ADVERTISEMENT

ಫಲಾನುಭವಿಗಳ ಸಂಖ್ಯೆ ಹೆಚ್ಚಿಸಿ, ಇಲ್ಲವೇ ಯೋಜನೆಯನ್ನೇ ನಿಲ್ಲಿಸಿ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 14:09 IST
Last Updated 23 ಜನವರಿ 2025, 14:09 IST
ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮ, ಒಕ್ಕಲಿಗರ ಅಭಿವೃದ್ಧಿ ನಿಗಮ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಮದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿದರು
ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮ, ಒಕ್ಕಲಿಗರ ಅಭಿವೃದ್ಧಿ ನಿಗಮ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಮದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿದರು   

ಬೈಂದೂರು: ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ, ಒಕ್ಕಲಿಗರ ಅಭಿವೃದ್ಧಿ ನಿಗಮ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧಿಕಾರಿಗಳ ಸಭೆ ತಾಲ್ಲೂಕು ಕಚೇರಿಯಲ್ಲಿ ಗುರುವಾರ ನಡೆಯಿತು.

ವಿವಿಧ ಯೋಜನೆಗಳ ಸವಲತ್ತು ಪಡೆಯಲು ಅರ್ಜಿ ಹಾಕಿರುವ ಫಲಾನುಭವಿಗಳ ಆಯ್ಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಗುರುರಾಜ್ ಗಂಟಿಹೊಳೆ, ಫಲಾನುಭವಿಗಳಿಗೆ ಶೀಘ್ರ ಸೌಲಭ್ಯ ದೊರಕಿಸಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿವಿಧ ಸಮುದಾಯಗಳ ಅಭಿವೃದ್ಧಿಗೆ ಇರುವ ನಿಗಮಗಳಲ್ಲಿ ಅನುಷ್ಠಾನಗೊಳ್ಳುವ ಸಾಲ ಸೌಲಭ್ಯ ಯೋಜನೆಗಳು ಅರ್ಹರೆಲ್ಲರಿಗೂ ತಲುಪಲು ವಿಫಲವಾಗಿದೆ. ಪ್ರತಿಯೊಂದು ಯೋಜನೆಯಡಿ ನೂರಾರು ಅರ್ಜಿಗಳು ಆನ್‌ಲೈನ್‌ನಲ್ಲಿ ದಾಖಲಾಗಿದ್ದರೂ, ಬೆರಳೆಣಿಕೆ ಗುರಿ ನಿಗದಿಪಡಿಸುತ್ತಿರುವ ಕಾರಣ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳನ್ನು ಆಯ್ಕೆ ಮಾಡಲು ಸಮಿತಿಗೆ ಸಾಧ್ಯವಾಗುತ್ತಿಲ್ಲ. ಅರ್ಜಿಗಳಿಗೆ ಒಂದಂಕಿಯ ಗುರಿ ನಿಗದಿ ಪಡಿಸುವುದು ಅವೈಜ್ಞಾನಿಕ. ಇಂತಹ ಪರಿಸ್ಥಿತಿ ಇರುವಾಗ ಆಯ್ಕೆ ಸಮಿತಿಯೇ ಅಪ್ರಸ್ತುತ ಎಂದು ಕಿಡಿಕಾರಿದರು.

ADVERTISEMENT

ಅರ್ಹರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಯೋಚಿಸಬೇಕು ಹಾಗೂ ಮೇಲಧಿಕಾರಿಗಳಿಗೆ ವರದಿ ಮಾಡಬೇಕು. ಪ್ರತಿ ಯೋಜನೆಯಡಿಯಲ್ಲಿ ವರ್ಷಕ್ಕೆ ಕನಿಷ್ಠ 10 ಫಲಾನುಭವಿಗಳ ಆಯ್ಕೆಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಆ ಯೋಜನೆಯನ್ನೇ ಸರ್ಕಾರ ರದ್ದು ಪಡಿಸುವುದು ಉತ್ತಮ ಎಂದು ಹೇಳಿದರು.

ಪ್ರತಿವರ್ಷ ಹೊಸದಾಗಿ ಅರ್ಜಿ ಸಲ್ಲಿಸುವ ಬದಲು, ಈ ಹಿಂದೆ ಸೌಲಭ್ಯ ದೊರಕದೆ ಇರುವವರ ಅರ್ಜಿಗಳು ಮುಂದಿನ ವರ್ಷಗಳಲ್ಲಿ ಪರಿಗಣನೆಗೆ ಬರುವ ಹಾಗೇ ಆನ್‌ಲೈನ್ ತಂತ್ರಾಂಶದಲ್ಲಿ ಅಗತ್ಯ ಬದಲಾವಣೆ ಮಾಡಲು ಕ್ರಮವಹಿಸುವುದರ ಮೂಲಕ ಅರ್ಜಿದಾರರ ಹಣ ಹಾಗೂ ಶ್ರಮ ವ್ಯರ್ಥವಾಗುವುದನ್ನು ತಪ್ಪಿಸುವಂತಾಗಬೇಕು ಎಂದರು.

ಸಭೆಯಲ್ಲಿ ಡಿ.ದೇವರಾಜು ಅರಸು ಅಭಿವೃದ್ಧಿ ನಿಗಮ, ಒಕ್ಕಲಿಗರ ನಿಗಮ ಹಾಗೂ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಹಾಗೂ ಆಯ್ಕೆ ಸಮಿತಿಯ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.