ADVERTISEMENT

ಸಾಲ ಮರುಪಾವತಿಗೆ ಒತ್ತಾಯ ಮಾಡಬೇಡಿ: ಬ್ಯಾಂಕ್‌ಗಳಿಗೆ ಸಚಿವ ಕೋಟ ತಾಕೀತು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 20:00 IST
Last Updated 7 ನವೆಂಬರ್ 2019, 20:00 IST

ಉಡುಪಿ: ಪ್ರಸ್ತಾಪಿತ ಸಾಲಮನ್ನಾ ಯೋಜನೆ ಆರ್ಥಿಕ ಇಲಾಖೆಯಲ್ಲಿ ಬಾಕಿಯಿದ್ದು, ಅದರ ಹಣ ಪಾವತಿ ಆಗುವವರೆಗೆ ಯೋಜನೆಯ ಫಲಾನುಭವಿಗಳಿಗೆ ಸಾಲದ ಹಣ ಮರುಪಾವತಿಸುವಂತೆ ಒತ್ತಾಯ ಹೇರಬಾರದೆಂದು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ತಾಕೀತು ಮಾಡಲಾಗಿದೆ ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಒಟ್ಟು 23 ಸಾವಿರ ಮಹಿಳಾ ಮೀನುಗಾರರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದಿದ್ದ ತಲಾ 50 ಸಾವಿರದಂತೆ ಒಟ್ಟು 62 ಕೋಟಿ ಸಾಲವನ್ನು ಮನ್ನಾ ಮಾಡಿ ಆದೇಶ ಹೊರಡಿಸಿತ್ತು. ಆದರೆ ಈ ಯೋಜನೆಗೆ ಆರ್ಥಿಕ ಇಲಾಖೆಯ ಅನುಮೋದನೆ ಪಡೆಯಲು ಬಾಕಿಯಿದ್ದು, ಇನ್ನೂ ಅನುಷ್ಠಾನಗೊಂಡಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಸಾಲ ಮನ್ನಾದ ಘೋಷಣೆ ಮಾಡಿದ್ದರೂ ಅದರ ಲಾಭ ನಮಗೆ ಸಿಗುತ್ತಿಲ್ಲ. ಬ್ಯಾಂಕ್‌ಗಳು ಸಾಲ ಮರುಪಾವತಿಸುವಂತೆ ಒತ್ತಾಯ ಹೇರುತ್ತಿವೆ ಎಂದು ಮಹಿಳಾ ಮೀನುಗಾರರು ಮನವಿ ಮಾಡಿಕೊಂಡಿದ್ದರು ಎಂದರು.

ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ, ಮೀನುಗಾರಿಕಾ ಫೆಡರೇಶನ್‌ ಅಧ್ಯಕ್ಷರು, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು, ಲೀಡ್‌ ಬ್ಯಾಂಕ್‌ ಅಧಿಕಾರಿಗಳು ಹಾಗೂ ಆಯ್ದ ಕೆಲ ಸೊಸೈಟಿಗಳ ಜತೆ ಸಭೆ ಕರೆದು ಯಾವುದೇ ಕಾರಣಕ್ಕೂ ಮಹಿಳಾ ಮೀನುಗಾರರಿಂದ ಸಾಲ ಮರುಪಾವತಿಗೆ ಒತ್ತಾಯ ಮಾಡದಂತೆ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.