ADVERTISEMENT

ಕುಂದಾಪುರ | ಅಂಪಾರು ಸಹಕಾರಿ ಸಂಘ: ₹3.95 ಕೋಟಿ ದುರುಪಯೋಗ; ಪ್ರಭಾರ ಸಿಇಒ ಬಂಧನ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 7:05 IST
Last Updated 5 ಜನವರಿ 2026, 7:05 IST
ಸದಾಶಿವ ವೈದ್ಯ
ಸದಾಶಿವ ವೈದ್ಯ   

ಕುಂದಾಪುರ: ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಅಂಪಾರು ಸಹಕಾರಿ ವ್ಯವಸಾಯಿಕ ಸಂಘದಲ್ಲಿ ನಡೆದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಆರೋಪಿ ಸದಾಶಿವ ವೈದ್ಯ ಎಂಬಾತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

2023–24ನೇ ಸಾಲಿನಲ್ಲಿ ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಆರೋಪಿ ಸದಾಶಿವ ವೈದ್ಯ, ಅಧಿಕಾರ ದುರುಪಯೋಗಪಡಿಸಿಕೊಂಡು ಸಂಘದ ಹಣವನ್ನು ಅಕ್ರಮವಾಗಿ ಬಳಕೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿಯು ಬಡ್ಡಿ ಖಾತೆಗಳಿಗೆ ನಕಲಿ ಖರ್ಚು ದಾಖಲಿಸಿ, ನಕಲಿ ಠೇವಣಿ ಖಾತೆಗಳನ್ನು ಸೃಷ್ಟಿಸಿ, ಉಳಿತಾಯ ಖಾತೆಗಳಲ್ಲಿ ಅವ್ಯವಹಾರ ನಡೆಸಿ ಒಟ್ಟು ₹3.95 ಕೋಟಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾನೆ. ನಕಲಿ ಠೇವಣಿ, ಉಳಿತಾಯ, ಸಾಲ ಖಾತೆಗಳನ್ನು ತನ್ನ ಸಂಬಂಧಿಕರಿಗೆ ಸೇರಿದ ಖಾತೆಗಳ ಮೂಲಕ ತೆರೆದು ಸಂಘದ ಹಣ ಪಡೆದುಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಸಂಸ್ಥೆಯ ನಿರ್ದಿಷ್ಟ ಠೇವಣಿ ಕುಳುವಾರು ಪರಿಶೀಲನೆ ವೇಳೆ ಈ ಅಕ್ರಮಗಳು ಪತ್ತೆಯಾಗಿದ್ದು, ಸಂಘದ ಪ್ರಸ್ತುತ ಪ್ರಭಾರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರವೀಣ ಕುಮಾರ್ ಶೆಟ್ಟಿ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.