
ಶೃಂಗೇರಿ: ‘ಷೇರುದಾರರಿಗೆ ಸಹಕಾರ ಕ್ಷೇತ್ರ ನಮ್ಮದು ಎಂದು ಭಾವನೆ ಮೂಡಬೇಕು. ಆ ಕ್ಷೇತ್ರ ಬಲಗೊಂಡರೆ ರೈತರು, ಇತರೆ ವ್ಯಾಪಾರಿಗಳು ಗಟ್ಟಿಗೊಳ್ಳುತ್ತಾರೆ. ರಾಜಕೀಯದಿಂದ ಹೊರತಾದ ಸಹಕಾರಿ ವ್ಯವಸ್ಥೆ ಆಗಬೇಕಿದ್ದು, ಷೇರುದಾರರು ಕೈಜೋಡಿಸಿ ಇಂದು ಸಂಘ ಬಲಗೊಂಡು ಶಾರದಾ ನಗರದಲ್ಲಿ ವಿಶಾಲವಾಗಿ ಉತ್ತಮ ಕಟ್ಟಡ ನಿರ್ಮಾಣಗೊಂಡಿದೆ’ ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.
ಪಟ್ಟಣದ ಶಾರದಾ ನಗರದಲ್ಲಿರುವ ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್‍ನ ನೂತನ ಕಚೇರಿ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿ, ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ಬ್ಯಾಂಕ್‌ಗೆ ₹40 ಲಕ್ಷ ಅನುದಾನ ಒದಗಿಸಿದ್ದೇನೆ ಎಂದರು.
ನಾವು ನಮ್ಮ ಬ್ಯಾಂಕ್ ಎಂದು ತಿಳಿದುಕೊಂಡು ವ್ಯವಹರಿಸಿದರೆ ಮಾತ್ರ ಸಹಕಾರ ಕ್ಷೇತ್ರ ಉಳಿದು ಬೆಳೆಯುತ್ತದೆ. ಸಹಕಾರಿ ಸಂಸ್ಥೆಗಳು ಲಾಭ ಗಳಿಸುವ ಗುರಿ ಹೊಂದಿದೆ, ಸೇವಾ ಮನೋಭಾವದ ಸಂಸ್ಥೆಯಾಗಬೇಕು. ಷೇರುದಾರರ ಏಳಿಗೆಗಾಗಿ ಪ್ರಾಮಾಣಿಕವಾಗಿ ದುಡಿಯಬೇಕು. ಸಹಕಾರಿ ತತ್ವದ ಬದ್ಧತೆಗೆ ಶ್ರಮಿಸಬೇಕು. ಎಂದು ಅವರು ಹೇಳಿದರು.
ಸಹಕಾರಿ ಕ್ಷೇತ್ರಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದ್ದು, ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರ ಸಹಕಾರಿ ಕ್ಷೇತ್ರದ ರೈತರ ಸಾಲ ಮನ್ನಾ ಮಾಡಿತ್ತು. ರಾಜ್ಯದಲ್ಲೂ ಕಾಂಗ್ರೆಸ್ ಸಹಕಾರಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಮಾಜಿ ಪ್ರಧಾನಿ ದಿ.ಜವಾಹರಲಾಲ್ ನೆಹರೂ ಅವರಿಗೆ ಸಹಕಾರ ತತ್ವದಲ್ಲಿ ವಿಶೇಷ ನಂಬಿಕೆ, ಬದ್ಧತೆಯಿತ್ತು ಎಂದರು.
ಬ್ಯಾಂಕ್ ಅಧ್ಯಕ್ಷ ಎಚ್.ಕೆ. ದಿನೇಶ್ ಹೆಗ್ಡೆ ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ಷೇರುದಾರರೇ ಆಸ್ತಿಯಾಗಿದ್ದು, ಸಾಲ ಪಡೆದ ರೈತರು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಬ್ಯಾಂಕಿನ ಏಳಿಗೆಗೆ ಸಹಕಾರ ನೀಡಬೇಕು ಎಂದರು.
ಬ್ಯಾಂಕ್‌ನ ಜಿಲ್ಲಾ ವ್ಯವಸ್ಥಾಪಕ ಪುಟ್ಟರಾಜು, ಉಪಾಧ್ಯಕ್ಷ ಪ್ರಸನ್ನ, ವ್ಯವಸ್ಥಾಪಕ ಕೆ.ಪಿ. ಶ್ರೀನಿವಾಸ್, ಕೊಡತಲು ಕೆ.ಎಂ. ರಮೇಶ್ ಭಟ್, ಸಂಘದ ನಿರ್ದೇಶಕರು, ಸಿಬ್ಬಂದಿ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.