
ಉಡುಪಿ: ಕೃಷ್ಣ ಮಠದಲ್ಲಿ ಉತ್ಥಾನದ್ವಾದಶಿ ಹಿನ್ನೆಲೆಯಲ್ಲಿ ಶುಕ್ರವಾರ ಲಕ್ಷ ದೀಪೋತ್ಸವ ನಡೆಯಿತು. ರಥಬೀದಿ ದೀಪಗಳ ಸಾಲುಗಳಿಂದ ಸಿಂಗಾರಗೊಂಡು ಕಣ್ಮನ ಸೆಳೆಯುತ್ತಿತ್ತು.
ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅಷ್ಟಮಠಾಧೀಶರೊಂದಿಗೆ ರಥಬೀದಿಯಲ್ಲಿ ಒಪ್ಪವಾಗಿ ಜೋಡಿಸಲಾಗಿದ್ದ ಅಟ್ಟಣಿಗೆಯಲ್ಲಿ ದೀಪಗಳನ್ನು ಇರಿಸಿ ಹಣತೆ ಹಚ್ಚಿ ದೀಪೋತ್ಸವಕ್ಕೆ ಚಾಲನೆ ನೀಡಿದರು.
ಪಲಿಮಾರು ಮಠಾಧೀಶರಾದ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕಾಣಿಯೂರು ಮಠಾಧೀಶರಾದ ವಿದ್ಯವಲ್ಲಭ ತೀರ್ಥ ಸ್ವಾಮೀಜಿ, ಅದಮಾರು ಮಠಾಧೀಶರಾದ ಈಶಪ್ರಿಯ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಕಿರಿಯ ಯತಿ ವಿದ್ಯಾ ರಾಜೇಶ್ವರ ತೀರ್ಥ ಸ್ವಾಮೀಜಿ, ಶೀರೂರು ಮಠಾಧೀಶರಾದ ವೇದವರ್ಧನ ತೀರ್ಥ ಸ್ವಾಮೀಜಿ ಹಣತೆಗಳನ್ನು ಹಚ್ಚಿ ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಂಡರು.
ಸಂಜೆ ಮಧ್ವಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ಅಷ್ಠಮಠಗಳ ಯತಿಗಳು ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ ಕ್ಷೀರಾಬ್ಧಿಯನ್ನು ನೆರವೇರಿಸಿದರು.
ಭಾಗೀರಥಿ ಜಯಂತಿಯ ಸಂದರ್ಭ ಗರ್ಭಗುಡಿ ಸೇರುವ ಕೃಷ್ಣನ ಉತ್ಸವ ಮೂರ್ತಿಯನ್ನು 177 ದಿನಗಳ ಬಳಿಕ ಉತ್ಥಾನ ದ್ವಾದಶಿಯ ದಿನವಾದ ಶುಕ್ರವಾರ ಹೊರಗೆ ತಂದು ಪೂಜೆ ಸಲ್ಲಿಸಲಾಯಿತು. ಉತ್ಸವಾದಿ ಪೂಜೆಗಳು ನಡೆದ ಬಳಿಕ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಯಿತು. ನ. 27ರವರೆಗೂ ಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರಮೌಳೀಶ್ವರ ರಥೋತ್ಸವದೊಂದಿಗೆ ಲಕ್ಷ ದೀಪೋತ್ಸವ ನಡೆಯಲಿದ್ದು ಸಹಸ್ರಾರು ಭಕ್ತರು ಭಾಗವಹಿಸಲಿದ್ದಾರೆ.
ತುಳಸಿ ಪೂಜೆ ಸಂಭ್ರಮ: ದೀಪಾವಳಿ ಆಚರಣೆಯ ನಂತರ ಆಚರಿಸುವ ತುಳಸಿಪೂಜೆ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು. ಮನೆಯ ಮುಂದಿನ ತುಳಸಿಕಟ್ಟೆಗೆ ದೀಪಗಳಿಂದ ಅಲಂಕರಿಸಿ, ಕಾಡು ನೆಲ್ಲಿಯ ಗಿಡ ಇರಿಸಿ ಪೂಜೆ ಸಲ್ಲಿಸಲಾಯಿತು. ಬಾನಲ್ಲಿ ಪಟಾಕಿಯ ಸದ್ದು ಜೋರಾಗಿತ್ತು. ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.