ADVERTISEMENT

ಉಡುಪಿ | ಅತಿವೃಷ್ಟಿ ನಿರ್ವಹಣೆ: ಜಿಲ್ಲಾಡಳಿತ ಸನ್ನದ್ದವಾಗಿರಲಿ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 16:03 IST
Last Updated 30 ಜೂನ್ 2022, 16:03 IST
ಮನೋಜ್ ಜೈನ್
ಮನೋಜ್ ಜೈನ್   

ಉಡುಪಿ: ಜಿಲ್ಲೆಯಲ್ಲಿ 3 ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ಮುಂದುವರಿದಲ್ಲಿ ಅತಿವೃಷ್ಟಿ ಉಂಟಾಗುವ ಆತಂಕವಿದ್ದು, ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ಧವಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚನೆ ನೀಡಿದರು.

ಗುರುವಾರ ವರ್ಚುವಲ್ ಸಭೆ ನಡೆಸಿ ಜಿಲ್ಲೆಯ ಮಳೆ ಪರಿಸ್ಥಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನಿರಂತರ ಮಳೆಯಿಂದ ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಲಿದೆ. ಅಂತಹ ಪ್ರದೇಶಗಳನ್ನು ಗುರುತಿಸಿ ಅಲ್ಲಿನ ಜನರ ರಕ್ಷಣೆ ಮತ್ತು ಸ್ಥಳಾಂತರಕ್ಕೆ ಕ್ರಮ ತೆಗೆದುಕೊಳ್ಳಬೇಕು. ಕಾಳಜಿ ಕೇಂದ್ರಗಳನ್ನು ಗುರುತಿಸಿ ಸಿದ್ಧವಿಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಮಳೆ ಗಾಳಿಯಿಂದಾಗಿ ರಸ್ತೆಗಳ ಮೇಲೆ ಮರಗಳು ಬಿದ್ದು ಸಂಚಾರಕ್ಕೆ ಅಡ್ಡಿಯಾದರೆ ಅಗತ್ಯ ಪರಿಕರಗಳೊಂದಿಗೆ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ತಂಡ ತೆರವು ಕಾರ್ಯಾಚರಣೆಗೆ ಸಜ್ಜಾಗಿರಬೇಕು. ತಗ್ಗು ಪ್ರದೇಶದಲ್ಲಿರುವ ಸೇತುವೆಗಳು ಮುಳುಗಡೆಗೊಂಡರೆ ಸಂಚಾರ ವ್ಯವಸ್ಥೆ ಸ್ಥಗಿತಗೊಳಿಸುವ ಕಾರ್ಯವನ್ನು ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಡಬೇಕು ಎಂದು ಸೂಚಿಸಿದರು.

ADVERTISEMENT

ಮಳೆಯಿಂದಾಗಿ ಮನೆ, ಜಾನುವಾರು, ಸಾರ್ವಜನಿಕರ ಆಸ್ತಿ ನಷ್ಟವಾದರೆ ಎನ್.ಡಿ.ಆರ್.ಎಫ್ ನಿಯಮಾವಳಿಯಂತೆ ನಷ್ಟ ಪರಿಹಾರವನ್ನು ಶೀಘ್ರ ತಲುಪಿಸಬೇಕು. ಕಿಂಡಿ ಅಣೆಕಟ್ಟುಗಳ ಹಲಗೆಗಳನ್ನು ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ವಹಿಸಬೇಕು. ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕು, ತುರ್ತು ಕರೆಗಳು ಬಂದಾಗ ತಕ್ಷಣ ಸ್ಪಂದಿಸಬೇಕು ಎಂದರು.

ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ಸಾಗುತ್ತಿದ್ದು, ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರಗಳ ವಿತರಣೆಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಮಾತನಾಡಿ, ಜಿಲ್ಲೆಯಲ್ಲಿ ಮಳೆಯಿಂದ ಅಪಾಯ ಸಂಭವ ಇರುವ ಅಂಗನವಾಡಿ, ಶಾಲಾ ಕಾಲೇಜು ಕಟ್ಟಡಗಳಲ್ಲಿ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಮಳೆಗಾಲ ಮುಗಿಯುವವರೆಗೂ ತಾಲ್ಲೂಕು ಹಾಗೂ ಗ್ರಾಮ ಮಟ್ಟದ ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿಗಳು 15 ದಿನಗಳಿಗೊಮ್ಮೆ ಸಭೆ ನಡೆಸಬೇಕು. ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ವಿಕೋಪ ನಿರ್ವಹಣೆ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್‌.ವೀಣಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.