ADVERTISEMENT

ಉಡುಪಿ: ‘₹5.83 ಕೋಟಿ ಲಾಭ, ಶೇ 16 ಡಿವಿಡೆಂಡ್’

ಕೋಟ ಸಹಕಾರಿ ವ್ಯವಸಾಯಕ ಸಂಘದ ವಾರ್ಷಿಕ ಸಾಮಾನ್ಯ ಸಭೆ, ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 5:07 IST
Last Updated 11 ಸೆಪ್ಟೆಂಬರ್ 2025, 5:07 IST
ಕೋಟ ಸಹಕಾರಿ ವ್ಯವಸಾಯಕ ಸಂಘದ 68ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ಕೋಟ ಸಹಕಾರಿ ವ್ಯವಸಾಯಕ ಸಂಘದ 68ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು   

ಬ್ರಹ್ಮಾವರ: ‘ಕೋಟ ಸಹಕಾರಿ ವ್ಯವಸಾಯಿಕ ಸಂಘವು 13 ಶಾಖೆಗಳನ್ನು ಹೊಂದಿ ಉತ್ತಮ ಪ್ರಗತಿ ಸಾಧಿಸಿದೆ. ವರದಿ ಸಾಲಿನಲ್ಲಿ ₹1,326 ಕೋಟಿ ವ್ಯವಹಾರ ಮಾಡಿ ₹5.83 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ 16 ಡಿವಿಡೆಂಡ್ ನೀಡಲಾಗುವುದು’ ಎಂದು ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್‌ ತಿಳಿಸಿದರು.

ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಮಹಾತ್ಮಾ ಗಾಂಧಿ ಸಭಾಭವನದಲ್ಲಿ ಬುಧವಾರ ನಡೆದ ಸಂಘದ 68ನೇ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ 2024–25ನೇ ಸಾಲಿನ ವರದಿ ವಾಚಿಸಿದ ಅವರು, ಸಂಘವು ₹268.23 ಕೋಟಿ ಠೇವಣಿ, ₹213.02 ಕೋಟಿ ಸಾಲ ಹೊರಬಾಕಿ ಹೊಂದಿದೆ ಎಂದು ಮಾಹಿತಿ ನೀಡಿದರು.

ವಿವಿಧ ಸಂಘ– ಸಂಸ್ಥೆಗಳ ಸಹಯೋಗದಲ್ಲಿ ನಡೆದ ಆರ್ಯುವೇದ ತಪಾಸಣಾ ಉಚಿತ ಶಿಬಿರ, ಚಿಕಿತ್ಸೆ ಹಾಗೂ ಔಷಧ ವಿತರಣೆ ಕಾರ್ಯಕ್ರಮ, ಉತ್ತಮ ತಳಿಯ ಅಡಿಕೆ ಗಿಡಗಳ ನರ್ಸರಿ ಮತ್ತು ಸಕಲ ಕೃಷಿ ಉಪಕರಣ, ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಯನ್ನು ಕೋಟದ ಗೀತಾನಂದ ಫೌಂಡೇಷನ್ ಪ್ರವರ್ತಕ ಆನಂದ ಸಿ. ಕುಂದರ್ ಉದ್ಘಾಟಿಸಿದರು. ನೇತ್ರ ತಪಾಸಣೆ ಮತ್ತು ಪೊರೆ ಶಸ್ತ್ರ ಚಿಕಿತ್ಸಾ ಉಚಿತ ಶಿಬಿರವನ್ನು ಪ್ರಗತಿಪರ ಕೃಷಿಕ ರಾಘವೇಂದ್ರ ಮಧ್ಯಸ್ಥ, ಇ.ಸಿ.ಜಿ. ತಪಾಸಣಾ ಶಿಬಿರವನ್ನು ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ಉದ್ಘಾಟಿಸಿದರು.

ADVERTISEMENT

2025ನೇ ಸಾಲಿನಲ್ಲಿ ಗಣರಾಜ್ಯೋತ್ಸವ ಸಂದರ್ಭ ಅತ್ಯುನ್ನತ ಸೇವೆಗಾಗಿ ಕೊಡಮಾಡುವ ರಾಪ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಪಡೆದ ಶಿವಾನಂದ ನಾಯರಿ, ಡಾಕ್ಟರೇಟ್ ಪದವಿ ಪಡೆದ ಕೆ. ಉಮೇಶ ಶೆಟ್ಟಿ, ಸುರೇಶ ಖಾರ್ವಿ, ಬಿ.ಕಾಂ. ಪದವಿ ಪರೀಕ್ಷೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ 4ನೇ ರ‍್ಯಾಂಕ್, ಚಿನ್ನದ ಪದಕ ಗಳಿಸಿ, ಸಿ.ಎ ಪದವಿಯನ್ನು ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾದ ಕುಮಾರಿ ಮಧುರಾ, 42ನೇ ಬಿಕೆಐ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಷಿಪ್‌ನ ಕುಮಿಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ 2 ಚಿನ್ನದ ಪದಕ ಪಡೆದ ಅನಿರುದ್ಧ್‌, ಎಸ್‌ಎಸ್‌ಎಲ್‌ಸಿಯಲ್ಲಿ 625 ಅಂಕ ಪಡೆದ ನಿಧಿ ಪೈ ಎಂ, ಜಿಲ್ಲಾ ಮಟ್ಟದ ಭತ್ತ ಬೆಳೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಲಕ್ಷ್ಮೀ, ತಾಲ್ಲೂಕು ಮಟ್ಟದಲ್ಲಿ 3ನೇ ಸ್ಥಾನ (ರೈತ ಮಹಿಳೆ) ಪಡೆದ ಪ್ರೇಮಾ, ಮೂರನೇ ಸ್ಥಾನ (ಸಾಮಾನ್ಯ) ಪಡೆದ ಭೋಜ ಪೂಜಾರಿ ಸನ್ಮಾನಿಸಲಾಯಿತು. ಸಂಘದ ಹಿರಿಯ ಸದಸ್ಯರು, ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಸಹಾಯಕ ಕಾರ್ಯನಿರ್ವಹಣಾ ಅಧಿಕಾರಿ ಕೆ. ರಾಧಾ ಅವರನ್ನು ಸನ್ಮಾನಿಸಲಾಯಿತು.

ಅತ್ಯುತ್ತಮ ವ್ಯವಹಾರ ನಡೆಸಿದ ಸಂಘದ ಶಾಖೆಗಳನ್ನು ಘೋಷಿಸಲಾಯಿತು. ಸಂಘದ ಕಾರ್ಯವ್ಯಾಪ್ತಿಯ ಶಾಲೆಗಳ 10ನೇ ತರಗತಿ, ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಪುರಸ್ಕರಿಸಲಾಯಿತು. ಅಂಗವಿಕಲ ದತ್ತಿನಿಧಿ, ಕೃಷಿ ಆವರ್ತನಾ ನಿಧಿ ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷ ಎಚ್. ನಾಗರಾಜ ಹಂದೆ, ನಿರ್ದೇಶಕರಾದ ಜಿ. ತಿಮ್ಮ ಪೂಜಾರಿ, ಕೆ. ಉದಯ ಕುಮಾರ್ ಶೆಟ್ಟಿ, ಟಿ. ಮಂಜುನಾಥ, ರವೀಂದ್ರ ಕಾಮತ್, ಮಹೇಶ ಶೆಟ್ಟಿ, ರಶ್ಮಿತಾ, ರಂಜಿತ್ ಕುಮಾರ್, ಚಂದ್ರ ಪೂಜಾರಿ ಪಿ., ವಸಂತಿ ಪೂಜಾರ್ತಿ, ಜಿ. ಅಜಿತ ದೇವಾಡಿಗ, ಪ್ರೇಮಾ, ದಿನಕರ ಶೆಟ್ಟಿ, ಪಿ. ಶೇಖರ ಮರಕಾಲ, ರಾಜಾರಾಮ ಶೆಟ್ಟಿ ಭಾಗವಹಿಸಿದ್ದರು. ಸಂಘದ ನಿರ್ದೇಶಕ ಟಿ. ಮಂಜುನಾಥ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶರತ್‌ ಕುಮಾರ್ ಶೆಟ್ಟಿ ವಂದಿಸಿದರು. ಸಿಬ್ಬಂದಿ ಮಂಜುನಾಥ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.