ADVERTISEMENT

ಉಡುಪಿ: ಲಾಭದ ಆಸೆಗೆ ಸೈಬರ್‌ ಖೆಡ್ಡಾಕ್ಕೆ ಬೀಳದಿರಿ

ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಹೂಡಿಕೆ ಆಮಿಷವೊಡ್ಡಿ ಮೋಸ ಪ್ರಕರಣ: ಲಕ್ಷಾಂತರ ಹಣ ಲಪಟಾಯಿಸುತ್ತಿದ್ದಾರೆ ಆನ್‌ಲೈನ್‌ ವಂಚಕರು

ನವೀನ್‌ಕುಮಾರ್‌ ಜಿ.
Published 30 ಜೂನ್ 2025, 6:54 IST
Last Updated 30 ಜೂನ್ 2025, 6:54 IST
ಹರಿರಾಮ್‌ ಶಂಕರ್‌ 
ಹರಿರಾಮ್‌ ಶಂಕರ್‌    

ಉಡುಪಿ: ನಗರದ ವ್ಯಕ್ತಿಯೊಬ್ಬರನ್ನು ಅಪರಿಚಿತರು ವಾಟ್ಸ್ಆ್ಯಪ್ ಗ್ರೂಪ್‌ವೊಂದಕ್ಕೆ ಸೇರಿಸುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದೆಂದು ಆ ಗ್ರೂಪ್‌ನಲ್ಲಿ ಬಂದ ಸಂದೇಶವನ್ನು ನಂಬಿದ ಅವರು ಹಂತ ಹಂತವಾಗಿ ₹68.30 ಲಕ್ಷ ಹೂಡಿಕೆ ಮಾಡುತ್ತಾರೆ. ಕೊನೆಗೆ ಹೂಡಿಕೆ ಮಾಡಿದ ಹಣವೂ ವಾಪಸ್‌ ಬರಲಿಲ್ಲ. ಹೆಚ್ಚು ಲಾಭಾಂಶವೂ ಸಿಕ್ಕಿಲ್ಲ.

ಕಾಪುವಿನ ವ್ಯಾಪಾರಿಯೊಬ್ಬರು ಟೆಲಿಗ್ರಾಂ ಆ್ಯಪ್‌ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಕುರಿತ ಸಂದೇಶವನ್ನು ನಿಜವೆಂದು ನಂಬುತ್ತಾರೆ. ಅದರಲ್ಲಿ ಬಂದ ಲಿಂಕ್‌ನ ಮೂಲಕ ಮುಂದುವರಿದ ಅವರಿಗೆ ಅಪರಿಚಿತರು ₹600 ಕ್ಕೆ ₹660 ಲಾಭಾಂಶ ನೀಡಿದ್ದಾರೆ. ನಂತರ ವಿವಿಧ ಟಾಸ್ಕ್‌ ನೀಡಿ ಶೇ 60ರಷ್ಟು ಲಾಭಾಂಶ ನೀಡುವುದಾಗಿ ನಂಬಿಸಿ, ವ್ಯಾಪಾರಿಯಿಂದ ₹7.26 ಲಕ್ಷವನ್ನು ತಮ್ಮ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಲಾಭ ಬರಲು ತೆರಿಗೆ ಮೊತ್ತ ₹2 ಲಕ್ಷ ಕಟ್ಟಬೇಕು ಎಂದು ಅಪರಿಚಿತರು ಮತ್ತೆ ಹೇಳಿದಾಗ ವ್ಯಾಪಾರಿಗೆ ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಆದರೆ ಕಾಲ ಮಿಂಚಿತ್ತು.

ಇದು ವಾರದೊಳಗೆ ಜಿಲ್ಲೆಯ ಬೇರೆ ಬೇರೆ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ಹೂಡಿಕೆ ಹೆಸರಿನಲ್ಲಿ ನಡೆದ ಸೈಬರ್ ವಂಚನೆ ಪ್ರಕರಣಗಳಾಗಿವೆ. ಇದಲ್ಲದೆ ಬಗೆ ಬಗೆಯ ಹಲವು ಪ್ರಕರಣಗಳು ಜಿಲ್ಲೆಯಾದ್ಯಂತ ಪೊಲೀಸ್‌ ಠಾಣೆಗಳಲ್ಲಿ ಪ್ರತಿ ದಿನವೂ ದಾಖಲಾಗುತ್ತಲೇ ಇವೆ. ಸೈಬರ್‌ ವಂಚನೆಯ ಕುರಿತು ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಮೋಸ ಹೋಗುವವರ ಸಂಖ್ಯೆ ಕಡಿಮೆಯಾಗದಿರುವುದು ವಿಪರ್ಯಾಸ.

ADVERTISEMENT

ಸೈಬರ್‌ ವಂಚನೆಯ ರೂಪಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ. ಕೆಲ ತಿಂಗಳುಗಳ ಹಿಂದೆ ನಡೆಯುತ್ತಿದ್ದ ಡಿಜಿಟಲ್ ಅರೆಸ್ಟ್, ಒಟಿಪಿ ವಂಚನೆ ಪ್ರಕರಣಗಳ ಬಗ್ಗೆ ಜನರು ಜಾಗೃತರಾಗಿರುವುದರಿಂದ ಈಗ ಅಂತಹ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವ ಆಮಿಷವೊಡ್ಡಿ ಹಣ ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನುತ್ತವೆ ಸೈಬರ್‌, ಆರ್ಥಿಕ, ಮಾದಕ ಅಪರಾಧ (ಸೆನ್) ಪೊಲೀಸ್ ಠಾಣೆಯ ಮೂಲಗಳು.

ಹೆಚ್ಚಿನ ಪ್ರಕರಣಗಳನ್ನು ಗಮನಿಸಿದರೆ ಅಧಿಕ ಲಾಭ ಪಡೆಯಬೇಕೆಂಬ ದುರಾಸೆಯಿಂದಲೇ ಅನೇಕರು ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಈಗ ಯಾವುದೇ ಪೊಲೀಸ್‌ ಠಾಣೆಗಳಲ್ಲೂ ಸೈಬರ್‌ ಪ್ರಕರಣಗಳಿಗೆ ಸಂಬಂಧಿಸಿದ ದೂರಗಳನ್ನು ನೀಡಬಹುದು. ದೊಡ್ಡ ಮಟ್ಟದ ವಂಚನೆ ಪ್ರಕರಣಗಳಿದ್ದರೆ ಕೆಲವು ದೂರುದಾರರು ನೇರವಾಗಿ ಉಡುಪಿಯ ಸೆನ್‌ ಪೊಲೀಸ್‌ ಠಾಣೆ ಬಂದು ದೂರು ನೀಡುತ್ತಾರೆ.

ಸೆನ್‌ ಪೊಲೀಸ್‌ ಠಾಣೆಯೊಂದರಲ್ಲೇ ದಾಖಲಾಗಿರುವ ಪ್ರಕರಣಗಳ ವರ್ಷವಾರು ದತ್ತಾಂಶ ಗಮನಿಸಿದರೆ ಸೈಬರ್‌ ವಂಚನೆಯಿಂದ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಜನರು ಕಳೆದುಕೊಳ್ಳುತ್ತಿರುವ ಹಣದ ಮೊತ್ತ ಹೆಚ್ಚಾಗುತ್ತಲೇ ಇವೆ. ವಿದ್ಯಾವಂತರೇ ಸೈಬರ್‌ ವಂಚನೆಗೆ ಒಳಗಾಗುತ್ತಿರುವುದು ಕಳವಳಕಾರಿಯಾಗಿದೆ. ಬಹುತೇಕ ಆನ್‌ಲೈನ್‌ ವಂಚನೆ ಪ್ರಕರಣಗಳಲ್ಲಿ ಆರೋಪಿಗಳು ಪತ್ತೆಯಾಗುವುದೇ ಇಲ್ಲ.       

ಆನ್‌ಲೈನ್‌ ಮೂಲಕ ವಂಚನೆ ಮಾಡಿದ ಹಣವನ್ನು ವರ್ಗಾಹಿಸಲು ವಂಚಕರು ಮ್ಯೂಲ್‌ ಅಕೌಂಟ್‌ಗಳನ್ನು (ನಕಲಿ ಖಾತೆ) ಬಳಸುತ್ತಾರೆ. ಇದರಿಂದಾಗಿ ನಿಜವಾದ ವಂಚಕರನ್ನು ಪತ್ತೆ ಹಚ್ಚುವ ಕೆಲಸ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಉತ್ತರ ಭಾರತ ರಾಜ್ಯಗಳಾದ ಪಂಜಾಬ್‌, ಉತ್ತರ ಪ್ರದೇಶ, ಬಿಹಾರ ಮೊದಲಾದೆಡೆ ಅನಕ್ಷರಸ್ಥರನ್ನು ಬಳಸಿ ಅವರ ಹೆಸರಿನಲ್ಲಿ ವಂಚಕರು ಬ್ಯಾಂಕ್‌ ಖಾತೆಗಳನ್ನು ತೆರೆದು ವಂಚನೆ ನಡೆಸುತ್ತಾರೆ ಎನ್ನುತ್ತವೆ ಪೊಲೀಸ್‌ ಇಲಾಖೆ ಮೂಲಗಳು.

ಉಡುಪಿಯ ಸೆನ್‌ ಠಾಣೆಯ ಪೊಲೀಸರು ಡಿಜಿಟಲ್‌ ಅರೆಸ್ಟ್‌, ಆನ್‌ಲೈನ್‌ ವಂಚನೆಗೆ ಸಂಬಂಧಿಸಿದ ಕೆಲವು ಪ್ರಕರಣಗಳನ್ನು ಭೇದಿಸಿ  ಕೆಲವು ಆರೋಪಿಗಳನ್ನು ಈ ಹಿಂದೆ ಬಂಧಿಸಿದ್ದರು.  

ಸೈಬರ್‌ ವಂಚನೆಗೊಳಗಾದರೆ ಜನರು 1930 ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಅಥವಾ www.cybercrime.gov.in  ಸಂಪರ್ಕಿಸಬಹುದು.

‘ಹೂಡಿಕೆ ವಂಚನೆ ಹೆಚ್ಚಾಗುತ್ತಿದೆ’

ಷೇರು ಮಾರುಕಟ್ಟೆ ಹಾಗೂ ಕ್ರಿಪ್ಟೊ ಖಾತೆಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ನಂಬಿಸಿ ವಂಚಿಸುವ ಪ್ರಕರಣ ಸದ್ಯ ಹೆಚ್ಚಾಗಿವೆ. ಸೈಬರ್‌ ವಂಚನೆ ಬಗ್ಗೆ ಜಾಗೃತಿ ಇರುವವರು ವೈದ್ಯರು ಎಂಜಿನಿಯರ್‌ ಮೊದಲಾದವರೇ ಈ ವಂಚನೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ತಿಳಿಸಿದರು.

ಒಟಿಪಿ ಪಾರ್ಸೆಲ್‌ ವಂಚನೆ ಪ್ರಕರಣಗಳು ಈಗ ಕಡಿಮೆಯಾಗಿವೆ. ಈಗ ವಾಟ್ಸ್ಆ್ಯಪ್‌ ಟೆಲಿಗ್ರಾಂ ಮೂಲಕ ಹೂಡಿಕೆ ಆ್ಯಪ್‌ಗಳ ಎಪಿಕೆ ಫೈಲ್‌ಗಳನ್ನು ಕಳುಹಿಸಲಾಗುತ್ತದೆ. ಅದನ್ನು ಜನರು ಇನ್‌ಸ್ಟಾಲ್‌ ಮಾಡುತ್ತಾರೆ. ಆ ಆ್ಯಪ್‌ನಲ್ಲಿ ಹೂಡಿಕೆ ಮಾಡಿರುವ ಹಣ ಮತ್ತು ಲಾಭಾಂಶ ತೋರಿಸುತ್ತದೆ ಆದರೆ ಅದನ್ನು ವಾಪಸ್‌ ಪಡೆಯಲು ಸಾಧ್ಯವಾಗುವುದಿಲ್ಲ ಎಂದೂ ಹೇಳಿದರು.

ಸೈಬರ್‌ ವಂಚನೆ ಪ್ರಕರಣಗಳು ಹೆಚ್ಚಾಗಿರುವುದರಿಂದ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಮ್ಯೂಲ್‌ ಅಕೌಂಟ್‌ಗಳನ್ನು ಪತ್ತೆ ಮಾಡಲು ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ ನೀಡಿದೆ. ಸೈಬರ್‌ ವಂಚನೆ ಪ್ರಕರಣಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು.

ಉದ್ಯೋಗ ಆಮಿಷವೊಡ್ಡಿ ವಂಚನೆ

ಉದ್ಯೋಗಾವಕಾಶಗಳ ಕುರಿತು ಆನ್‌ಲೈನ್‌ನಲ್ಲಿ ಮಾಹಿತಿ ಹುಡುಕುವವರನ್ನೂ ಸೈಬರ್‌ ವಂಚಕರು ಮೋಸಕ್ಕೆ ಒಳಪಡಿಸುತ್ತಿರುವ ಪ್ರಕರಣಗಳು ಕೂಡ ದಾಖಲಾಗುತ್ತಿವೆ. ಕೆಲ ದಿನಗಳ ಹಿಂದೆ ಹಿರಿಯಡ್ಕದ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಮನೆಯಲ್ಲೇ ಕೆಲಸ ಮಾಡುವ ಕುರಿತ ಜಾಹೀರಾತನ್ನು ನೋಡಿ ಅದರಲ್ಲಿ ನೀಡಿದ್ದ ಲಿಂಕ್‌ ಮೂಲಕ ಸಂಪರ್ಕಿಸಿದಾಗ ಇ– ಕಾಮರ್ಸ್ ಪ್ರಾಡಕ್ಟ್‌ಗಳಿಗೆ ರೇಟಿಂಗ್‌ ನಿಡುವ ಟಾಸ್ಕ್‌ ನೀಡಿದ್ದರು. ಅಲ್ಲದೆ ಮಹಿಳೆಯ ಖಾತೆಗೆ ₹300 ಹಾಕಿದ್ದರು. ಬಳಿಕ ಅವರನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಸೇರಿಸಿ ಹೆಚ್ಚು ಲಾಭ ನೀಡುವ ಆಮಿಷವೊಡ್ಡಿ ಹಂತ ಹಂತವಾಗಿ ₹5.62 ಲಕ್ಷ ಪಡೆದು ವಂಚಿಸಿದ್ದರು.

ಅಪಾಯಕಾರಿ ಎಪಿಕೆ ಫೈಲ್‌

ವಾಟ್ಸ್ಆ್ಯಪ್‌ಗಳಲ್ಲಿ ಬರುವ ಎಪಿಕೆ ಫೈಲ್‌ ಅನ್ನು ತೆರೆಯುವ ಮೂಲಕ ಹಲವರು ಹಣ ಕಳೆದುಕೊಂಡಿರುವ ಪ್ರಕರಣಗಳು ಜಿಲ್ಲೆಯಲ್ಲೂ ನಡೆದಿವೆ. ಗಂಗೊಳ್ಳಿಯ ವ್ಯಕ್ತಿಯೊಬ್ಬರ ವಾಟ್ಸ್‌ಆ್ಯಪ್‌ಗೆ ಕೆಲ ದಿನಗಳ ಹಿಂದೆ ಎಪಿಕೆ ಫೈಲೊಂದು ಬಂದಿತ್ತು. ಅದನ್ನು ತೆರೆದಾಗ ಅವರ ಸಿಮ್ ಬ್ಲಾಕ್‌ ಆಗಿತ್ತು. ಬ್ಲಾಕ್‌ ಆಗಿದ್ದ ಮೊಬೈಲ್‌ ಸಂಖ್ಯೆಯನ್ನು ಸರಿಪಡಿಸಿ ಆ ಸಂಖ್ಯೆಯ ಜೊತೆ ಲಿಂಕ್‌ ಆಗಿದ್ದ ಬ್ಯಾಂಕ್‌ ಖಾತೆಯನ್ನು ಪರಿಶೀಲಿಸಿದಾಗ ಬ್ಯಾಂಕ್‌ ಖಾತೆಯಿಂದ  ₹77 ಸಾವಿರ ಕಡಿತವಾಗಿರುವುದು ಗಮನಕ್ಕೆ ಬಂದಿದೆ.

ವಾಟ್ಸ್‌ಆ್ಯಪ್‌ ಹ್ಯಾಕ್‌

ವಾಟ್ಸ್‌ಆ್ಯಪ್ ಹ್ಯಾಕ್‌ ಮಾಡಿ ಹಣ ವಂಚಿಸಿರುವ ಪ್ರಕರಣಗಳು ಈಗಲೂ ನಡೆಯುತ್ತಿವೆ. ಈಚೆಗೆ ಬೈಂದೂರಿನ ಮಹಿಳೆಯೊಬ್ಬರಿಗೆ ಅವರ ಪರಿಚಯದ ವೈದ್ಯರ ವಾಟ್ಸ್ಆ್ಯಪ್‌ ಸಂಖ್ಯೆಯಿಂದ ತಕ್ಷಣ ₹45 ಸಾವಿರ ಕಳುಹಿಸುವಂತೆ ಮೆಸೇಜ್‌ ಬಂದಿತ್ತು. ಅದನ್ನು ನಂಬಿದ್ದ ಮಹಿಳೆ ₹20 ಸಾವಿರವನ್ನು ಮೆಸೇಜ್ ಬಂದಿದ್ದ ವಾಟ್ಸ್‌ಆ್ಯಪ್‌ ಸಂಖ್ಯೆಗೆ ಗೂಗಲ್‌ ಪೇ ಮಾಡಿದ್ದರು. ಮತ್ತೆ ₹20 ಸಾವಿರ ಹಾಕುವಂತೆ ಮೆಸೇಜ್‌ ಬಂದಾಗ ಅನುಮಾನಗೊಂಡ ಅವರು ವೈದ್ಯರಿಗೆ ಕರೆ ಮಾಡಿ ವಿಚಾರಿಸಿದಾಗ ಅವರ ವಾಟ್ಸ್ಆ್ಯಪ್‌ ಹ್ಯಾಕ್‌ ಆಗಿರುವ ವಿಚಾರ ಗೊತ್ತಾಗಿದೆ.

ದಿನಸಿ ಖರೀದಿದಾರನಿಗೆ ವಂಚನೆ

ಹೋಂ ಪ್ರಾಡಕ್ಟ್‌ ಸಿದ್ಧ ಮಾಡಲು ದಿನಸಿ ಸಾಮಾಗ್ರಿ ಖರೀದಿಸಲು ಶಿರ್ವದ ವ್ಯಕ್ತಿಯೊಬ್ಬರು ಗೂಗಲ್‌ನಲ್ಲಿ ಸರ್ಚ್‌ ಮಾಡಿದ್ದರು. ಅದರಲ್ಲಿ ಸಿಕ್ಕಿದ ಇಂಡಿಯಾ ಮಾರ್ಟ್‌ ಎಂಬ ಆ್ಯಪ್‌ನವರಿಗೆ ಕರೆ ಮಾಡಿದ್ದರು. ಬಳಿಕ ಅವರು ನೀಡಿದ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದಾಗ ವ್ಯಕ್ತಿಯೊಬ್ಬರು ಕರೆ ಸ್ವೀಕರಿಸಿ ದಿನಸಿ ಸಾಮಗ್ರಿ ಕಳುಹಿಸುವುದಾಗಿ ನಂಬಿಸಿ ₹24 ಸಾವಿರ ಪಡೆದು ಇನ್‌ವಾಯ್ಸ್ ನೀಡಿದ್ದರು. ಆದರೆ ದಿನಸಿ ಸಾಮಗ್ರಿ ಕಳುಹಿಸಿರಲಿಲ್ಲ. ಮತ್ತೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್‌ ಆಫ್‌ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.