ADVERTISEMENT

ಸಮ್ಮಿಶ್ರ ಸರ್ಕಾರದ ಸಾಲ ಋಣಮುಕ್ತ ಕಾಯ್ದೆಯಡಿ ಉಡಪಿಯಲ್ಲಿ 20,971 ಅರ್ಜಿ ಸಲ್ಲಿಕೆ

ಆತಂಕದಲ್ಲಿ ದಿನದೂಡುತ್ತಿರುವ ಸಾಲ ಕೊಟ್ಟವರು, ಪಡೆದವರು

ಬಾಲಚಂದ್ರ ಎಚ್.
Published 21 ನವೆಂಬರ್ 2019, 19:46 IST
Last Updated 21 ನವೆಂಬರ್ 2019, 19:46 IST
   

ಉಡುಪಿ: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಾರಿಯಾದ ‘ಋಣಮುಕ್ತ ಕಾಯ್ದೆ’ಯಡಿ ಸಾಲ ಮನ್ನಾ ಪ್ರಯೋಜನ ಪಡೆಯಲು ಜಿಲ್ಲೆಯಲ್ಲಿ 20,971 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಋಣಮುಕ್ತ ಕಾಯ್ದೆಯ ವಿರುದ್ಧ ರಾಜ್ಯ ಜ್ಯುವೆಲರ್ಸ್ ಅಸೋಸಿಯೇಷನ್‌ ಹಾಗೂ ಗಿರವಿ ವ್ಯಾಪಾರಿಗಳ ಸಂಘ ಕೋರ್ಟ್‌ ಮೊರೆ ಹೋಗಿರುವುದರಿಂದ ಸಾಲ ಕೊಟ್ಟವರು ಹಾಗೂ ಸಾಲ ಪಡೆದವರು ಆತಂಕದ ದಿನಗಳನ್ನು ಎಣಿಸುತ್ತಿದ್ದಾರೆ.

ಒಂದೆಡೆ, ಪಡೆದ ಸಾಲ ಮನ್ನಾ ಆಗುವುದೇ, ಅಡವಿಟ್ಟ ಚಿನ್ನಾಭರಣ, ಆಸ್ತಿಯ ಪತ್ರ ಮರಳಿ ಕೈಸೇರುವುದೇ ಎಂಬ ಚಿಂತೆಯಲ್ಲಿ ಸಾಲಗಾರರು ಇದ್ದರೆ, ಮತ್ತೊಂದೆಡೆ, ಹೈಕೋರ್ಟ್‌ ತೀರ್ಪು ವಿರುದ್ಧವಾಗಿ ಬಂದರೆ ಮುಂದೇನು ಎಂಬ ಆತಂಕದಲ್ಲಿ ಲೇವಾದೇವಿದಾರರು ಹಾಗೂ ಗಿರವಿದಾರರು ಇದ್ದಾರೆ.‌

ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಸಾಲ ಪಡೆದ ಹೆಚ್ಚಿನವರು ಮರುಪಾವತಿ ನಿಲ್ಲಿಸಿದ್ದಾರೆ. ಪರಿಣಾಮ ಅಸಲು ಹಾಗೂ ಬಡ್ಡಿ ಬೆಳೆಯುತ್ತಲೇ ಇದೆ. ಒಂದು ವೇಳೆ ಕಾಯ್ದೆಯ ವಿರುದ್ಧ ತೀರ್ಪು ಬಂದರೆ ಸಾಲದ ಹೊರೆ ಒಮ್ಮೆಲೆ ಮೈಮೇಲೆ ಬೀಳುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸಾಲ ಪಡೆದವರು.

ADVERTISEMENT

ಹೈಕೋರ್ಟ್ ನಿರ್ದೇಶನದಂತೆ ಕ್ರಮ: ಕಾಯ್ದೆ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿರುವುದರಿಂದ ಸದ್ಯ ಯಾವನಿರ್ಧಾರ ತೆಗೆದುಕೊಳ್ಳದಂತೆ ಸರ್ಕಾರ ಸೂಚಿಸಿದೆ. ನ್ಯಾಯಾಲಯದ ಆದೇಶ ಹಾಗೂ ಸರ್ಕಾರದ ಸೂಚನೆ ಬಂದ ನಂತರ ಅರ್ಜಿಗಳ ವಿಲೇವಾರಿ ನಡೆಯಲಿದೆ ಎಂದು ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ತಿಳಿಸಿದರು.

ಜುಲೈ 23ರಂದು ಋಣಮುಕ್ತ ಕಾಯ್ದೆ ಜಾರಿಯಾಯಿತು. ಸೆಪ್ಟೆಂಬರ್‌ನಿಂದ ಅಕ್ಟೋಬರ್‌ 22ರವರೆಗೂ ಅರ್ಜಿ ಸ್ವೀಕರಿಸಲಾಗಿದೆ. ಸಲ್ಲಿಕೆಯಾದ 20,971 ಅರ್ಜಿಗಳ ಪರಿಶೀಲನೆ ಶೀಘ್ರನಡೆಯಲಿದೆ. ಈ ಪ್ರಕ್ರಿಯೆಯಲ್ಲಿ ಸಾಲಮನ್ನಾ ಯೋಜನೆ ವ್ಯಾಪ್ತಿಗೊಳಪಡುವ ಅರ್ಹ ಅರ್ಜಿಗಳನ್ನು ಗುರುತಿಸಲಾಗುವುದು ಎಂದು ಎಸಿ ವಿವರಿಸಿದರು.

ಮಾಹಿತಿ ಕೊರತೆ: ಅನರ್ಹ ಅರ್ಜಿಗಳೇ ಹೆಚ್ಚು: ಸರ್ಕಾರದ ‘ಋಣ ಮುಕ್ತ ಕಾಯ್ದೆ’ಯ ಕುರಿತು ಸಾರ್ವಜನಿಕರು ಸರಿಯಾದ ಮಾಹಿತಿ ಪಡೆಯದ ಪರಿಣಾಮ ಅನರ್ಹ ಅರ್ಜಿಗಳು ಹೆಚ್ಚಾಗಿ ಸಲ್ಲಿಕೆಯಾಗಿವೆ. ಎಲ್ಲ ಸಾಲವೂ ಮನ್ನಾ ಆಗಲಿದೆ ಎಂದು ಹೆಚ್ಚಿನವರು ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಖಾಸಗಿ, ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಸಹಕಾರ ಸಂಘಗಳಲ್ಲಿ ಸಾಲ ಮಾಡಿರುವವರೂ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳು ಅನರ್ಹವಾಗಲಿವೆ. ಕೇವಲ ಖಾಸಗಿ ಲೇವಾದೇವಿದಾರರು ಹಾಗೂ ಗಿರವಿದಾರರಿಂದ ಪಡೆದ ಸಾಲ ಮಾತ್ರ ಋಣಮುಕ್ತ ಕಾಯ್ದೆಯಡಿ ಮನ್ನಾ ಆಗಲಿದೆ ಎಂದು ಉಪ ವಿಭಾಗಾಧಿಕಾರಿ ರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.