ADVERTISEMENT

ಉಡುಪಿ: ಮತ್ತೆ ಐವರಿಗೆ ಕೋವಿಡ್‌ ಸೋಂಕು

ಚಿತ್ರದುರ್ಗದ ಕ್ಯಾನ್ಸರ್ ಪೀಡಿತ ಬಾಲಕಿಯಲ್ಲಿ ಸೋಂಕು ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಮೇ 2020, 14:59 IST
Last Updated 19 ಮೇ 2020, 14:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಈಚೆಗೆ ಮುಂಬೈನಿಂದ ಉಡುಪಿಗೆ ಬಂದಿದ್ದ ನಾಲ್ವರಲ್ಲಿ ಹಾಗೂ ಚಿತ್ರದುರ್ಗದಿಂದ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯಲು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಬಂದಿದ್ದ ಬಾಲಕಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.

ಸೋಂಕಿತರಲ್ಲಿ 24, 38 ವರ್ಷದ ಪುರುಷರು ಹಾಗೂ 24 ವರ್ಷದ ಮಹಿಳೆ, 17 ವರ್ಷದ ಬಾಲಕಿ ಹಾಗೂ 8 ವರ್ಷದ ಬಾಲಕ ಸೇರಿದ್ದಾನೆ. ಮುಂಬೈನಿಂದ ಬಂದು ಕ್ವಾರಂಟೈನ್‌ನಲ್ಲಿದ್ದ ನಾಲ್ವರಲ್ಲಿ ಸೋಂಕು ಪತ್ತೆಯಾಗಿದ್ದು, ಎಲ್ಲರನ್ನೂ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದುಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.‌

ತಜ್ಞ ವೈದ್ಯರ ಸಭೆ:ಚಿತ್ರದುರ್ಗದ ಕ್ಯಾನ್ಸರ್ ಪೀಡಿತ ಹಾಗೂ ಕೋವಿಡ್ ಸೋಂಕಿತ ಬಾಲಕಿಗೆ ಕೆಎಂಸಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿ ಚಿಕಿತ್ಸೆಗೆ ದಾಖಲಾದ ದಿನ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ವೈದ್ಯರು ಕೂಡ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಚಿಕಿತ್ಸೆ ನೀಡಿದ್ದು, ಭಯಪಡುವ ಅಗತ್ಯವಿಲ್ಲ. ಬಾಲಕಿಗೆ ಮುಂದಿನ ಚಿಕಿತ್ಸೆ ನೀಡುವ ಕುರಿತು ತಜ್ಞ ವೈದ್ಯರ ಸಭೆ ನಡೆಸಲಾಗಿದೆ ಎಂದರು.

ADVERTISEMENT

ಬಾಲಕಿಗೆ ಸೋಂಕು ತಗುಲಿರುವ ವಿಚಾರವನ್ನುಚಿತ್ರದುರ್ಗ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. ಆಕೆಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದಿರುವವರನ್ನು ಗುರುತಿಸುವ ಕೆಲಸ ಚಿತ್ರದುರ್ಗ ಜಿಲ್ಲಾಡಳಿತವೇ ಮಾಡಲಿದೆ ಎಂದರು.

ಜಿಲ್ಲಾ ಕೆಎಂಸಿಯಲ್ಲಿ ಪ್ರಯೋಗಾಲಯ ಆರಂಭವಾಗಿದ್ದು, ಮೂರು ಶಿಫ್ಟ್‌ಗಳಲ್ಲಿ ಕಾರ್ಯ ನಿರ್ವಹಿಸುವಂತೆ ಮನವಿ ಮಾಡಲಾಗಿದೆ. ಮುಂದೆ ತ್ವರಿತವಾಗಿ ಜಿಲ್ಲೆಯ ಪರೀಕ್ಷಾ ವರದಿಗಳು ಕೈಸೇರಲಿವೆ ಎಂದರು.

ಸೋಂಕಿತರ ಸಂಖ್ಯೆ 16ಕ್ಕೇರಿಕೆ:ಮಂಗಳವಾರದ ಐದು ಹಾಗೂ ಹಿಂದಿನ 11 ಪ್ರಕರಣ ಸೇರಿ ಸೋಂಕಿತರ ಸಂಖ್ಯೆ 16ಕ್ಕೇರಿಕೆಯಾಗಿದೆ. ಒಬ್ಬರು ಮೃತಪಟ್ಟಿದ್ದು, ಮೂವರು ಗುಣಮುರಾಗಿದ್ದಾರೆ. 12 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.