ADVERTISEMENT

ಉಡುಪಿ: 3ಕ್ಕೆ ನಿಂತ ಕೊರೊನಾ, ನಿಟ್ಟುಸಿರು ಬಿಟ್ಟ ಜನ

ಏಪ್ರಿಲ್‌ನಲ್ಲಿ ಹೊಸ ಸೋಂಕಿತ ಪ್ರಕರಣ ಇಲ್ಲ: ಲಾಕ್‌ಡೌನ್‌ಗೆ ಹೊಂದಿಕೊಂಡ ಸಾರ್ವಜನಿಕರು

ಬಾಲಚಂದ್ರ ಎಚ್.
Published 7 ಏಪ್ರಿಲ್ 2020, 4:16 IST
Last Updated 7 ಏಪ್ರಿಲ್ 2020, 4:16 IST
ಜಿ.ಜಗದೀಶ್
ಜಿ.ಜಗದೀಶ್   

ಉಡುಪಿ: ಕೊರೊನಾ ಸೋಂಕು ಹರಡದಂತೆ ಜಿಲ್ಲಾಡಳಿತ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳು, ಆರೋಗ್ಯ ಹಾಗೂ ಪೊಲೀಸ್ ಇಲಾಖೆಯ ಕಾರ್ಯವೈಖರಿ ಹಾಗೂ ಸಾರ್ವಜನಿಕರ ಸಹಕಾರದ ಫಲವಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಸದ್ಯದ ಮಟ್ಟಿಗೆ ನಿಯಂತ್ರಣದಲ್ಲಿದೆ.

ನೆರೆಯ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಹೆಚ್ಚಾಗುತ್ತಾ ಭೀತಿ ಸೃಷ್ಟಿಸುತ್ತಿದ್ದರೆ, ಉಡುಪಿಯಲ್ಲಿ 3 ಕೋವಿಡ್‌ ಪ್ರಕರಣ ಹೊರತುಪಡಿಸಿದರೆ ಹೊಸ ಪ್ರಕರಣಗಳು ಪತ್ತೆಯಾಗದಿರುವುದು ಸಾರ್ವಜನಿಕರ ಆತಂಕ ಸ್ವಲ್ಪ ದೂರವಾದಂತಾಗಿದೆ.

ಮೂರು ಪ್ರಕರಣ:ಮಾರ್ಚ್‌ 25ರಂದು ಉಡುಪಿ ಜಿಲ್ಲೆಯಲ್ಲಿ ಮೊದಲ ಕೋವಿಡ್‌–19 ಪ್ರಕರಣ ಪತ್ತೆಯಾಗಿತ್ತು. ದುಬೈನಿಂದ ಮರಳಿದ್ದ 34 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿತ್ತು. ಬಳಿಕ ಮಾರ್ಚ್‌ 29ರಂದು ಮತ್ತೆ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು.

ADVERTISEMENT

ದುಬೈನಿಂದ ಬಂದಿದ್ದ 35 ವರ್ಷದ ವ್ಯಕ್ತಿ ಹಾಗೂ ಕೇರಳದ ತಿರುವನಂತಪುರಕ್ಕೆ ತೆರಳಿ ವಾಪಾಸಾಗಿದ್ದ29 ವರ್ಷದ ವ್ಯಕ್ತಿಯಲ್ಲಿ ಸೋಂಕು ಇತ್ತು. ಇದಾದ ಬಳಿಕ ಜಿಲ್ಲೆಯಲ್ಲಿ ಹೊಸ ಪ್ರಕರಣ ಪತ್ತೆಯಾಗಿಲ್ಲ.

ಸೋಂಕಿತರ ಆರೋಗ್ಯ ಚೇತರಿಕೆ:ಸದ್ಯ ಮೂವರು ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಮತ್ತೆ ಎರಡು ಬಾರಿ ಪರೀಕ್ಷೆ ನಡೆಸಿ ನೆಗೆಟಿವ್ ಕಂಡುಬಂದರೆ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಮಾಡಲಾಗುವುದು. ಮೊದಲ ಸೋಂಕಿತ ವ್ಯಕ್ತಿ ಇನ್ನೆರಡು ದಿನಗಳಲ್ಲಿ ಡಿಸ್‌ಚಾರ್ಜ್‌ ಆಗುವ ಸಂಭವವಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದರು.

ಜಿಲ್ಲಾಡಳಿತ ಮಾಡಿದ್ದೇನು?

ಜಿಲ್ಲೆಯಲ್ಲಿ ಸೋಂಕು ಪತ್ತೆಯಾಗುತ್ತಲೇ ಜಿಲ್ಲಾಡಳಿತ, ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಪತ್ತೆಹಚ್ಚಿ ಆಸ್ಪತ್ರೆ ಹಾಗೂ ಹೋಂ ಕ್ವಾರಂಟೈನ್‌ನಲ್ಲಿಟ್ಟು ಅವರ ಆರೋಗ್ಯದ ಮೇಲೆ ನಿಗಾ ವಹಿಸಿತು. ಆಶಾ ಕಾರ್ಯಕರ್ತೆಯರು ಪ್ರತಿದಿನ ಮನೆಮನೆಗೆ ತೆರಳಿ ಆರೋಗ್ಯದ ಬಗ್ಗೆ ವರದಿ ನೀಡಿದರು. ಪರಿಣಾಮ ಸೋಂಕು ಸಮುದಾಯಕ್ಕೆ ಹರಡುವ ಅಪಾಯ ತಪ್ಪಿದಂತಾಯಿತು.‌

ಸಮುದಾಯದ ಸಹಕಾರ:ಜಿಲ್ಲೆಯಲ್ಲಿ ಲಾಕ್‌ಡೌನ್‌ ಘೋಷಣೆಯಾದ ಬಳಿಕ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕದಿಂದ ಆರಂಭದಲ್ಲಿ ಸಾರ್ವಜನಿಕರು ಆಹಾರ ಪದಾರ್ಥಗಳ ಖರೀದಿಗೆ ಮಾರುಕಟ್ಟೆಗೆ ಮುಗಿಬಿದ್ದರು. ಬಳಿಕ ಮೂರ್ನಾಲ್ಕು ದಿನಗಳಲ್ಲಿ ಲಾಕ್‌ಡೌನ್‌ಗೆ ಹೊಂದಿಕೊಂಡ ಪರಿಣಾಮ ಈಚೆಗೆ ಮಾರುಕಟ್ಟೆಯಲ್ಲಿ ಹೆಚ್ಚು ದಟ್ಟಣೆ ಕಂಡುಬರುತ್ತಿಲ್ಲ.

ವ್ಯಾಪಾರಿಗಳು ಹಾಗೂ ಗ್ರಾಹಕರು ಸ್ವಯಂ ಪ್ರೇರಿತರಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವುದು ಶ್ಲಾಘನೀಯ. ಜತೆಗೆ, ಕೆಲವು ವ್ಯಾಪಾರಿಗಳು ಗ್ರಾಹಕರಿಗೆ ಸ್ಯಾನಿಟೈಸರ್‌ ಹಾಕಿದ ಬಳಿಕವೇ ಖರೀದಿಗೆ ಅವಕಾಶ ಕೊಡುತ್ತಿರುವುದು ಕೂಡ ಸಾಮಾಜಿಕ ಜವಾಬ್ದಾರಿ ಎನ್ನುತ್ತಾರೆ ಜಿಲ್ಲಾಧಿಕಾರಿ ಜಿ.ಜಗದೀಶ್‌.

ಪ್ರತಿದಿನ ಬೆಳಿಗ್ಗೆ 7ರಿಂದ 11ರವರೆಗೆ ತರಕಾರಿ, ಹಾಲು, ಮಾಂಸ ಸೇರಿದಂತೆ ದಿನಸಿ ಖರೀದಿಗೆ ಜಿಲ್ಲಾಡಳಿತ ಅನುಮತಿ ನೀಡಿದೆ. ಈ ಅವಧಿಯಲ್ಲಿ ಮಾತ್ರ ಸಾರ್ವಜನಿಕರು ರಸ್ತೆಗಿಳಿಯುತ್ತಿದ್ದು, ಬಳಿಕ ಬಹುತೇಕ ನಗರ ಸ್ತಬ್ಧವಾಗುತ್ತಿದೆ. ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ನೀಡುತ್ತಿರುವ ಸಹಕಾರ ಉತ್ತಮವಾಗಿದ್ದು, ಲಾಕ್‌ಡೌನ್ ಅವಧಿ ಮುಗಿಯುವರೆಗೂ ಹೀಗೆ ಮುಂದುವರಿಯಲಿ ಎನ್ನುತ್ತಾರೆ ಡಿಸಿ.

‘ವಿದೇಶಗಳಿಂದ ಬಂದವರು ಶತ್ರುಗಳಲ್ಲ’

ವಿದೇಶಗಳಲ್ಲಿ ಕೋವಿಡ್‌ ಸೋಂಕು ವ್ಯಾಪಿಸಿದ ಬಳಿಕ ಹಲವು ದೇಶಗಳಿಂದ ಉಡುಪಿ ಜಿಲ್ಲೆಗೆ ಮರಳಿದ 2000ಕ್ಕೂ ಹೆಚ್ಚು ಮಂದಿ ಜಿಲ್ಲೆಯ ಜನರಲ್ಲಿ ದೊಡ್ಡ ಆತಂಕವನ್ನೇ ಸೃಷ್ಟಿಸಿದ್ದರು. ಸೋಂಕು ಹರಡುವ ಭೀತಿ ಎದುರಾಗಿತ್ತು. ಜಿಲ್ಲಾಡಳಿತಕ್ಕೂ ವಿದೇಶದಿಂದ ಬಂದವರನ್ನು ಹೋಂ ಕ್ವಾರಂಟೈನ್ ಮಾಡುವುದು ಸವಾಲಿನ ಕೆಲಸವಾಗಿತ್ತು. ಆದರೆ, ಈಗ ಭೀತಿ ದೂರವಾಗಿದೆ. ಹೆಚ್ಚುಕಡಿಮೆ ವಿದೇಶಗಳಿಂದ ಬಂದ ಬಹುತೇಕರು 14 ದಿನಗಳ ಹೋಂ ಕ್ವಾರಂಟೈನ್‌ ಅವಧಿ ಪೂರೈಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮತ್ತೆ 14 ದಿನ ಮನೆಯಲ್ಲಿಯೇ ಇರುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಸೋಂಕು ನಿಯಂತ್ರಣಕ್ಕೆ ಸಜ್ಜು

ಕೆಎಂಸಿ ಆಸ್ಪತ್ರೆ 100 ಬೆಡ್‌ಗಳ ಆಸ್ಪತ್ರೆ ಬಿಟ್ಟುಕೊಟ್ಟಿದೆ. 145 ಐಸೊಲೇಟೆಡ್‌ ಬೆಡ್‌, ತಲಾ 250 ಹೈ ರಿಸ್ಕ್‌ ಹಾಗೂ ಲೋ ರಿಸ್ಕ್‌ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 90 ವೆಂಟಿಲೇಟರ್‌ಗಳ ವ್ಯವಸ್ಥೆ ಇದೆ. ಪಿಪಿಇ ಕಿಟ್‌, ಮಾಸ್ಕ್‌ ಸಿದ್ಧವಾಗಿವೆ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.