ADVERTISEMENT

ಧರ್ಮಸ್ಥಳದಲ್ಲಿ ಮೃತಪಟ್ಟಿರುವ ಎಲ್ಲರಿಗೂ ನ್ಯಾಯ ಸಿಗಲಿ ಎಂದು ಪೂಜೆ: ದಿನೇಶ್ ಗಾಣಿಗ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 21:00 IST
Last Updated 22 ಆಗಸ್ಟ್ 2025, 21:00 IST
ಕೆ.ದಿನೇಶ್‌ ಗಾಣಿಗ
ಕೆ.ದಿನೇಶ್‌ ಗಾಣಿಗ   

ಉಡುಪಿ: ‘ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗಲಿ ಮತ್ತು ಧರ್ಮಸ್ಥಳದಲ್ಲಿ ಮೃತಪಟ್ಟಿರುವ ಎಲ್ಲರಿಗೂ ನ್ಯಾಯ ಸಿಗಲಿ ಎಂದು ಇದೇ 24 ರಂದು ರಾಜ್ಯದ ಸುಮಾರು 25 ಸಾವಿರ ದೈವ, ದೇವಸ್ಥಾನಗಳಲ್ಲಿ ಏಕ ಕಾಲದಲ್ಲಿ ದೇವರಲ್ಲಿ ಮೊರೆ ಹೋಗಿ ಪೂಜೆ ಸಲ್ಲಿಸಲಾಗುವುದು’ ಎಂದು ಸೌಜನ್ಯಾ ಹೋರಾಟ ಸಮಿತಿಯ ಕೆ.ದಿನೇಶ್‌ ಗಾಣಿಗ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು,‘ ಶಿಕ್ಷಕಿ ವೇದವಲ್ಲಿ, ವಿದ್ಯಾರ್ಥಿನಿ ಪದ್ಮಲತಾ, ಆನೆ ಮಾವುತ ನಾರಾಯಣ ಮತ್ತು ಯಮುನಾ, ಸೌಜನ್ಯಾ ಕೊಲೆ ಪ್ರಕರಣಗಳಲ್ಲಿ ಆರೋಪಿಗಳು ಇನ್ನೂ ಸಿಕ್ಕಿಲ್ಲ’ ಎಂದರು.

‘ಕೆಲವು ಬಿಜೆಪಿ ಶಾಸಕರು ವಿಧಾನಸಭೆಯ ಅಧಿವೇಶನದಲ್ಲಿ ಧರ್ಮಸ್ಥಳದ ಹೆಸರು ಹಾಳಾಗುತ್ತಿದೆ, ಹಿಂದೂ ಧರ್ಮ ಹಾಳಾಗುತ್ತಿದೆ ಎಂದು ಹೇಳುತ್ತಿದ್ದಾರೆ. 1983 ರಿಂದ ಹಲವು ಬಾರಿ ಬಿಜೆಪಿ ಶಾಸಕರು ಸದನದಲ್ಲಿ ಧರ್ಮಸ್ಥಳದಲ್ಲಿ ಆಗುತ್ತಿರುವ ಕೊಲೆ, ಅತ್ಯಾಚಾರ ಮತ್ತು ಅಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಆ ಸಮಯದಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಅಪಚಾರ ಆಗಲಿಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

‘ಸೌಜನ್ಯಾ ಹೋರಾಟಗಾರರು ನ್ಯಾಯದ ಪರವಾಗಿ ಹೋರಾಟ ಮಾಡಿದರೆ ಧರ್ಮ ಹಾಳಾಗುತ್ತಿದೆಯೇ? ಕಾಲ ಕಾಲಕ್ಕೆ ಬಿಜೆಪಿಯವರ ಅಜೆಂಡಾ ಬದಲಾಗುತ್ತಿದೆಯೇ? ಹಾಗಾದರೆ ನಿಮ್ಮದು ಯಾವ ಹಿಂದುತ್ವ. ಮತಕ್ಕಾಗಿ ಹಿಂದುತ್ವವಾ ?’ ಎಂದರು.

‘ಯೂಟ್ಯೂಬರ್‌ಗಳ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಸಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಆಗ್ರಹಿಸಿರುವುದು ಹಾಸ್ಯಾಸ್ಪದ’ ಎಂದು ಹೇಳಿದರು.

ಸಮಿತಿಯ ತಮ್ಮಣ್ಣ ಶೆಟ್ಟಿ ಮಾತನಾಡಿ, ಮಹೇಶ್‌ ಶೆಟ್ಟಿ ತಿಮರೋಡಿ ಅವರ ಬಂಧನ ಖಂಡನೀಯ. ಕ್ಷೇತ್ರದ ಬಗ್ಗೆ ಯಾರೂ ಷಡ್ಯಂತ್ರ ಮಾಡಿಲ್ಲ. ಷಡ್ಯಂತ್ರವನ್ನು ಪ್ರಶ್ನೆ ಮಾಡಲು ಬಂದವರು ನಾವು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಚಿನ್‌ ಶ್ರೀಯಾನ್‌, ಅಂಬಿಕಾ ಪ್ರಭು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.