ಪಡುಬಿದ್ರಿ: ‘ತನ್ನ ಗಂಡ ವಾಟ್ಸ್ಆ್ಯಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಪುತ್ರಿಯ ಖಾಸಗಿ ವಿಡಿಯೊಗಳನ್ನು ಹರಿಬಿಟ್ಟಿದ್ದು, ತನಗೆ ಜೀವ ಬೆದರಿಕೆ ಹಾಕಿದ್ದಾನೆ. ಆತನ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಮಹಿಳೆಯೊಬ್ಬರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಆರೋಪಿಯ ಪುತ್ರಿ ಹಾಗೂ ಬೇರೆ ಊರಿನಲ್ಲಿರುವ ಸಂಬಂಧಿ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಆರೋಪಿ ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ಮನೆಯಲ್ಲಿ ಆಗಾಗ್ಗೆ ಜಗಳವಾಗುತಿತ್ತು. ಮಗಳು ಪ್ರೀತಿಸುತ್ತಿದ್ದ ಯುವಕನನ್ನು ಮನೆಗೆ ಕರೆಸಿದ ಆರೋಪಿ, ಆತನಿಗೆ ಹಲ್ಲೆ ನಡೆಸಿ ಆತನ ಮೊಬೈಲ್ ಕಿತ್ತುಕೊಂಡಿದ್ದಾನೆ. ಈ ಕುರಿತಾಗಿ ಪತ್ನಿಯು ಆಕ್ಷೇಪಿಸಿದಾಗ ತನ್ನ ಹಾಗೂ ಮಗಳ ಮೇಲೂ ಹಲ್ಲೆ ನಡೆಸಿದ್ದಾನೆ. ಯುವಕನ ಮೊಬೈಲ್ ವಾಪಸ್ ನೀಡದೆ ಅದರಲ್ಲಿದ್ದ ವಿಡಿಯೊಗಳನ್ನು ತನ್ನ ಮೊಬೈಲ್‌ಗೆ ವರ್ಗಾಯಿಸಿ, ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಘಟನೆಯಿಂದ ಮನನೊಂದ ಯುವತಿ ಫಿನಾಯಿಲ್ ಕುಡಿದು ಅಸ್ವಸ್ಥಳಾಗಿದ್ದು, ಆಕೆಯನ್ನು ಉಡುಪಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗಳ ಖಾಸಗಿತನಕ್ಕೆ ಧಕ್ಕೆ ತಂದಿರುವುದಾಗಿ ಮಹಿಳೆ ಆರೋಪಿಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.