನೆಲ್ಲ ಕಾಂಗ್ರೆಸ್ಸಿಗರು ಎದೆತಟ್ಟಿಕೊಂಡು ಜನರ ಎದುರು ಹೇಳಬೇಕು ಎಂದರು.

ADVERTISEMENT

ಜನರ ಭಾವನೆ ಹಾಗೂ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದು ಬಿಜೆಪಿಯ ಅಜೆಂಡಾ. ಕೊರೊನಾ ಬಾರದಿದ್ದರೆ ಸಿಎಎ ವಿಷಯದಲ್ಲಿ ಹಲವರು ಪ್ರಾಣಬಿಡಬೇಕಾಗುತ್ತಿತ್ತು ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನಾ ಸಭೆಯ ಬಳಿಕ ಬೆಲೆ ಏರಿಕೆ ವಿರುದ್ಧ ಅಣಕು ಪ್ರದರ್ಶನ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಗೀತಾ ವಾಗ್ಳೆ, ಚಂದ್ರಿಕಾ ಶೆಟ್ಟಿ, ವೆರೊನಿಕಾ ಕರ್ನೆಲಿಯೊ, ಡಾ.ಸುನಿತಾ ಶೆಟ್ಟಿ, ಜ್ಯೋತಿ ಹೆಬ್ಬಾರ್, ಅಮೃತಾ ಕೃಷ್ಣಮೂರ್ತಿ, ರೋಷನಿ ಒಲಿವೆರಾ, ಮಮತಾ ಶೆಟ್ಟಿ, ಸಂಧ್ಯಾ ಶೆಟ್ಟಿ, ರಮೇಶ್ ಕಾಂಚನ್‌, ಭಾಸ್ಕರ್ ರಾವ್ ಕಿದಿಯೂರು, ಕೀರ್ತಿ ಶೆಟ್ಟಿ, ವಿಶ್ವಾಸ್‌ ಅಮೀನ್, ಗಣೇಶ್ ನೇರ್ಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.