ADVERTISEMENT

ಕೋವಿಡ್ 2ನೇ ಅಲೆ ಪ್ರಬಲ: ನಿರ್ಲಕ್ಷ್ಯ ಬೇಡ

ಹಿರಿಯರಿಗೆ ಲಸಿಕೆ ಹಾಕಿಸಿ; ಸಾಮೂಹಿಕ ಸಮಾರಂಭಗಳಿಗೆ ಹೋಗುವುದು ಬೇಡ: ಜಿಲ್ಲಾಧಿಕಾರಿ ಜಗದೀಶ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 12:59 IST
Last Updated 12 ಏಪ್ರಿಲ್ 2021, 12:59 IST
ಜಿ.ಜಗದೀಶ್‌, ಜಿಲ್ಲಾಧಿಕಾರಿ 
ಜಿ.ಜಗದೀಶ್‌, ಜಿಲ್ಲಾಧಿಕಾರಿ    

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌ 2ನೇ ಅಲೆ ವೇಗವಾಗಿ ಹರಡುತ್ತಿದ್ದು, ಮುಂದಿನ ದಿನಗಳು ಆತಂಕದಿಂದ ಕೂಡಿರಲಿವೆ. ಸಾರ್ವಜನಿಕರು ಸೋಂಕಿನ ಬಗ್ಗೆ ನಿರ್ಲಕ್ಷ್ಯ ತೋರದೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಮನವಿ ಮಾಡಿದ್ದಾರೆ.

ಹೆಚ್ಚು ಜನರು ಸೇರುವ ಸಾಮೂಹಿಕ ಸಮಾರಂಭಗಳಲ್ಲಿ ಸಾರ್ವಜನಿಕರು ಭಾಗವಹಿಸಬಾರದು. ಹೋಗಲೇಬೇಕಾದ ಅನಿವಾರ್ಯತೆ ಇದ್ದರೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ಯಾನಿಟೈಸರ್ ಬಳಕೆ ಮಾಡಬೇಕು. ಹೆಚ್ಚು ಜನರು ಸೇರುವ ಸಮಾರಂಭಗಳನ್ನು ಈಗ ಆಯೋಜಿಸುವುದು ಒಳಿತಲ್ಲ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ.

ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿರುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ಕುಟುಂಬದ ಸದಸ್ಯರು ಹಿರಿಯರನ್ನು ಲಸಿಕಾ ಕೇಂದ್ರಕ್ಕೆ ಕರೆತಂದು ಲಸಿಕೆ ಹಾಕಿಸಬೇಕು. ಲಸಿಕೆ ಹಾಕಿಸಿಕೊಂಡರೆ ಕೊರೊನಾ ಆತಂಕ ಕಡಿಮೆಯಾಗಲಿದೆ. ಹಿರಿಯ ಜೀವಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.

ADVERTISEMENT

ಯುವಕರು ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಓಡಾಡಿ ಮನೆಗೆ ಹೋಗಿ ಹಿರಿಯರಿಗೆ ಸೋಂಕು ತಗುಲಿಸಿದರೆ, ಸಾವಿನ ಪ್ರಮಾಣ ಹೆಚ್ಚಾಗಲಿವೆ. ಹಿರಿಯರನ್ನು ರಕ್ಷಿಸಬೇಕಾದ ಜವಾಬ್ದಾರಿ ಕಿರಿಯರದ್ದು ಎಂದು ಡಿಸಿ ಜಿ.ಜಗದೀಶ್‌ ಕಿವಿಮಾತು ಹೇಳಿದ್ದಾರೆ.

ಜಿಲ್ಲೆಯಲ್ಲಿ 192 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಹಿರಿಯರಾಗಿದ್ದಾರೆ. ಈ ಬಾರಿ ಮತ್ತೆ ಹಿರಿಯ ಜೀವಗಳನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಬಾರದಿರಲಿ.

ಸೋಂಕು ನಿರ್ಲಕ್ಷ್ಯದ ಪರಿಣಾಮ ಕಳೆದ ವರ್ಷ ಜಿಲ್ಲೆಯಲ್ಲಿ ಐಸಿಯು ಬೆಡ್‌ ಹಾಗೂ ವೆಂಟಿಲೇಟರ್‌ಗಳ ಅಭಾವ ಎದುರಿಸಬೇಕಾಯಿತು. ಈ ಬಾರಿ ಸಾರ್ವಜನಿಕರು ಮತ್ತೆ ಮೈರೆತರೆ ಕಳೆದ ಬಾರಿಯ ಆಪತ್ತು ಎದುರಾಗಲಿದೆ. ಎಲ್ಲರೂ ಎಚ್ಚರದಿಂದ ಇರಬೇಕು ಎಂದು ಜಿಲ್ಲಾಧಿಕಾರಿ ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.