ADVERTISEMENT

ಉಡುಪಿ: ದೇವಸ್ಥಾನಗಳತ್ತ ಹರಿದು ಬಂದ ಭಕ್ತರು, ಸುರಕ್ಷತೆ ಮರೆತರು

ದೇಗುಲಗಳಲ್ಲಿ ಪೂಜೆ, ಉತ್ಸವ, ಸೇವೆಗಳು ಪುನರಾರಂಭ; ಕೋವಿಡ್‌ ಮಾರ್ಗಸೂಚಿ ಪಾಲನೆ

ಬಾಲಚಂದ್ರ ಎಚ್.
Published 28 ನವೆಂಬರ್ 2020, 19:31 IST
Last Updated 28 ನವೆಂಬರ್ 2020, 19:31 IST
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ   

ಉಡುಪಿ: ಕೋವಿಡ್‌–19 ಕಾರಣದಿಂದ ಬಾಗಿಲು ಮುಚ್ಚಿದ್ದ ಧಾರ್ಮಿಕ ಕ್ಷೇತ್ರಗಳು ಈಗ ಭಕ್ತರ ಪ್ರವೇಶಕ್ಕೆ ಮುಕ್ತವಾಗಿವೆ. ಸಾಲು ಸಾಲು ಹಬ್ಬಗಳ ಬಳಿಕ ಧಾರ್ಮಿಕ ಕ್ಷೇತ್ರಗಳು ಭಕ್ತರಿಂದ ಗಿಜಿಗುಡುತ್ತಿವೆ. ಕೋವಿಡ್ ಪೂರ್ವದಲ್ಲಿ ನಡೆಯುತ್ತಿದ್ದಂತೆ ಪೂಜೆ, ಸೇವೆ, ಉತ್ಸವಗಳು ಪುನರಾರಂಭಗೊಂಡಿವೆ. ಕುಸಿದಿದ್ದ ದೇವಸ್ಥಾನಗಳ ಆದಾಯವೂ ಏರಿಕೆ ಕಾಣುತ್ತಿದೆ. ಇವೆಲ್ಲವುಗಳ ನಡುವೆ ಭಕ್ತರು ಕೋವಿಡ್‌ ಸುರಕ್ಷತಾ ಕ್ರಮಗಳ ಪಾಲನೆಯ ಬಗ್ಗೆ ಅಸಡ್ಡೆ ತೋರುತ್ತಿರುವುದು ಎದ್ದು ಕಾಣುತ್ತಿದೆ.‌

6 ತಿಂಗಳ ಕಾಲ ಮುಚ್ಚಿದ್ದ ಕೃಷ್ಣಮಠ ಸೆ.28ರಿಂದ ಭಕ್ತರ ಪ್ರವೇಶಕ್ಕೆ ತೆರೆದುಕೊಂಡಿದೆ. ಆರಂಭದಲ್ಲಿ ಮಧ್ಯಾಹ್ನ 2 ರಿಂದ 5ರವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸೋಂಕಿನ ಪ್ರಮಾಣ ಕ್ಷೀಣವಾಗುತ್ತಿರುವ ಹಿನ್ನೆಲೆಯಲ್ಲಿ ಸಧ್ಯ ಕೃಷ್ಣಮಠದಲ್ಲಿ ಬೆಳಿಗ್ಗೆ 8.30ರಿಂದ 10ರವರೆಗೆ ಮಧ್ಯಾಹ್ನ 2 ರಿಂದ 6ರವರೆಗೆ ದೇಗುಲ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ಪರ್ಯಾಯ ಪೀಠವೇರುವ ಯತಿಗಳು ಮಾತ್ರ ಕೃಷ್ಣನ ಪೂಜೆ ಮಾಡುವ ಸಂಪ್ರದಾಯ ಶತಮಾನಗಳಿಂದ ಕೃಷ್ಣಮಠದಲ್ಲಿ ನಡೆದುಕೊಂಡು ಬಂದಿದ್ದು, ಈ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಮಠದಲ್ಲಿ ಕೋವಿಡ್‌ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ತೆಗೆದುಕೊಳ್ಳಲಾಗಿದೆ. ಮಾಸ್ಕ್ ಇಲ್ಲದೆ ದೇಗುಲ ಪ್ರವೇಶಕ್ಕೆ ಅವಕಾಶವಿಲ್ಲ. ಜತೆಗೆ, ದಟ್ಟಣೆಗೆ ಅವಕಾಶ ನೀಡದಂತೆ ನಿರ್ಧಿಷ್ಟ ಸಂಖ್ಯೆಯ ಭಕ್ತರನ್ನು ಮಾತ್ರ ದರ್ಶನಕ್ಕೆ ಒಳಬಿಡಲಾಗುತ್ತಿದೆ.

ADVERTISEMENT

ಗರ್ಭಗುಡಿಯ ಗೋಡೆ ಮುಟ್ಟದಂತೆ, ಮಂತ್ರೋಚ್ಛಾರ ಮಾಡದಂತೆ, ಸ್ಯಾನಿಟೈಸರ್ ಬಳಸುವಂತೆ, ದೈಹಿಕ ಅಂತರ ಕಾಯ್ದುಕೊಳ್ಳುವಂತೆ ಸಿಬ್ಬಂದಿ ಸೂಚನೆ ನೀಡುತ್ತಿದ್ದಾರೆ. ಆದರೂ ವಾರದ ಕೊನೆಯ ದಿನಗಳಲ್ಲಿ ಹಾಗೂ ಉತ್ಸವಗಳ ಸಂದರ್ಭ ಭಕ್ತರಿಂದ ನಿಯಮಗಳ ಪಾಲನೆಯಾಗದಿರುವುದು ಕಂಡುಬರುತ್ತಿದೆ.

ಎಂದಿನಂತೆ ಪೂಜೆ, ಉತ್ಸವ:ಕೃಷ್ಣಮಠದಲ್ಲಿ ಪೂಜೆ, ಉತ್ಸವಗಳು ಹಿಂದಿನಂತೆ ನಡೆಯುತ್ತಿವೆ. ಲಾಕ್‌ಡೌನ್ ಅವಧಿಯಲ್ಲೂ ಪ್ರತಿದಿನ ದೇವರಿಗೆ ಮಹಾಪೂಜೆ ನೇರವೇರಿದೆ. ಸಾವಿರಾರು ಮಂದಿ ಸೇರಿ ಆಚರಿಸಲ್ಪಡುತ್ತಿದ್ದ ಉತ್ಸವಗಳು, ರಥೋತ್ಸವಗಳು ಮಠದ ಆವರಣದೊಳಗೆ ಅರ್ಚಕರು, ಸಿಬ್ಬಂದಿ ಹಾಗೂ ಸೀಮಿತ ಸಂಖ್ಯೆ ಭಕ್ತರ ಸಮ್ಮುಖದಲ್ಲಿ ನಡೆಯುತ್ತಿವೆ. ಕೋವಿಡ್‌ ಪೂರ್ವದಲ್ಲಿ ನಡೆಯುತ್ತಿದ್ದ ಬಹುತೇಕ ಸೇವೆಗಳು ಆರಂಭವಾಗಿವೆ. ಭಕ್ತರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ ಎನ್ನುತ್ತಾರೆ ಮಠದ ವ್ಯವಸ್ಥಾಪಕ ಗೋವಿಂದರಾಜ್‌.

ಕೊಲ್ಲೂರಿನಲ್ಲಿ ಭಕ್ತರ ಸಂಖ್ಯೆ ಹೆಚ್ಚಳ:ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸೆ.7ರಿಂದ ಧಾರ್ಮಿಕ ಸೇವೆಗಳು ಆರಂಭಗೊಂಡಿವೆ. ಆರಂಭದಲ್ಲಿ ಕಡಿಮೆಯಿದ್ದ ಭಕ್ತರ ಸಂಖ್ಯೆ ಈಗ ಏರಿಕೆಯಾಗಿದ್ದು, ವಾರದ ಕೊನೆಯ ಮೂರು ದಿನಗಳಲ್ಲಿ ದಟ್ಟಣೆ ಹೆಚ್ಚು ಕಂಡುಬರುತ್ತಿದೆ. ದಿನಂಪ್ರತಿ ಚಂಡಿಕಾ ಹೋಮಗಳು ನಡೆಯುತ್ತಿದೆ. ವಿವಿಐಪಿ ಭಕ್ತರು, ರಾಜಕಾರಣಿಗಳು ಹಿಂದಿನಂತೆ ದೇವಸ್ಥಾನಕ್ಕೆ ಬಂದು ಪೂಜೆ, ಹರಕೆ, ಹೋಮದಲ್ಲಿ ಭಾಗವಹಿಸುತ್ತಿದ್ದಾರೆ.

ದೇವಸ್ಥಾನದಲ್ಲಿ ಸ್ಯಾನಿಟೈಸರ್ ಬಳಕೆ ಹಾಗೂ ಉಷ್ಣತೆ ಪರೀಕ್ಷೆ ನಡೆಯುತ್ತಿದ್ದರೂ, ಅಂತರ ಪಾಲನೆ ಹಾಗೂ ಮಾಸ್ಕ್ ಧಾರಣೆ ಕಡ್ಡಾಯವಾಗಿ ನಡೆಯುತ್ತಿಲ್ಲ. ಕೆಲವೊಮ್ಮೆ ಭಕ್ತರ ನೂಕು ನುಗ್ಗಲು ಉಂಟಾಗುತ್ತಿದೆ. ಧ್ವನಿ ವರ್ಧಕದಲ್ಲಿ ನಿಯಮ ಪಾಲನೆಗೆ ಸೂಚನೆ ನೀಡುತ್ತಿದ್ದರೂ ನಿರೀಕ್ಷಿತ ಉಪಯೋಗವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ದೇವಸ್ಥಾನದ ಸಿಬ್ಬಂದಿ.

ಕುಂಭಾಸಿ ಆನೆಗುಡ್ಡೆ ದೇವಸ್ಥಾನದಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಎಲ್ಲ ಸೇವೆಗಳು ನಡೆಯುತ್ತಿದೆ. ಸಂಕ್ರಾಂತಿ, ಸಂಕಷ್ಟಿಯ ದಿನ ಭಕ್ತರು ಹೆಚ್ಚಿರುತ್ತಾರೆ. ಕೋವಿಡ್‌ ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಿದ್ದರೂ ಪೂರ್ಣ ಪ್ರಮಾಣದಲ್ಲಿ ಪಾಲನೆಯಾಗದಿರುವುದು ಕಂಡುಬರುತ್ತಿದೆ.

ಮಂದಾರ್ತಿಯಲ್ಲೂ ಜನಜಂಗುಳಿ:ಮಂದಾರ್ತಿಯ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಕೋವಿಡ್ ಮಾರ್ಗಸೂಚಿಯನ್ವಯ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಶಾಲಾ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗದ ಕಾರಣ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ದೇವಸ್ಥಾನದಲ್ಲಿ ಮೊದಲಿನಂತೆಯೇ ಎಲ್ಲ ಸೇವೆಗಳು ನಡೆಯುತ್ತಿವೆ. ಭೋಜನದ ವ್ಯವಸ್ಥೆಯೂ ಆರಂಭವಾಗಿದ್ದು, ಮಂಗಳವಾರ ಹಾಗೂ ಶುಕ್ರವಾರ ನಾಲ್ಕರಿಂದ ಐದು ಸಾವಿರ ಭಕ್ತರು ಭೋಜನ ಸ್ವೀಕರಿಸುತ್ತಿದ್ದಾರೆ ಎನ್ನುತ್ತಾರೆ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಎಚ್.ಧನಂಜಯ ಶೆಟ್ಟಿ.

ಮಂದಾರ್ತಿ: ಯಕ್ಷಗಾನ ಸೇವೆ ಆರಂಭ

‘ಮಂದಾರ್ತಿ ದೇವಸ್ಥಾನದಲ್ಲಿ ಎರಡು ಮೇಳಗಳಿಂದ ಪ್ರತಿದಿನ ಯಕ್ಷಗಾನ ಸೇವೆ ನಡೆಯುತ್ತಿದೆ. ಡಿ.9ರವರೆಗೆ ಈ ಸೇವೆಯ ಆಟ ನಡೆಯುತ್ತಿದ್ದು, ಹರಕೆ‌ ಸೇವೆ ಆಟಗಳು ಡಿ.10ರಿಂದ ಆರಂಭಿಸಲು ಜಿಲ್ಲಾಧಿಕಾರಿ ಬಳಿ ಅನುಮತಿ ಕೇಳಲಾಗಿದೆ. ಅನುಮತಿ ಸಿಕ್ಕರೆ ಪ್ರಾರಂಭದಲ್ಲಿ ದೇವಸ್ಥಾನದಲ್ಲಿ ಯಕ್ಷಗಾನ ಸೇವೆ ಆರಂಭಿಸಿ, ಮುಂದೆ ಭಕ್ತರು ಬಯಸಿದ ಸ್ಥಳದಲ್ಲಿ ನಡೆಸಲಾಗುವುದು. ಲಾಕ್‌ಡೌನ್ ಸಮಯದಲ್ಲಿ ಕುಸಿದಿದ್ದ ಆದಾಯವೂ ಏರಿಕೆ ಕಂಡಿದ್ದು, ಯಥಾಸ್ಥಿತಿಗೆ ಬರುತ್ತಿದೆ’ ಎನ್ನುತ್ತಾರೆ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಎಚ್.ಧನಂಜಯ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.