
ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟರ್ಸ್ ಎಂಬಲ್ಲಿ ವಿದ್ಯುತ್ ಮೀಟರ್ ರೀಡರ್‌ಗೆ ಮೇಲೆ ಸಾಕು ನಾಯಿ ದಾಳಿ ಮಾಡಿ ಕೈಗೆ ಗಂಭೀರ ಗಾಯವಾಗಿದೆ.
ಮೂಲತಃ ಮುಡಿಪು ನಿವಾಸಿ, ಮೀಟರ್ ರೀಡರ್ ಸಿಬ್ಬಂದಿ ಮೇಲ್ವಿಚಾರಕ ಸಂಪತ್ ಆರ್.ಶೆಟ್ಟಿ ಸೋಮವಾರ ಕೈತ್ರೋಡಿ ಕ್ವಾರ್ಟರ್ಸ್ ಎಂಬಲ್ಲಿ ಮನೆಗಳ ಮೀಟರ್ ದಾಖಲಿಸಿ ಮುಖ್ಯರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್‌ನ ಕಡೆಗೆ ಹೋಗುತ್ತಿದ್ದ ವೇಳೆ ದಾಳಿ ನಡೆದಿದೆ. ಮನೆಯೊಂದರಲ್ಲಿ ಕಟ್ಟಿ ಹಾಕಿದ್ದ ನಾಯಿ ಸಂಕೋಲೆ ಸಮೇತ ಓಡಿ ಬಂದು ದಾಳಿ ಮಾಡಿದ್ದು, ಬಲ ಕೈಯ ಮಾಂಸ ಕಿತ್ತು ಬಂದಿದೆ. ಸ್ಥಳೀಯರು ಬಂದು ನಾಯಿಯನ್ನು ಓಡಿಸಿದ್ದು, ಗಂಭೀರ ಗಾಯಗೊಂಡು ರಕ್ತ ಸುರಿಯುತ್ತಿದ್ದಂತೆಯೇ ಸ್ಥಳೀಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಪ್ರಥಮ ಚಿಕಿತ್ಸೆ ಪಡೆದುಕೊಂಡರು. ಇದೇ ವೇಳೆ ಸಿದ್ಧಕಟ್ಟೆ ಮೆಸ್ಕಾಂ ಎಂಜಿನಿಯರ್ ಯೋಗೀಶ್ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಕೈಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಮಂಗಳವಾರ ಚೇತರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಬಂಟ್ವಾಳ ಉಪವಿಭಾಗ -2ರ ವ್ಯಾಪ್ತಿಗೆ ಸಂಬಂಧಿಸಿ ವಾಮದಪದವು, ಸಿದ್ಧಕಟ್ಟೆ, ರಾಯಿ, ವಗ್ಗ, ಕಕ್ಯಪದವು, ಬಂಟ್ವಾಳ ಪೇಟೆ ಪ್ರದೇಶದಲ್ಲಿ 17 ಮಂದಿ ಹೊರ ಗುತ್ತಿಗೆ ಆಧಾರಿತ ಮೀಟರ್ ರೀಡರ್‌ಗಳಿದ್ದಾರೆ. ರಾಯಿ ಪ್ರದೇಶದ ಮೀಟರ್ ರೀಡರ್ ಸೋಮವಾರ ಗೈರಾಗಿದ್ದರಿಂದ ಮೇಲ್ವಿಚಾರಕ ಸಂಪತ್ ಅವರೇ ರೀಡಿಂಗ್‌ಗೆ ತೆರಳಿದ್ದರು. ಅಸಂಘಟಿತ ಕಾರ್ಮಿಕರಾದ ಹೊರ ಗುತ್ತಿಗೆ ಆಧಾರಿತ ಮೀಟರ್ ರೀಡರ್‌ಗಳ ಸಮಸ್ಯೆ ಬಗ್ಗೆ ಮೆಸ್ಕಾಂ ಮೌನ ವಹಿಸಿದೆ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಪತ್ ಅವರ ಶಸ್ತ್ರಚಿಕಿತ್ಸೆಗೆ ಈಗಾಗಲೇ ಸುಮಾರು ₹ 30 ಸಾವಿರ ವೆಚ್ಚವಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.