ADVERTISEMENT

ಗುಣಮಟ್ಟದ ಕೆಂಪು ಕುಚ್ಚಿಗೆ ಅಕ್ಕಿ ವಿತರಿಸಿ: ದಿನಕರ ಬಾಬು ಸೂಚನೆ

ಕೆಡಿಪಿ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಸೂಚನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 17:30 IST
Last Updated 25 ನವೆಂಬರ್ 2020, 17:30 IST
ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಯಿತು.
ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಯಿತು.   

ಉಡುಪಿ: ಪಡಿತರ ಅಂಗಡಿಗಳಲ್ಲಿ ವಿತರಿಸಲಾಗುತ್ತಿರುವ ಬಿಳಿ ಕುಚ್ಚಿಗೆ ಅಕ್ಕಿ ಗುಣಮಟ್ಟ ಕಡಿಮೆಯಿದ್ದು, ಗುಣಮಟ್ಟದ ಕೆಂಪು ಕುಚ್ಚಿಗೆ ಅಕ್ಕಿ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಸೂಚಿಸಿದರು.

ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಡಿತರ ವ್ಯವಸ್ಥೆಯಲ್ಲಿ ಕುಚ್ಚಿಗೆ ಅಕ್ಕಿ ಸರಬರಾಜಾಗುತ್ತಿದೆ. ಆದರೆ ಅಕ್ಕಿಯ ಗುಣಮಟ್ಟ ಸರಿಯಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಗುಣಮಟ್ಟದ ಕೆಂಪು ಕುಚ್ಚಿಗೆ ಅಕ್ಕಿಯನ್ನು ಪಡಿತರ ಅಂಗಡಿಗಳಲ್ಲಿ ವಿತರಿಸಬೇಕು. ಈ ಬಗ್ಗೆ ಪಡಿತರ ಸರಬರಾಜು ಮಾಡುವ ಆಹಾರ ನಿಗಮಕ್ಕೆ ಪತ್ರ ಬರೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಗೆ ಪ್ರಸ್ತುತ ಸರಬರಾಜಾಗುತ್ತಿರುವ ಕುಚ್ಚಿಗೆ ಆಂಧ್ರ ಪ್ರದೇಶದಿಂದ ಬರುತ್ತಿದ್ದು, ಸ್ಥಳೀಯ ಕುಚ್ಚಿಗೆ ಅಕ್ಕಿ ಅಗತ್ಯ ಪ್ರಮಾಣದಲ್ಲಿ ಪಡಿತರ ಸರಬರಾಜು ವ್ಯವಸ್ಥೆಗೆ ದೊರೆಯುತ್ತಿಲ್ಲ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಬೇರೆ ರಾಜ್ಯಗಳಲ್ಲಿ ಕೆಂಪು ಕುಚ್ಚಿಗೆ ಬೆಳೆಯುತ್ತಿದ್ದರೆ ಅಲ್ಲಿಂದ ಅಕ್ಕಿಯನ್ನು ಸರಬರಾಜು ಮಾಡಿಕೊಳ್ಳಲು ಆಹಾರ ನಿಗಮಕ್ಕೆ ಪತ್ರ ಬರೆಯುವಂತೆ ಅಧ್ಯಕ್ಷರು ಸೂಚಿಸಿದರು.

ADVERTISEMENT

ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಕಾನೂನು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿ ಸರಬರಾಜಾಗುವ ಪ್ಲಾಸ್ಟಿಕ್‌ ನಿಷೇಧಿಸಿದರೆ ಸಮಸ್ಯೆ ಪರಿಹಾರವಾಗಲಿದೆ ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಸರಬರಾಜು ಮಾಡುವ ಸಗಟು ವ್ಯಾಪಾರಿಗಳ ಬಳಿಯಿರುವ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವಂತೆ ನಗರಾಭಿವೃಧ್ದಿ ಕೋಶದ ಅಧಿಕಾರಿಗಳಿಗೆ ಸೂಚನೆ ನೀಡಿದ ಅಧ್ಯಕ್ಷರು, ಗ್ರಾಮೀಣ ಪ್ರದೇಶದಲ್ಲಿ ತಾಲ್ಲೂಕು ಪಂಚಾಯಿತಿ ಇಒಗಳು ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದರು.

ಜಲಜೀವನ್ ಮಿಷನ್ ಯೋಜನೆಯಡಿ ನೀರಿನ ಸಂಪರ್ಕ ನೀಡುವಾಗ, ಶಾಲೆಗಳು ಮತ್ತು ಅಂಗನವಾಡಿಗಳಿಗೂ ಸಂಪರ್ಕ ನೀಡಬೇಕು. ಅಂಗವಿಕಲರ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನದಲ್ಲಿ,ಅಗತ್ಯ ಸೌಲಭ್ಯಗಳನ್ನು ಒದಗಿಸಿ, ಅನುದಾನದ ಸಂಪೂರ್ಣ ಬಳಕೆಯಾಗಬೇಕು ಎಂದು ಅಧ್ಯಕ್ಷರು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ. ನವೀನ್ ಭಟ್, ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಪುತ್ರನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.