ADVERTISEMENT

ಸಾಲ ಮರುಪಾವತಿ: ಸ್ವಸಹಾಯ ಸಂಘಗಳು ಮುಂದು: ಎಸ್‌.ರಮೇಶ್‌

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2018, 14:09 IST
Last Updated 20 ಸೆಪ್ಟೆಂಬರ್ 2018, 14:09 IST
ಹಣಕಾಸು ನಿರ್ವಹಣೆಯ ಕಾರ್ಯಗಾರವನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನರ್ಬಾಡ್‌ ಎಜಿಎಂ ಎಸ್‌.ರಮೇಶ್‌ ಉದ್ಘಾಟಿಸಿದರು.ಪ್ರಜಾವಾಣಿ ಚಿತ್ರ
ಹಣಕಾಸು ನಿರ್ವಹಣೆಯ ಕಾರ್ಯಗಾರವನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನರ್ಬಾಡ್‌ ಎಜಿಎಂ ಎಸ್‌.ರಮೇಶ್‌ ಉದ್ಘಾಟಿಸಿದರು.ಪ್ರಜಾವಾಣಿ ಚಿತ್ರ   

ಉಡುಪಿ:ಜಿಲ್ಲೆಯ ಸ್ವ–ಸಹಾಯ ಸಂಘಗಳು ಸಾಲ ಮರುಪಾವತಿ ಮಾಡುವಲ್ಲಿ ಮೂಂಚೂಣಿ ಸ್ಥಾನದಲ್ಲಿದೆ ಎಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನರ್ಬಾಡ್‌ ಎಜಿಎಂ ಎಸ್‌.ರಮೇಶ್‌ ತಿಳಿಸಿದರು.

ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟ ಬೆಂಗಳೂರು ಆಶ್ರಯದಲ್ಲಿ ಗುರುವಾರ ಪ್ರಗತಿಸೌಧದಲ್ಲಿ ಆಯೋಜಿಸಿದ್ದ ಕಿರು ಹಣಕಾಸು ವ್ಯವಹಾರ ಮಾಡುತ್ತಿರುವ ಪಾಲುದಾರರಿಗೆ ಹಣಕಾಸು ನಿರ್ವಹಣೆಯ ಕಾರ್ಯಾಗಾರ ಹಾಗೂ ಗ್ರಾಹಕರ ಕುಂದುಕೊರತೆ, ದೂರು ನಿವಾರಣಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೊಡ್ಡ ಉದ್ಯಮಿಗಳು ಸಾಲ ಮರುಪಾವತಿ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ಆದರೆ, ಸ್ವ–ಸಹಾಯ ಸಂಘಗಳ ಸದಸ್ಯರು ಎಷ್ಟೇ ಕಷ್ಟವಾದರೂ ಸರಿಯಾದ ಸಮಯಕ್ಕೆ ಮರುಪಾವತಿ ಮಾಡುತ್ತಾರೆ. ಆ ಮೂಲಕ ಸ್ವಸಹಾಯ ಸಂಘಗಳು ಬ್ಯಾಂಕಿಂಗ್‌ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ನೀಡಲು ಉತ್ಸುಕತೆ ತೋರಿಸುತ್ತಿವೆ ಎಂದು ಹೇಳಿದರು.

ADVERTISEMENT

ಉಡುಪಿ ಹಾಗೂ ದಕ್ಷಿಣ ಕನ್ನಡದ ಜಿಲ್ಲೆಯ ಒಟ್ಟು ಸಾಲದಲ್ಲಿ ಶೇ 50ರಷ್ಟು ಸಾಲವನ್ನು ಸ್ವ–ಸಹಾಯ ಸಂಘಗಳು ಪಡೆದುಕೊಂಡಿದೆ. ದೇಶದಲ್ಲಿ ಸ್ವ–ಸಹಾಯ ಸಂಘಗಳಿಗೆ ಸಾಲ ನೀಡುವಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದುಕೊಂಡಿದೆ. ರಾಜ್ಯದಲ್ಲಿ ಒಟ್ಟು 7 ಲಕ್ಷ ಸ್ವಸಹಾಯ ಗುಂಪುಗಳಿವೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ಎ.ಕೆ.ಎಂ.ಐ ಬಿ.ಪಾಮಾಡಿ ಮಾತನಾಡಿ, ರಾಜ್ಯದಲ್ಲಿ ಒಟ್ಟು 28 ಸಂಸ್ಥೆಗಳಿದ್ದು, ಉಡುಪಿ ಜಿಲ್ಲೆಯ 8 ಸಂಸ್ಥೆಗಳಿಂದ ₹ 1.43 ಲಕ್ಷ ಜನರು ಖಾತೆಯನ್ನು ಹೊಂದಿದ್ದಾರೆ. ಸುಮಾರು ₹ 663 ಕೋಟಿ ಸಾಲ ಪಡೆದುಕೊಂಡಿದ್ದಾರೆ. ಅದರಲ್ಲಿ ₹ 17,000 ಮಾತ್ರ ವಿವಿಧ ಕಾರಣದಿಂದ ಪಾವತಿಯಾದೆ ಉಳಿದುಕೊಂಡಿದೆ. ಕಿರುಸಾಲ ಯೋಜನೆಯಿಂದ ಮಹಿಳೆಯರು ಶೋಷಣೆ ಮುಕ್ತರಾಗಿ ಸ್ವತಂತ್ರರಾಗಲು ಸಾಧ್ಯವಾಗಲಿದೆ. ಇತರೆಡೆಯಿಂದ ಅಧಿಕ ಬಡ್ಡಿದರದಲ್ಲಿ ಸಾಲಪಡೆದು ಶೋಷಣೆಗೆ ಒಳಗಾಗುವುದು ತಪ್ಪಲಿದೆ ಎಂದರು.

ಸಿಂಡಿಕೇಟ್‌ ಲೀಡ್‌ ಬ್ಯಾಂಕಿನ ಚೀಫ್‌ ಮ್ಯಾನೇಜರ್‌ ಡಿ.ಸಿ ರುದ್ರೇಶ್‌, ಎ.ಕೆ.ಎಂ.ಐ ಸಿಇಓ ವಿ.ವೆನ್‌ ಹೆಗ್ಡೆ ಉಪಸ್ಥಿತರಿದ್ದರು. ಎಸ್‌.ಕೆ.ಡಿ.ಆರ್‌.ಡಿ.ಪಿ ನಿರ್ದೇಶಕ ಪಿ.ಕೆ ಪುರುಷೋತ್ತಮ ಸ್ವಾಗತಿಸಿದರು. ಮಮತ ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.