ADVERTISEMENT

ಉಡುಪಿ | ಪ್ರಜಾಪ್ರಭುತ್ವ ದಿನಾಚರಣೆ; ಸಿದ್ಧತೆ ನಡೆಸಿ: ಜಿಲ್ಲಾಧಿಕಾರಿ ಸೂಚನೆ

ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 5:07 IST
Last Updated 11 ಸೆಪ್ಟೆಂಬರ್ 2025, 5:07 IST
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು   

ಉಡುಪಿ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುವ ವಿವಿಧ ಕಾರ್ಯಕ್ರಮಗಳನ್ನು ಇಲಾಖೆಗಳ ಸಹಯೋಗದೊಂದಿಗೆ ಯಶಸ್ವಿಗೊಳಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದರು.

ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದೇ 15ರಂದು ನಡೆಯಲಿರುವ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನನ್ನ ಮತ ನನ್ನ ಹಕ್ಕು ಎಂಬ ಧ್ಯೇಯ ವಾಕ್ಯದಡಿ ಜಿಲ್ಲಾ ಮಟ್ಟದಲ್ಲಿ ಚಿತ್ರಕಲೆ, ಛಾಯಾಚಿತ್ರ, ಭಾಷಣ ಸ್ಪರ್ಧೆ, ಸೈಕಲ್ ರ‍್ಯಾಲಿ ಹಾಗೂ ಮೋಟಾರ್ ಬೈಕ್ ರ‍್ಯಾಲಿಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಎಲ್ಲಾ ಸ್ಪರ್ಧೆಗಳ ಯಶಸ್ಸಿಗೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದರು.

ನನ್ನ ಮತ ನನ್ನ ಹಕ್ಕು, ಗಾಂಧಿ ಭಾರತ ಹಾಗೂ ಸಂವಿಧಾನ ಪೀಠಿಕೆ ಎಂಬ ಶೀರ್ಷಿಕೆಯಡಿ ಶಿಕ್ಷಣ ಇಲಾಖೆಯ ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ 6,7 ಮತ್ತು 8 ನೇ ತರಗತಿ ಹಾಗೂ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಲಾಗುತ್ತಿದ್ದು, ಆಯ್ಕೆಯಾದ ಅರ್ಹ ಮೂವರು ವಿದ್ಯಾರ್ಥಿಗಳಿಗೆ ನವೆಂಬರ್ 14ರ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು. ಪದವಿ ವಿದ್ಯಾರ್ಥಿಗಳಿಗೆ ಛಾಯಾಚಿತ್ರ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ಅತ್ಯುತ್ತಮ ಮೂವರು ವಿದ್ಯಾರ್ಥಿಗಳಿಗೆ ನವೆಂಬರ್ 26 ರ ಸಂವಿಧಾನ ದಿನಾಚರಣೆಯಂದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

15 ರಂದು ನಗರದ ಅಜ್ಜರಕಾಡು ಮಹತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಂವಿಧಾನ ಪೀಠಿಕೆ ಬೋಧನೆ ಕಾರ್ಯಕ್ರಮ ನಡೆಯಲಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ನಂತರ ಸೈಕಲ್ ರ‍್ಯಾಲಿಗೆ ಚಾಲನೆ ನೀಡಲಾಗುವುದು ಎಂದರು.

ಅಂದು ಬೆಂಗಳೂರಿನಲ್ಲಿ ನಡೆಯುವ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ 10 ಅನುಭವಿ ಬೈಕ್ ರೈಡರ್ಗಳು ಭಾಗವಹಿಸಲು ಅವಕಾಶವಿದ್ದು, ಅನುಭವಿ ಬೈಕ್ ರೈಡರ್‌ಗಳ ಮಾಹಿತಿ ನೀಡುವುದರೊಂದಿಗೆ ಒಂದು ದಿನ ಮುಂಚಿತವಾಗಿ ಹೊರಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಪ್ರವಾಸೋದ್ಯಮ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಎಸ್. ಕದ್ರೋಳಿ, ಸಹಾಯಕ ಆಯುಕ್ತೆ ರಶ್ಮಿ, ಪೌರಾಯುಕ್ತ ಮಹಾಂತೇಶ ಹಂಗರಗಿ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.