ADVERTISEMENT

ಕಡೊಲ್ಕೊರೆತ: ಮರವಂತೆಯಲ್ಲಿ ರಸ್ತೆಗೆ ₹ 3 ಕೋಟಿ

ಮುಂಗಾರು ವಿಪತ್ತು ಎದುರಿಸಲು ಅಧಿಕಾರಿಗಳ ಜತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 14:00 IST
Last Updated 19 ಜೂನ್ 2021, 14:00 IST
ರಾಜ್ಯದ ಉತ್ತರ ಒಳನಾಡು, ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಮುಂಗಾರು ಸಂದರ್ಭ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಎಸ್‌ಪಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.
ರಾಜ್ಯದ ಉತ್ತರ ಒಳನಾಡು, ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಮುಂಗಾರು ಸಂದರ್ಭ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಎಸ್‌ಪಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.   

ಉಡುಪಿ: ಜಿಲ್ಲೆಯಲ್ಲಿ ತೌತೆ ಚಂಡಮಾರುತದಿಂದ ಉಂಟಾದ ಕಡಲ್ಕೊರೆತದಿಂದ ಹಾನಿಗೊಳಗಾದ ಬೈಂದೂರು ತಾಲ್ಲೂಕು ಮರವಂತೆಯ 1.5 ಕಿ.ಮೀ ರಸ್ತೆಯ ನಿರ್ಮಾಣಕ್ಕೆ ತಕ್ಷಣ ₹ 3 ಕೋಟಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದರು.

ಗೃಹ ಕಚೇರಿ ಕೃಷ್ಣಾದಿಂದ ಶನಿವಾರ ರಾಜ್ಯದ ಉತ್ತರ ಒಳನಾಡು, ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಮುಂಗಾರು ಸಂದರ್ಭ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಎಸ್‌ಪಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಈಚೆಗೆ ತೌತೆ ಚಂಡಮಾರುತದಿಂದ ಮರವಂತೆಯಲ್ಲಿ 1.5 ಕಿಮೀ ರಸ್ತೆ ಹಾನಿಯಾಗಿರುವ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾಧಿಕಾರಿ ಜಿ.ಜಗದೀಶ್ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ADVERTISEMENT

ಹಾಳಾದ ರಸ್ತೆಯನ್ನು ಸಂಪೂರ್ಣ ಕಾಂಕ್ರೀಟ್ ರಸ್ತೆಯನ್ನಾಗಿ ನಿರ್ಮಿಸುವಂತೆ ಸೂಚಿಸಿದ ಮುಖ್ಯಮಂತ್ರಿ, ಕಾಮಗಾರಿಗೆ ₹ 3 ಕೋಟಿ ಅನುದಾನ ಬಿಡುಗಡೆಗೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದರು. ಜಿಲ್ಲೆಯಲ್ಲಿ ನೆರೆ ಹಾನಿಗೆ ಅಗತ್ಯ ಪರಿಹಾರವನ್ನು ಹಂತಹಂತವಾಗಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದರು.

ಜಿಲ್ಲೆಯಲ್ಲಿ 770 ಮಿ.ಮೀ ಇದುವರೆಗಿನ ವಾಡಿಕೆ ಮಳೆಯಾಗಿದ್ದು, ಪ್ರತಿಯಾಗಿ 1,243 ಮಿ.ಮೀ ಮಳೆ ಸುರಿದಿದೆ. ಶೇ 61 ಅಧಿಕ ಮಳೆಯಾಗಿದೆ. ತೌತೆ ಚಂಡಮಾರುತ ಹಾಗೂ ಮಳೆಯಿಂದಾಗಿ 476 ಮನೆಗಳಿಗೆ ಹಾಗೂ 15 ಕೊಟ್ಟಿಗೆಗಳಿಗೆ ಹಾನಿಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಜೀವಹಾನಿಗೆ ₹ 5 ಲಕ್ಷ ಪರಿಹಾರವನ್ನು ಮೆಸ್ಕಾಂನಿಂದ ನೀಡಲಾಗಿದೆ.

ಜಿಲ್ಲೆಯ ವಿಪತ್ತು ಪರಿಹಾರ ನಿಧಿಯಲ್ಲಿ ₹ 7.80 ಕೋಟಿ ಇದ್ದು, ಹಣದ ಕೊರತೆ ಇಲ್ಲ. ಮಳೆಗಾಲದಲ್ಲಿ ತುರ್ತು ನೆರವಿಗೆ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ 24X7 ಕಂಟ್ರೋಲ್ ರೂಂ ತೆರೆದು, ಸ್ಪಂದಿಸಲಾಗುತ್ತಿದೆ. ವಿಪತ್ತು ನಿರ್ವಹಣೆಗೆ ಎಲ್ಲ ತಾಲ್ಲೂಕುಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಯೋಜನೆ ರೂಪಿಸಿ, ಟಾಸ್ಕ್‌ ಫೋರ್ಸ್‌ ರಚಿಸಲಾಗಿದೆ. ಮಂಗಳೂರಿನಲ್ಲಿರುವ ಎನ್‌ಡಿಆರ್‌ಎಫ್‌ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಳೆಯಿಂದ ಸಂಭವಿಸುವ ವಿಪತ್ತುಗಳನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮುಖ್ಯಮಂತ್ರಿಗಳಿಗೆ ವಿವರ ನೀಡಿದರು.

ವಿಡಿಯೋ ಸಂವಾದದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಎಸ್‌ಪಿ ವಿಷ್ಣುವರ್ಧನ್, ನಕ್ಸಲ್ ನಿಗ್ರಹ ಪಡೆಯ ಎಸ್‌ಪಿ ನಿಖಿಲ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.