ADVERTISEMENT

ಸಂವಿಧಾನದ ಮೂಲ ತತ್ವ ಪಾಲಿಸಿ: ಗಣನಾಥ ಎಕ್ಕಾರ್

ತೊಟ್ಟಂನಲ್ಲಿ ಸರ್ವಧರ್ಮ ಹಬ್ಬಗಳ ಸೌಹಾರ್ದ ಕೂಟ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 7:27 IST
Last Updated 17 ಡಿಸೆಂಬರ್ 2025, 7:27 IST
ಸರ್ವಧರ್ಮ ಹಬ್ಬಗಳ ಸೌಹಾರ್ದ ಕೂಟ ಜರುಗಿತು
ಸರ್ವಧರ್ಮ ಹಬ್ಬಗಳ ಸೌಹಾರ್ದ ಕೂಟ ಜರುಗಿತು   

ಉಡುಪಿ: ಸಂವಿಧಾನದ ಮೂಲ ತತ್ವಗಳಾದ ಸಮಾನತೆ, ಸ್ವಾತಂತ್ರ್ಯ, ಸಹೋದರತೆ ಮತ್ತು ಸಾಮಾಜಿಕ ನ್ಯಾಯವನ್ನು ಅರಿತುಕೊಂಡು ಜೀವಿಸಿದಾಗ ಹಬ್ಬಗಳ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ಡಾ.ಶಿವರಾಮ ಕಾರಂತ ಟ್ರಸ್ಟ್‌ ಅಧ್ಯಕ್ಷ ಗಣನಾಥ ಎಕ್ಕಾರ್ ಅಭಿಪ್ರಾಯಪಟ್ಟರು.

ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ತೊಟ್ಟಂ ಹಾಗೂ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ತೊಟ್ಟಂ ಘಟಕದ ಜಂಟಿ ಆಶ್ರಯದಲ್ಲಿ ತೊಟ್ಟಂನಲ್ಲಿ ಸೋಮವಾರ ಆಯೋಜಿಸಿದ್ದ ಸರ್ವಧರ್ಮ ಹಬ್ಬಗಳ ಸೌಹಾರ್ದ ಕೂಟದಲ್ಲಿ ಅವರು ಮಾತನಾಡಿದರು.

ಸೌಹಾರ್ದತೆಗಾಗಿ ಶ್ರಮಿಸುವ ಪ್ರತಿಯೊಬ್ಬ ಕೂಡ ನಿಜವಾದ ದೇಶಭಕ್ತನಾಗಲು ಸಾಧ್ಯ. ಕ್ಷಮೆ, ಕರುಣೆ ಮತ್ತು ಪ್ರೀತಿಯ ಸಂದೇಶವನ್ನು ಜಗತ್ತಿನ ಪ್ರತಿಯೊಂದು ಧರ್ಮಗಳು ಸಾರುವುದರೊಂದಿಗೆ ಮಾನವೀಯತೆಯನ್ನು ಕಲಿಸುತ್ತವೆ ಎಂದು ಹೇಳಿದರು.

ADVERTISEMENT

ಪ್ರತಿಯೊಬ್ಬ ವ್ಯಕ್ತಿ ತನ್ನ ಧರ್ಮವನ್ನು ಪಾಲಿಸಿಕೊಂಡು ಇತರ ಧರ್ಮದ ಬಗ್ಗೆ ಅರಿತುಕೊಂಡು ಬಾಳಿದಾಗ ಸೌಹಾರ್ದ ಮೂಡಲು ಸಾಧ್ಯವಿದೆ. ಎಲ್ಲಾ ಹಬ್ಬಗಳ ಮೂಲ ತತ್ವ ಪ್ರೀತಿ ಮತ್ತು ಒಗ್ಗಟ್ಟಿನಿಂದ ಬಾಳುವುದಾಗಿದೆ ಎಂದರು.

ಸಮಾಜ ಸೇವಕ ರಫೀಕ್ ಮಾಸ್ಟರ್ ಮಾತನಾಡಿ, ಪ್ರತಿಯೊಬ್ಬರು ಹೃದಯಗಳನ್ನು ಕತ್ತರಿಸುವ ಕತ್ತರಿಯಾಗದೆ ಪರಸ್ಪರ ಬೆಸೆಯುವ ಸೂಜಿ ನೂಲಾಗಬೇಕು. ತಾನು ಬೆಳೆಯುವುದರೊಂದಿಗೆ ಇನ್ನೊಬ್ಬರನ್ನು ಬೆಳೆಸಿದಾಗ ಪ್ರತಿಯೊಂದು ಧರ್ಮದ ಮೌಲ್ಯ ಹೆಚ್ಚಾಗುತ್ತದೆ ಎಂದು ಹೇಳಿದರು.

ತೊಟ್ಟಂ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ಗೌರವಾಧ್ಯಕ್ಷ ಡೆನಿಸ್ ಡೆಸಾ ಪ್ರಾಸ್ತಾವಿಕ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ತಂಡವನ್ನು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಮೇಶ್ ತಿಂಗಳಾಯ ಮತ್ತು ರೆಜಿನಾಲ್ಡ್ ಫುರ್ಟಾಡೊ ಅವರನ್ನು ಗೌರವಿಸಲಾಯಿತು.

ತೊಟ್ಟಂ ಚರ್ಚು, ಸಿಎಸ್‌ಐ ಚರ್ಚ್ ಮಲ್ಪೆ ಹಾಗೂ ಇತರರಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮಲ್ಪೆಯ ಸಿಎಸ್‌ಐ ಎಬನೇಜರ್ ಚರ್ಚ್ ಸಭಾಪಾಲಕ ವಿನಯ್ ಸಂದೇಶ್, ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ಉಪಾಧ್ಯಕ್ಷ ಯಾಹ್ಯಾ ನಕ್ವಾ, ತೊಟ್ಟಂ ಚರ್ಚಿನ ಅಂತರ ಧರ್ಮೀಯ ಸಂವಾದ ಆಯೋಗದ ಸಂಚಾಲಕ ಆಗ್ನೆಲ್ ಫೆರ್ನಾಂಡಿಸ್, ಜಮಾತೆ ಇಸ್ಲಾಮಿ ಹಿಂದ್ ಮಲ್ಪೆ ಘಟಕದ ಸಿರಾಜ್, ಕಥೊಲಿಕ್ ಸಭಾ ಕಾರ್ಯದರ್ಶಿ ಶಾಂತಿ ಪಿಕಾರ್ಡೊ, ಲೆಸ್ಲಿ ಆರೋಝಾ, ಬ್ಲೆಸಿಲ್ಲಾ ಕ್ರಾಸ್ತಾ, ಸಿಸ್ಟರ್ ಸುಷ್ಮಾ ಇದ್ದರು.

ಕಥೊಲಿಕ್ ಸಭಾ ಅಧ್ಯಕ್ಷರಾದ ವೀಣಾ ಫೆರ್ನಾಂಡಿಸ್ ಸ್ವಾಗತಿಸಿದರು. ಲವೀನಾ ಫೆರ್ನಾಂಡಿಸ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.