ಪ್ರಾತಿನಿಧಿಕ ಚಿತ್ರ
ಕಾರ್ಕಳ: ತಾಲ್ಲೂಕಿನ ನಿಟ್ಟೆ ಗ್ರಾಮದ ಪರಪ್ಪಾಡಿಯಲ್ಲಿ ಶನಿವಾರ ತಡರಾತ್ರಿ ಪತ್ನಿ ಪತಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಶೇಖರ್ ಮೂಲ್ಯ (60) ಎಂಬುವರ ಮೇಲೆ ಪತ್ನಿ ಮಾಲತಿ ಮೂಲ್ಯ ಹಲ್ಲೆ ನಡೆಸಿ, ಬಳಿಕ ಬೇರೆ ಯಾರೋ ಕೊಲೆ ನಡೆಸಲು ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸಿದ್ದು, ಗಂಡ ಕುಡಿದು ಗಲಾಟೆ ಮಾಡುತ್ತಿದ್ದ ಕಾರಣದಿಂದ ತಾನೇ ಕತ್ತಿಯಿಂದ ಹಲ್ಲೆ ನಡೆಸಿರುವುದಾಗಿ ಆಕೆ ಒಪ್ಪಿಕೊಂಡಿದ್ದಾರೆ.
ಪತಿಗೆ ಹಲ್ಲೆ ನಡೆಸಿದ ಮಾಲತಿ ಮೂಲ್ಯ ಅವರು ಮಗಳಿಗೆ ಕರೆ ಮಾಡಿ, ‘ನಿನ್ನ ತಂದೆಗೆ ಯಾರೋ ಕತ್ತಿಯಿಂದ ಹಲ್ಲೆ ನಡೆಸಿದ್ದು, ಅವರು ಮೃತಪಟ್ಟಿದ್ದಾರೆ’ ಎಂದು ತಿಳಿಸಿದ್ದು, ಮಗಳು ಆಂಬುಲೆನ್ಸ್‌ಗೆ ಕರೆ ಮಾಡಿ ತಿಳಿಸಿದ್ದರು. ಗಾಯಗೊಂಡ ಶೇಖರ್ ಅವರನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಆರೋಪಿ ಮಾಲತಿ ಮೂಲ್ಯ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಗಂಡ– ಹೆಂಡತಿ ಇಬ್ಬರೂ 2011ರಲ್ಲಿ ನೆರೆಮನೆಯ ರಾಮಣ್ಣ ಕುಲಾಲ್ ಅವರ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಜೀವಾವಧಿ ಶಿಕ್ಷೆ ಅನುಭವಿಸಿದ್ದರು. ನಂತರ 2021ರಲ್ಲಿ ಸನ್ನಡತೆ ಹಿನ್ನೆಲೆಯಲ್ಲಿ ಬಿಡುಗಡೆ ಹೊಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.