ಉಡುಪಿ: ರಾಜ್ಯದ ವಿವಿಧ ಇಲಾಖೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ ಏಜನ್ಸಿಯವರು ಸರಿಯಾಗಿ ಸಂಬಳ ಕೊಡುವುದಿಲ್ಲ. ಇಎಸ್ಐ, ಪಿಎಫ್ ಸೌಲಭ್ಯಗಳೂ ಸಿಗುವುದಿಲ್ಲ ಎಂಬ ದೂರುಗಳಿವೆ. ಅವರ ಸಮಸ್ಯೆ ಪರಿಹಾರಕ್ಕಾಗಿ ಜಿಲ್ಲಾವಾರು ಸೊಸೈಟಿ ಆರಂಭಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯ ಪ್ರವೃತ್ತವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು.
ಉಡುಪಿಯ ಪುರಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಡುಪಿ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಯಾ ಜಿಲ್ಲಾಧಿಕಾರಿಗಳ ನೇತೃತ್ವದ ಸೊಸೈಟಿಗಳಲ್ಲಿ 33 ಇಲಾಖೆಗಳ ಹೊರಗುತ್ತಿಗೆ ನೌಕರರು ನೋಂದಣಿ ಮಾಡಿಕೊಳ್ಳಲಿದ್ದಾರೆ. ಹೊರಗುತ್ತಿಗೆ ನೌಕರರ ಇಎಸ್‌ಐ, ಪಿಎಫ್ ಸಂಬಂಧಿತ ಸಮಸ್ಯೆಗಳನ್ನು ಅಂತಹ ಸೊಸೈಟಿಗಳು ಪರಿಹರಿಸಲಿವೆ ಎಂದರು.
ಪೆಟ್ರೋಲ್ ಡೀಸೆಲ್ ಮೇಲೆ ಒಂದು ರೂಪಾಯಿ ಸೆಸ್ ವಿಧಿಸಿ ಆ ಹಣವನ್ನು ಕಾರ್ಮಿಕ ಇಲಾಖೆಗೆ ವರ್ಗಾಯಿಸಿದರೆ ವರ್ಷಕ್ಕೆ ಎರಡೂವರೆ ಸಾವಿರ ಕೋಟಿಗೂ ಹೆಚ್ಚು ಹಣ ಬರುತ್ತದೆ. ಅದರಿಂದ ಅಸಂಘಟಿತ ವಲಯದ ಕಾರ್ಮಿಕರಿಗೆ ₹ 10 ಲಕ್ಷದಿಂದ ₹ 15 ಲಕ್ಷದಷ್ಟು ಮೊತ್ತದ ಆರೋಗ್ಯ ವಿಮೆ ಮಾಡಿಸಬಹುದಾಗಿದೆ ಎಂದು ಹೇಳಿದರು.
ಈವರೆಗೆ ರಾಜ್ಯದಲ್ಲಿ 25.45 ಲಕ್ಷ ಕಾರ್ಮಿಕರು ಸ್ಮಾರ್ಟ್ ಕಾರ್ಡ್‌ಗೆ ನೋಂದಣಿ ಮಾಡಿಸಿಕೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ 57,045 ಕಾರ್ಮಿಕರನ್ನು ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಇ–ಕಾಮರ್ಸ್ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ತಲಾ ₹ 2ಲಕ್ಷ ಅಪಘಾತ ಪರಿಹಾರ ಹಾಗೂ ಜೀವ ವಿಮಾ ಸೌಲಭ್ಯ ಸೆರಿದಂತೆ ಒಟ್ಟು ₹ 4 ಲಕ್ಷದ ವಿಮಾ ಸೌಲಭ್ಯ ಒದಗಿಸುವ ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದರು.
ಸಿನಿಮಾ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಿ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಸಂಪನ್ಮೂಲ ಕ್ರೋಢೀಕರಿಸಲು ಕರ್ನಾಟಕ ಸಿನಿಮಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿದ ಕಾರ್ಮಿಕರ (ಕಲ್ಯಾಣ) ಸುಂಕ ಅಧಿನಿಯಮ –2024 ಅನ್ನು ಸರ್ಕಾರ ಅಧಿಸೂಚಿಸಿದ್ದು, ನಿಯಮಾವಳಿ ರೂಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ಜನರು ಪ್ರಜ್ಞಾವಂತರಾದರೆ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ಸರ್ಕಾರಗಳು ನಿಮಗೆ ಸೌಲಭ್ಯದಲ್ಲಿ ನೀಡುತ್ತಿರುವ ಹಣ ಯಾವುದೇ ಪಕ್ಷದ ಹಣವಲ್ಲ ಅದು ನಿಮ್ಮದೇ ಹಣ ಎಂದರು.
ಶಾಸಕ ಯಶ್ ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ. ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಉಡುಪಿ ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಪೂರ್, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕನಿಷ್ಠ ವೇತನ ಮಂಡಳಿಯ ಅಧ್ಯಕ್ಷ ಶಾಹಿದ್, ಎಚ್.ಎನ್. ಗೋಪಾಲಕೃಷ್ಣ, ಮುಂಡರಗಿ ನಾಗರಾಜ್, ಲಾವಣ್ಯ ಬಲ್ಲಾಳ್ ಉಪಸ್ಥಿತರಿದ್ದರು.
‘ಜಿಡಿಪಿ ಹೆಚ್ಚಾದರೆ ಬಡತನ ನಿವಾರಣೆಯಾಗದು’
ಜಿಡಿಪಿ ಹೆಚ್ಚಾದರೆ ಮಾತ್ರ ದೇಶದ ಬಡತನ ನಿವಾರಣೆಯಾಗದು ತಲಾ ಆದಾಯ ಹೆಚ್ಚಾಗಬೇಕು ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಸಂತೋಷ್ ಎಸ್. ಲಾಡ್ ಹೇಳಿದರು. ಜಿಡಿಪಿ ಜಿಎಸ್‌ಟಿ ತಲಾ ಆದಾಯದಲ್ಲಿ ಕರ್ನಾಟಕ ರಾಜ್ಯವು ಮೊದಲ ಸ್ಥಾನದಲ್ಲಿದೆ. ಆದ್ದರಿಂದ ರಾಜ್ಯವು ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದೂ ತಿಳಿಸಿದರು.
ಅಸಂಘಟಿತ ವಲಯದ ಅಲೆಮಾರಿ ಕಾರ್ಮಿಕರು ಉಡುಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅವರಿಗೆ ಉಳಿದುಕೊಳ್ಳಲು ಕಾರ್ಮಿಕ ಇಲಾಖೆಯಿಂದ ವ್ಯವಸ್ಥೆ ಮಾಡಬೇಕು.- ಕಿರಣ್‌ಕುಮಾರ್, ಕೊಡ್ಗಿ ಶಾಸಕ
ಕಾರ್ಮಿಕರು ಇಎಸ್‌ಐ ಸೌಲಭ್ಯ ಪಡೆಯಲು ಇರುವ ₹20 ಸಾವಿರ ಸಂಬಳ ಮಿತಿಯನ್ನು ₹30 ಸಾವಿರಕ್ಕೆ ಏರಿಕೆ ಮಾಡಬೇಕು. ಬ್ರಹ್ಮಾವರದಲ್ಲಿ ನಿರ್ಮಾಣವಾಗಲಿರುವ ಇಎಸ್‌ಐ ಆಸ್ಪತ್ರೆ ಟೆಂಡರ್ ಹಂತದಲ್ಲಿದೆ ಅದಕ್ಕೆ ರಾಜ್ಯ ಸರ್ಕಾರವೂ ನೆರವು ನೀಡಬೇಕು-ಯಶ್‌ಪಾಲ್ ಸುವರ್ಣ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.