ADVERTISEMENT

ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಇಲ್ಲ

ಕೋವಿಶೀಲ್ಡ್‌ ಮೊದಲ ಡೋಸ್‌ ಪಡೆದ 947 ಮಂದಿಗೆ ಆದ್ಯತೆ ಮೇಲೆ ಲಸಿಕೆ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 4 ಮೇ 2021, 13:43 IST
Last Updated 4 ಮೇ 2021, 13:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಜಿಲ್ಲೆಯಲ್ಲಿ ಕೋವಿಶೀಲ್ಡ್‌ ಲಸಿಕೆಯ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲದಿರುವ ಕಾರಣ ಮೊದಲ ಡೋಸ್‌ ಪಡೆದು 8 ವಾರ ಮೀರಿದ 947 ಮಂದಿಗೆ ಆದ್ಯತೆ ಮೇರೆಗೆ ಲಸಿಕೆ ಹಾಕಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಎಂದು ಜಿಲ್ಲಾಧಿಕಾರಿ ಜಿ.ಜಗದಿಶ್ ತಿಳಿಸಿದ್ದಾರೆ.

ಮೊದಲ ಡೋಸ್ ಪಡೆದು 8 ವಾರ ಮೀರಿರುವವರಿಗೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಕರೆ ಮಾಡಿ ಲಸಿಕೆ ಪಡೆಯುವಂತೆ ಸೂಚನೆ ನೀಡಲಿದ್ದಾರೆ. ಮೊದಲ ಡೋಸ್ ಪಡೆದು ಅವಧಿ ಮೀರಿದವರು ಖುದ್ದು ಕರೆ ಮಾಡಿ 2ನೇ ಡೋಸ್ ಲಸಿಕೆ ಪಡೆಯಬಹುದು ತಿಳಿಸಿದ್ದಾರೆ.

ಕೋವ್ಯಾಕ್ಸಿನ್‌ ಇಲ್ಲ:

ADVERTISEMENT

ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಕೂಡ ಲಭ್ಯವಿರುವುದಿಲ್ಲ. ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಅಗತ್ಯ ಪ್ರಮಾಣದ ಲಸಿಕೆ ಸರಬರಾಜಾದ ತಕ್ಷಣ ಕೋವ್ಯಾಕ್ಸಿನ್‌ ಪ್ರಥಮ ಡೋಸ್ ಪಡೆದು 6 ವಾರ ಮೀರಿದವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು. 2ನೇ ಡೋಸ್ ಬಾಕಿ ಇರುವವರರಿಗೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಕರೆಮಾಡಿ ಲಸಿಕೆ ಪಡೆಯಲು ಸೂಚಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಮೊದಲ ಡೋಸ್‌ ಇಲ್ಲ:

ಲಸಿಕೆ ಅಭಾವದ ಕಾರಣ ಸದ್ಯಕ್ಕೆ ಮೊದಲ ಡೋಸ್‌ ಲಸಿಕೆ ಹಾಕುತ್ತಿಲ್ಲ. ಜಿಲ್ಲೆಗೆ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾದ ಬಳಿಕ ಪ್ರಥಮ ಡೋಸ್ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಆಸ್ಪತ್ರೆಗಳಿಗೆ ಹೋಗದೆ ಮನೆಯಲ್ಲಿ ಕಾಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಸರ್ಕಾರ ಅಗತ್ಯ ಪ್ರಮಾಣದ ಲಸಿಕೆಗಳನ್ನು ಖರೀದಿಸಿದೆ. ಲಸಿಕೆ ತಯಾರಿಕಾ ಕಂಪೆನಿಗಳಿಂದ ಲಸಿಕೆ ಪೂರೈಕೆಯಾದ ಬಳಿಕ 18 ವರ್ಷ ಮೇಲ್ಪಟ್ಟವರಿಗೆ ಹಾಕಲಾಗುವುದು. ಅಲ್ಲಿಯವರೆಗೂ selfregistration.cowin.gov.in ಅಥವಾ ಆರೋಗ್ಯ ಸೇತು ಆ್ಯಪ್‌ ಮೂಲಕ ಮೊಬೈಲ್ ಸಂಖ್ಯೆ ಬಳಸಿ ನೋಂದಣಿ ಮಾಡಿಕೊಳ್ಳಬಹುದು. ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾದಾಗ ಲಸಿಕಾ ಕೇಂದ್ರವನ್ನು ಆನ್‌ಲೈನ್ ಮೂಲಕ ಆಯ್ಕೆ ಮಾಡಿಕೊಳ್ಳಬಹದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

18 ರಿಂದ 44 ವರ್ಷದೊಳಗಿನ ಫಲಾನುಭವಿಗಳಿಗೆ ಆನ್‌ಲೈನ್ ನೋಂದಣಿ ಕಡ್ಡಾಯವಾಗಿರುತ್ತದೆ. ಆನ್‌ಸೈಟ್ ನೋಂದಣಿ ಲಭ್ಯವಿರುವುದಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯುವವರು ಕಡ್ಡಾಯವಾಗಿ ಆನ್‌ಲೈನ್ ನೋಂದಣಿ ಮಾಡಿಸಿಕೊಳ್ಳಬೇಕು. ಲಸಿಕೆ ಲಭ್ಯವಾದ ಕೂಡಲೇ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

‘ಕೈಗಾರಿಕಾ ಸಿಲಿಂಡರ್‌ಗಳನ್ನು ಮರಳಿಸಿ’

ಕೋವಿಡ್ ಎರಡನೇ ಅಲೆಯಿಂದ ಜನರ ಜೀವ ರಕ್ಷಿಸಬೇಕಾಗಿದ್ದು, ವೈದ್ಯಕೀಯ ಆಮ್ಲಜನಕ ಸಿಲಿಂಡರ್‌ಗಳ ಅವಶ್ಯಕತೆ ಹೆಚ್ಚಾಗಿದೆ. ಪ್ರಸ್ತುತ ವೈದ್ಯಕೀಯ ಪೂರೈಕೆಯ ಆಮ್ಲಜನಕ ಸಿಲಿಂಡರ್‌ಗಳ ಕೊರತೆ ಜಿಲ್ಲೆಯಲ್ಲಿ ಹೆಚ್ಚಾಗಿ ಕಾಡುತ್ತಿದೆ. ಈ ನಿಟ್ಟಿನಲ್ಲಿ ಕೈಗಾರಿಕಾ ಸಿಲಿಂಡರ್‌ಗಳನ್ನು ವೈದ್ಯಕೀಯ ಸಿಲಿಂಡರ್‌ಗಳನ್ನಾಗಿ ಮಾರ್ಪಡಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿರುವುದರಿಂದ, ಜಿಲ್ಲೆಯಲ್ಲಿ ಕೈಗಾರಿಕಾ ಸಿಲಿಂಡರ್‌ಗಳನ್ನು ಪಡೆದುಕೊಂಡು ವಶದಲ್ಲಿಟ್ಟುಕೊಂಡಿರುವ ಕಾರ್ಖಾನೆಗಳ ಮಾಲೀಕರು ಕೂಡಲೇ ಸಿಲಿಂಡರ್‌ಗಳನ್ನು ಸರಬರಾಜುದಾರರಿಗೆ ಹಿಂದಿರುಗಿಸಬೇಕು. ಇದರಿಂದ ವೈದ್ಯಕೀಯ ಆಮ್ಲಜನಕ ಸಿಲಿಂಡರ್‌ಗಳ ವ್ಯವಸ್ಥಿತ ಹಾಗೂ ಸುಗಮ ಪೂರೈಕೆಗೆ ಸಹಕಾರ ನೀಡಬೇಕು. ಕೋವಿಡ್ ರೋಗಿಗಳ ಆರೈಕೆಗೆ ನೆರವು ನೀಡಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.