ಉಡುಪಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆಯ ಸಹಯೋಗದೊಂದಿಗೆ ಮಾಜಿ ಸಚಿವ ದಿ. ಡಾ. ವಿ.ಎಸ್. ಆಚಾರ್ಯ ಅವರ ಜಯಂತಿಯ ಪ್ರಯುಕ್ತ ಅಂತರರಾಷ್ಟ್ರೀಯ ಸಹಕಾರ ವರ್ಷಾಚರಣೆ ‘ಏಕ್ ಪೇಡ್ ಮಾ ಕೆ ನಾಮ್’ ಕಾರ್ಯಕ್ರಮ ಮಣಿಪಾಲದ ಪ್ರಗತಿ ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಈಚೆಗೆ ಜರುಗಿತು.
ಅಧ್ಯಕ್ಷತೆ ವಹಿಸಿದ್ದ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ 48 ಸಾವಿರ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಮಕ್ಕಳು ಎಳವೆಯಲ್ಲಿಯೇ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಮಣಿಪಾಲ ಕೆಎಂಸಿ ವೈದ್ಯ ಡಾ. ಕಿರಣ್ ಆಚಾರ್ಯ ಮಾತನಾಡಿ, ನಮ್ಮ ಪರಿಸರಕ್ಕೆ ಸೂಕ್ತವಾದ ಹಣ್ಣು ಮತ್ತು ಹೂ ಕೊಡುವ ಗಿಡಗಳನ್ನು ಹೆಚ್ಚು ನೆಡಬೇಕು. ಇದರಿಂದ ಪರಿಸರವೂ ಸುಂದರವಾಗಿ ಕಾಣುತ್ತದೆ. ಪ್ರಾಣಿ ಪಕ್ಷಿಗಳಿಗೂ ಆಶ್ರಯ ತಾಣವಾಗುತ್ತದೆ. ಹಾಗಂತ ಅಕೇಶದಂತಹ ವಿನಾಶಕಾರಿ ಗಿಡಗಳನ್ನು ನೆಡಬಾರದು ಎಂದು ಹೇಳಿದರು.
ಅಲೆವೂರು ಗ್ರಾ.ಪಂ. ಅಧ್ಯಕ್ಷ ಯತೀಶ್ ಕುಮಾರ್, ಜಿಲ್ಲಾ ಸ್ಕೌಟ್ಸ್ ಆಯುಕ್ತ ಜನಾರ್ದನ ಕೊಡವೂರು, ಗೈಡ್ಸ್ ಆಯುಕ್ತೆ ಜ್ಯೋತಿ ಪೈ, ಕೆನರಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಮೋಹನ್ ಉಪಾಧ್ಯ, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್, ಉಡುಪಿ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಕೊಡವೂರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ಬಲ್ಲಾಳ್ ಉಪಸ್ಥಿತರಿದ್ದರು.
ತೇಜಸ್ ನಿರೂಪಿಸಿದರು. ಅನುಷಾ ಕೋಟ್ಯಾನ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.