ADVERTISEMENT

ಸಕಾಲದಲ್ಲಿ ಸೇವೆ ನೀಡದಿದ್ದರೆ ಇಲಾಖಾ ವಿಚಾರಣೆ: ಕೆ.ಮಥಾಯ್

'ಸಕಾಲ ಯೋಜನೆ ಬಲಗೊಳಿಸಲು ಸರ್ಕಾರದಿಂದ ಕಠಿಣ ನಿಯಮಗಳ ಅಳವಡಿಕೆ'

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 13:27 IST
Last Updated 15 ಅಕ್ಟೋಬರ್ 2018, 13:27 IST
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಸಕಾಲ ಜನಜಾಗೃತಿ’ ಕಾರ್ಯಕ್ರಮದಲ್ಲಿ ಸಕಾಲ ಮಿಷನ್ ಆಡಳಿತಾಧಿಕಾರಿ ಕೆ.ಮಥಾಯ್ ಮಾತನಾಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಸಕಾಲ ಜನಜಾಗೃತಿ’ ಕಾರ್ಯಕ್ರಮದಲ್ಲಿ ಸಕಾಲ ಮಿಷನ್ ಆಡಳಿತಾಧಿಕಾರಿ ಕೆ.ಮಥಾಯ್ ಮಾತನಾಡಿದರು.   

ಉಡುಪಿ: ಕಾಲಮಿತಿಯೊಳಗೆ ಸೇವೆಗಳನ್ನು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಸಕಾಲ’ ಯೋಜನೆಯನ್ನು ಜಾರಿಗೆ ತಂದಿದೆ. ಮಧ್ಯವರ್ತಿಗಳ ಕಿರಿಕಿರಿ ಇಲ್ಲದೆ ನೇರವಾಗಿ ಅಧಿಕಾರಿಗಳಿಂದ ಸೇವೆ ಪಡೆದುಕೊಳ್ಳಬಹುದು ಎಂದು ಸಕಾಲ ಮಿಷನ್ ಆಡಳಿತಾಧಿಕಾರಿ ಕೆ.ಮಥಾಯ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಸಕಾಲ ಜನಜಾಗೃತಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಕಾಲ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ನಿರ್ಧಿಷ್ಟ ಅವಧಿಯಲ್ಲಿ ತ್ವರಿತ ಸೇವೆ ನೀಡುವುದು ಪ್ರಮುಖ ಉದ್ದೇಶ. ಒಂದುವೇಳೆ ಕಾಲಮಿತಿಯೊಳಗೆ ಸೇವೆ ನೀಡದಿದ್ದರೆ, ಅಧಿಕಾರಿಗೆ ದಂಡ ವಿಧಿಸಲು ಅವಕಾಶವಿದೆ’ ಎಂದು ಮಾಹಿತಿ ನೀಡಿದರು.

ಮಾಹಿತಿ ನೀಡುವ ಅವಧಿ ಮೀರಿದರೆ, ಪ್ರತಿದಿನಕ್ಕೆ ₹ 20ನಂತೆ ಅಧಿಕಾರಿಯಿಂದ ದಂಡ ವಸೂಲು ಮಾಡಿ ಅರ್ಜಿದಾರರಿಗೆ ನೀಡಲಾಗುವುದು. ಸೇವೆ ನೀಡಲು ವಿಳಂಬ ಮಾಡಿದರೆ, ನಿರಾಕರಿಸಿದೆ ಗೊತ್ತುಪಡಿಸಿದ ಅಧಿಕಾರಿ ವಿರುದ್ಧ ಮೇಲಧಿಕಾರಿಗೆ ದೂರು ಸಲ್ಲಿಸಬಹುದು ಎಂದು ತಿಳಿಸಿದರು.

ADVERTISEMENT

ರಾಜ್ಯದಲ್ಲಿ 897 ಸೇವೆಗಳನ್ನು ‘ಸಕಾಲ’ದಡಿ ಸೇರಿಸಲಾಗಿದೆ. ರಾಜ್ಯದ ಮಾದರಿಯನ್ನು ಇತರ ರಾಜ್ಯಗಳು ಅಳವಡಿಸಿಕೊಳ್ಳುತ್ತಿವೆ. ಬಾಂಗ್ಲಾದೇಶದ ಜಿಲ್ಲಾಧಿಕಾರಿಗಳ ತಂಡ ಈಚೆಗೆ ಭಾರತಕ್ಕೆ ಬಂದು ಸಕಾಲ ಯೋಜನೆಯ ತರಬೇತಿ ಪಡೆದು, ಅನುಷ್ಠಾನಗೊಳಿಸಿದೆ ಎಂದರು.

ಸಕಾಲ ಯೋಜನೆಗೆ ಪ್ರಧಾನಮಂತ್ರಿ ಎಕ್ಸಲೆನ್ಸ್ ಅವಾರ್ಡ್‌, ಕಾಮನ್‌ವೆಲ್ತ್ ರಾಷ್ಟ್ರಗಳ ಪ್ರಶಸ್ತಿ, ಗೂಗಲ್ ಇನ್ನೋವೇಟಿವ್ ಅವಾರ್ಡ್‌ ಮನ್ನಣೆ ದೊರೆತಿದೆ ಎಂದು ಶ್ಲಾಘಿಸಿದರು.

ಸಕಾಲ ಕೌಂಟರ್‌ನಲ್ಲಿ ಅರ್ಜಿ ದಾಖಲಿಸಿದರೆ, ತಕ್ಷಣ ಅರ್ಜಿದಾರರ ಮೊಬೈಲ್‌ಗೆ 15 ನೋಂದಣಿ ಸಂಖ್ಯೆಯನ್ನೊಳಗೊಂಡ ಸಂದೇಶ ಬರುತ್ತದೆ. ಈ ಸಂಖ್ಯೆ ಬಹುಮುಖ್ಯವಾಗಿದ್ದು, ಮುಂದಿನ ಎಲ್ಲ ಹಂತಗಳಲ್ಲಿ ಮಾಹಿತಿ ಪಡೆಯಲು ನೆರವಿಗೆ ಬರುತ್ತದೆ. ಸೇವೆ ವಿಳಂಬವಾದರೆ, ನಿರಾಕರಿಸಿದರೆ ಅಧಿಕರಿಗಳ ವಿರುದ್ಧ ದೂರು ನೀಡಲು ಸಹಾಯವಾಗುತ್ತದೆ ಎಂದರು.

ಬಹುತೇಕ ಜಿಲ್ಲೆಗಳಲ್ಲಿ ಸಾರ್ವಜನಿಕರು ಸಕಾಲ ಕೌಂಟರ್‌ನಲ್ಲಿ ಸೇವೆ ಪಡೆಯುತ್ತಿಲ್ಲ. ಪರಿಣಾಮ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಮಧ್ಯವರ್ತಿಗಳಿಗೆ ಹಣಕೊಟ್ಟು ಸೇವೆಗಳನ್ನು ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ವ್ಯವಸ್ಥೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮಥಾಯ್ ತಿಳಿಸಿದರು.

ಎಲ್ಲ ಸರ್ಕಾರಿ ಕಚೇರಿಗಳ ಪ್ರಮುಖ ಸ್ಥಳಗಳಲ್ಲಿ ಸಕಾಲ ಜಾಹೀರಾತು ಪ್ರದರ್ಶನ ಮಾಡಬೇಕು. ಯಾವ ಸೇವೆಗಳು ಲಭ್ಯವಿದೆ. ಎಷ್ಟು ಅವಧಿಯಲ್ಲಿ ಸೇವೆ ಸಿಗಲಿದೆ. ಯಾವ ಇಲಾಖೆಯನ್ನು ಸಂಪರ್ಕಿಸಬೇಕು ಎಂಬ ವಿವರಗಳನ್ನೊಳಗೊಂಡ ಫಲಕವನ್ನು ಹಾಕಲು ಸೂಚನೆ ನೀಡಲಾಗಿದೆ ಎಂದರು.

080–44554455 ನಂಬರ್‌ಗೆ ಕರೆ ಮಾಡಿದರೆ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಬಹದು. ಜತೆಗೆ, www.sakala.kar.nic ವೆಬ್‌ಸೈಟ್‌ನಲ್ಲೂ ಮಾಹಿತಿ ಪಡೆಯಬಹುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯದರ್ಶಿ ನಾಗೇಶ್‌ ರಾಯ್ಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.