ADVERTISEMENT

ಯಕ್ಷಗಾನದ ದಾಖಲೀಕರಣ ಅಗತ್ಯ: ಎಸ್‌.ವಿ.ಭಟ್‌

ಬಡಗುತಿಟ್ಟಿನ ಎರಡನೇ ವೇಷ, ಪುರುಷ ವೇಷಗಳ ಯುದ್ಧದ ಸಂದರ್ಭದ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 6:30 IST
Last Updated 29 ಜುಲೈ 2024, 6:30 IST
‘ಸುಧನ್ವಾರ್ಜುನ ಕಾಳಗ’ ಪ್ರಸಂಗದ ಯುದ್ಧ ಸನ್ನಿವೇಶದ ಪ್ರಾತ್ಯಕ್ಷಿಕೆ ನಡೆಯಿತು
‘ಸುಧನ್ವಾರ್ಜುನ ಕಾಳಗ’ ಪ್ರಸಂಗದ ಯುದ್ಧ ಸನ್ನಿವೇಶದ ಪ್ರಾತ್ಯಕ್ಷಿಕೆ ನಡೆಯಿತು   

ಉಡುಪಿ: ನಲ್ವತ್ತು, ಐವತ್ತು ವರ್ಷಗಳ ಹಿಂದೆ ಯಕ್ಷಗಾನ ಹೇಗಿತ್ತು ಎಂಬುದು ಇಂದಿನ ಯುವ ಪೀಳಿಗೆಗೆ ಗೊತ್ತಿಲ್ಲ. ಆದರೆ ಇಂದಿನ ಯಕ್ಷಗಾನ ಹೇಗಿದೆ ಎಂಬುದನ್ನು ಮುಂದಿನ ಪೀಳಿಗೆಗೂ ನೋಡುವ ಅವಕಾಶ ಸಿಗಬೇಕು. ಈ ನಿಟ್ಟಿನಲ್ಲಿ ಈ ಕಲೆಯ ದಾಖಲೀಕರಣ ಅಗತ್ಯ ಎಂದು ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್‌.ವಿ.ಭಟ್‌ ಪ್ರತಿಪಾದಿಸಿದರು.

ಇಂದ್ರಾಳಿಯ ಯಕ್ಷಗಾನ ಕೇಂದ್ರ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ (ಮಾಹೆ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಡಗುತಿಟ್ಟಿನ ಎರಡನೇ ವೇಷ ಮತ್ತು ಪುರುಷ ವೇಷಗಳ ಯುದ್ಧದ ಸಂದರ್ಭದ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಕ್ಷಗಾನದ ಮೂಲ ಶೈಲಿ ಹೇಗೆ ಎಂಬುದು ದಾಖಲೀಕರಣಗೊಂಡು ಅದು ಮುಂದಿನ ಪೀಳಿಗೆಗೆ ಮಾರ್ಗದರ್ಶನ ಒದಗಿಸಬೇಕು. ಯಕ್ಷಗಾನದಲ್ಲಿ ಯುದ್ಧದ ಸಂದರ್ಭವನ್ನು ದಾಖಲಿಸುತ್ತಿರುವ ಕಾರ್ಯ ಶ್ಲಾಘನೀಯ. ಈ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗುವ ಅಗತ್ಯ ಇದೆ ಎಂದು ಹೇಳಿದರು.

ADVERTISEMENT

ಸ್ಕೌಟ್‌ ಗೈಡ್ಸ್‌ ಜಿಲ್ಲಾ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಹಲವು ಕಲಾವಿದರು ಹಲವು ರೀತಿಯಲ್ಲಿ ಯಕ್ಷಗಾನ ಪ್ರದರ್ಶಿಸುತ್ತಾರೆ. ಈ ಕಲೆಯ ಪಾರಂಪರಿಕ ರೀತಿ ಉಳಿಸಬೇಕಾಗಿದೆ. ಯಕ್ಷಗಾನದ ದಾಖಲೀಕರಣವಾಗುತ್ತಿರುವುದು ಅತ್ಯುತ್ತಮ ಕೆಲಸ. ಇದು ಮುಂದಿನ ಪೀಳಿಗೆಗೂ ಉಪಕಾರಪ್ರದವಾಗಲಿದೆ ಎಂದು ತಿಳಿಸಿದರು.

ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಸದಸ್ಯ ಎಸ್.ವಿ. ಉದಯ ಕುಮಾರ್‌ ಶೆಟ್ಟಿ, ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ, ವಿಶ್ವನಾಥ ಶೆಣೈ ಇದ್ದರು. ನಾಗರಾಜ ಶಂಕರನಾರಾಯಣ ಪ್ರಾರ್ಥಿಸಿದರು. ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಬಿ.ಜಗದೀಶ್‌ ಶೆಟ್ಟಿ ಸ್ವಾಗತಿಸಿದರು. ಎಂಜಿಎಂ ಕಾಲೇಜಿನ ಉಪನ್ಯಾಸಕ ರಾಘೇಂದ್ರ ತುಂಗ ವಂದಿಸಿದರು.

ಕಾರ್ಯಕ್ರಮದಲ್ಲಿ ‘ಕೃಷ್ಣಾರ್ಜುನ ಕಾಳಗ’, ‘ಸುಧನ್ವಾರ್ಜುನ ಕಾಳಗ’, ‘ಕರ್ಣಾರ್ಜುನ ಕಾಳಗ’ ಪ್ರಸಂಗಗಳ ಯುದ್ಧದ ಸನ್ನಿವೇಶಗಳ ಪ್ರದರ್ಶನ ಮತ್ತು ದಾಖಲೀಕರಣ ನೆರವೇರಿತು.

Highlights - ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಯಕ್ಷಗಾನದ ಮೂರು ಯುದ್ಧ ಸನ್ನಿವೇಶಗಳ ದಾಖಲೀಕರಣ ಪ್ರೇಕ್ಷಕರನ್ನು ಮೋಡಿ ಮಾಡಿದ ಕಲಾವಿದರು

Quote - ಇಂದು ಯಕ್ಷಗಾನದ ಹೆಜ್ಜೆಗಳು ಮಾತುಗಾರಿಕೆ ವಿರೂಪವಾಗುತ್ತಿವೆ. ಕೆಲವರು ಮನಸ್ಸಿಗೆ ಕಂಡ ಹಾಗೆ ಪ್ರದರ್ಶಿಸುತ್ತಿದ್ದಾರೆ. ಆದ್ದರಿಂದ ಪಾರಂಪರಿಕ ಶೈಲಿಯನ್ನು ಉಳಿಸುವ ಅಗತ್ಯ ಇದೆ. ರಾಘವ ಶೆಟ್ಟಿ ಬೇಳೂರು ಯಕ್ಷಗಾನ ಬರಹಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.