ADVERTISEMENT

ಸಿದ್ದರಾಮಯ್ಯ ಡಿಕೆಶಿಯದ್ದು ಬಲಾತ್ಕಾರದ ಆಲಿಂಗನ: ವಿ.ಸುನಿಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 12:48 IST
Last Updated 6 ಆಗಸ್ಟ್ 2022, 12:48 IST
   

ಉಡುಪಿ: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಆಲಿಂಗನ ಪರಸ್ಪರ ಒಪ್ಪಿತವಲ್ಲ. ಬಲಾತ್ಕಾರದಿಂದ ಇಬ್ಬರೂ ಆಲಂಗಿಸಿಕೊಂಡಿದ್ದು ಶೀಘ್ರ ವಿಚ್ಛೇದನವಾಗಲಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ವ್ಯಂಗ್ಯವಾಡಿದರು.

ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಆಲಿಂಗನ ಸಹಜವಾದ ಪ್ರಕ್ರಿಯೆಯಾಗಿರಬೇಕು. ಬಲಾತ್ಕಾರದ ಅಪ್ಪುಗೆ ಹೆಚ್ಚುಕಾಲ ಉಳಿಯುವುದಿಲ್ಲ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ಭಾರತಿಗೆ ಅಮೃತ ಭಾರತಿ ಶೀರ್ಷಿಕೆಯಡಿ ಮೂರ್ನಾಲ್ಕು ತಿಂಗಳಿನಿಂದ ನಿರಂತರ ಕಾರ್ಯಕ್ರಮಗಳು ನಡೆದಿವೆ. ಕರ್ನಾಟಕದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಳ ಕುರಿತು ಎಲ್ಲ ರಂಗಾಯಣಗಳು ಒಂದು ಗಂಟೆಯ ನಾಟಕ ಪ್ರದರ್ಶಿಸಿದ್ದು, ಆ.13ರ ನಂತರ ರಂಗಾಯಣದ ಯಾತ್ರೆ ರಾಜ್ಯದಾದ್ಯಂತ ಸಂಚರಿಸಲಿದೆ. ಶಾಲಾ ಕಾಲೇಜುಗಳಲ್ಲಿ ನಾಟಕಗಳ ಪ್ರದರ್ಶನ ನಡೆಯಲಿದೆ ಎಂದರು.

ADVERTISEMENT

ಬಿಬಿಎಂಪಿಯಲ್ಲಿ ರಾಷ್ಟ್ರ ಧ್ವಜಗಳ ಮಾರಾಟದಲ್ಲಿ ಗೋಲ್‌ಮಾಲ್ ನಡೆದಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ ‘ರಾಜ್ಯ ಸರ್ಕಾರ ರಾಷ್ಟ್ರಧ್ವಜ ಮಾರಾಟ ಮಾಡುತ್ತಿಲ್ಲ. ಸ್ತ್ರೀಶಕ್ತಿ ಗುಂಪುಗಳಿಗೆ ಹಾಗೂ ಸ್ವಸಹಾಯ ಸಂಘಗಳಿಗೆ ಧ್ವಜಗಳನ್ನು ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ₹ 22 ರಿಂದ ₹ 30ರ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಎಲ್ಲ ಸ್ವಸಹಾಯ ಗುಂಪುಗಳು, ಸಂಘಗಳು ರಾಜ್ಯದಾದ್ಯಂತ ಏಕರೂಪ ದರದಲ್ಲಿ ಮಾರಾಟ ಮಾಡಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.