ADVERTISEMENT

ಮದ್ಯ ಕುಡಿಸಿ ಸ್ನೇಹಿತನ ಕೊಲೆ: ಇಬ್ಬರಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 16:37 IST
Last Updated 22 ಜುಲೈ 2021, 16:37 IST
ರಾಜೇಂದ್ರ ನಾಯ್ಕ್
ರಾಜೇಂದ್ರ ನಾಯ್ಕ್   

ಉಡುಪಿ: ಅವಾಚ್ಯವಾಗಿ ನಿಂದಿಸಿದ ಕಾರಣಕ್ಕೆ ಸ್ನೇಹಿತನಿಗೆ ಅತಿಯಾಗಿ ಮದ್ಯ ಕುಡಿಸಿ ಕೊಲೆ ಮಾಡಿದ ರಾಜೇಂದ್ರ ನಾಯ್ಕ್‌ ಹಾಗೂ ಸಂತೋಷ್ ಪೂಜಾರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ.

ಈಚೆಗಷ್ಟೆ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ನ್ಯಾಯಾಧೀಶರಾದ ಜೆ.ಎನ್‌.ಸುಬ್ರಹ್ಮಣ್ಯ ತೀರ್ಪನ್ನು ಕಾಯ್ದಿರಿಸಿದ್ದರು. ಗುರುವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದಾರೆ.

ಪ್ರಕರಣದ ವಿವರ:ಪೆರ್ಣಂಕಿಲದ ರಾಜೇಂದ್ರ ನಾಯ್ಕ್ ಹಾಗೂ ಮೂಡುಬೆಳ್ಳೆ ಕಟ್ಟಿಂಗೇರಿಯ ಸಂತೋಷ್ ಪೂಜಾರಿ ಅವರ ಕುಟುಂಬದ ಸದಸ್ಯರಿಗೆ ಕೊಲೆಯಾದ ಆಂಡ್ರ್ಯೂ ಮಾರ್ಟಿಸ್ ಅಲಿಯಾಸ್‌ ಅಣ್ಣು ಅವಾಚ್ಯವಾಗಿ ನಿಂದಿಸುತ್ತಿದ್ದ. ಇದರಿಂದ ಕೋಪಗೊಂಡು ಇಬ್ಬರು ಸೇರಿ ಆ್ಯಂಡ್ರೂ ಕೊಲೆಗೆ ಸಂಚು ರೂಪಿಸಿದ್ದರು.

ADVERTISEMENT

2019 ಜ. 25ರಂದು ಮದ್ಯದಂಗಡಿಗೆ ಬಂದಿದ್ದ ಅಂಡ್ರ್ಯೂ ಮಾರ್ಟಿಸ್‌ಗೆ ವಿಪರೀತ ಮದ್ಯ ಕುಡಿಸಿ ಕಾಪು ತಾಲ್ಲೂಕಿನ ಕಟ್ಟಿಂಗೇರಿ ಗ್ರಾಮದ ತಾಕಡಬೈಲಿನ ಹಾಡಿಗೆ ಕರೆದೊಯ್ದು ಹಲ್ಲೆ ನಡೆಸಿ, ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.

ಕಾಪು ಇನ್‌ಸ್ಪೆಕ್ಟರ್ ಮಹೇಶ್‍ ಪ್ರಸಾದ್ ಪ್ರಕರಣದ ತನಿಖೆ ನಡೆಸಿದ್ದರು. ಇನ್‌ಸ್ಪೆಕ್ಟರ್ ಶಾಂತಾರಾಮ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 31 ಸಾಕ್ಷಿಗಳ ಪೈಕಿ ಪ್ರಮುಖ 12 ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶಾಂತಿಬಾಯಿ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.