ಕಾಪು (ಪಡುಬಿದ್ರಿ): ‘ಈ ಬಾರಿ ಕಾಪು ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಬಹುತೇಕ ರಸ್ತೆಗಳು, ಮನೆಗಳು ಮತ್ತು ಬೆಳೆ ಹಾನಿಯಾಗಿದೆ. ಸ್ಥಳೀಯ ಆಡಳಿತ ಸಮರೋಪಾದಿಯಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಸರ್ಕಾರದಿಂದ ಪ್ರಕೃತಿ ವಿಕೋಪ ನಿಧಿಯಡಿ ಪರಿಹಾರ ದೊರಕಿಸಿಕೊಡುವ ಕಾರ್ಯ ನಡೆಯುತ್ತಿದೆ. ಆದರೆ, ಕಾಪು ಕ್ಷೇತ್ರದ ಶಾಸಕರು ಇದುವರೆಗೂ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಆಸಕ್ತಿ ವಹಿಸದೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ನನಗೆ ಅನುದಾನ ಸಿಗುತ್ತಿಲ್ಲ ಎಂಬ ಸಿದ್ಧ ಉತ್ತರ ನೀಡುತ್ತಾರೆ’ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಟೀಕಿಸಿದರು.
ಸೋಮವಾರ ಕಾಪುವಿನ ರಾಜೀವ್ ಭವನದಲ್ಲಿ ನಡೆದ, ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ಕ್ಷೇತ್ರದ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿರುವ ಶಾಸಕರು ಅನುದಾನದ ಕೊರತೆಯ ಸಬೂಬು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಹಾಸ್ಯಾಸ್ಪದ’ ಎಂದರು.
‘ಬಿಜೆಪಿಯವರಿಗೆ ನಕಲಿ ಹಿಂದುತ್ವವೊಂದೇ ಮತಗಳಿಸಲು ಬಂಡವಾಳವಾಗಿತ್ತು. ನೈಜ ಹಿಂದೂಗಳು ಬಿಜೆಪಿಗರ ನಕಲಿ ಹಿಂದುತ್ವವನ್ನು ತಿರಸ್ಕರಿಸಿದ್ದಾರೆ ಎನ್ನುವುದು ಈಗ ಸಾಬೀತಾಗಿದೆ’ ಎಂದರು.
ಬ್ಲಾಕ್ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಕಟಪಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಗೆ ನೂತನವಾಗಿ ನೇಮಕಗೊಂಡ ಮಹೇಶ್ ಪೂಜಾರಿಗೆ ನೇಮಕಾತಿ ಆದೇಶ ನೀಡಿ ಅಭಿನಂದಿಸಲಾಯಿತು.
ಈಚೆಗೆ ನಿಧನರಾದ ಕಾಂಗ್ರೆಸ್ ಮುಖಂಡ ದೇಜು ಪೂಜಾರಿ ಮೂಳೂರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾಪು ದಿವಾಕರ್ ಶೆಟ್ಟಿ, ಶಿವಾಜಿ ಸುವರ್ಣ ಬೆಳ್ಳೆ, ವಿಕ್ರಂ ಕಾಪು, ಶರ್ಫುದ್ದೀನ್ ಶೇಖ್, ಗೀತಾ ವಾಗ್ಲೆ, ವಿನಯ್ ಬಲ್ಲಾಳ್, ಪ್ರಶಾಂತ್ ಜತ್ತನ್ನ, ರಾಜೇಶ್ ರಾವ್, ಹಸನಬ್ಬ ಶೇಖ್, ನವೀನ್ ಎನ್. ಶೆಟ್ಟಿ, ರಮೀಜ್ ಹುಸೇನ್, ಕೆ. ಎಚ್. ಉಸ್ಮಾನ್, ಅಶೋಕ್ ನಾಯರಿ ಮತ್ತಿತರರು ಇದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಮೊಹಮ್ಮದ್ ಸ್ವಾಗತಿಸಿದರು, ಸುನಿಲ್ ಡಿ. ಬಂಗೇರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.