ADVERTISEMENT

‘ತಾತ್ವಿಕ ಪ್ರಜಾಪ್ರಭುತ್ವಕ್ಕೆ ಹಿನ್ನಡೆ’

ಉಪನ್ಯಾಸ ಕಾರ್ಯಕ್ರಮದಲ್ಲಿ ಚಿಂತಕ ಬರಗೂರು ರಾಮಚಂದ್ರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:38 IST
Last Updated 20 ಸೆಪ್ಟೆಂಬರ್ 2025, 5:38 IST
ಕಾರ್ಯಕ್ರಮವನ್ನು ಚಿಂತಕ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು
ಕಾರ್ಯಕ್ರಮವನ್ನು ಚಿಂತಕ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು   

ಉಡುಪಿ: ದೇಶದಲ್ಲಿ ಇಂದು ತಾಂತ್ರಿಕ ಪ್ರಜಾಪ್ರಭುತ್ವವಿದ್ದು, ತಾತ್ವಿಕವಾದ ಪ್ರಜಾಪ್ರಭುತ್ವಕ್ಕೆ ಹಿನ್ನಡೆಯಾಗಿದೆ ಎಂದು ಚಿಂತಕ ಬರಗೂರು ರಾಮಚಂದ್ರಪ್ಪ ಹೇಳಿದರು.

ಅಜ್ಜರಕಾಡು ಡಾ. ಜಿ.ಶಂಕರ್‌ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಕಾಲೇಜಿನ ಪಿ.ಜಿ.ಎ.ವಿ. ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯಶಾಸ್ತ್ರ ಸಂಘದ ಉದ್ಘಾಟನೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ’ ವಿಷಯವಾಗಿ ಅವರು ಮಾತನಾಡಿದರು.

ರಾಜಕೀಯ, ಆರ್ಥಿಕ, ಸಾಮಾಜಿಕ ಸರ್ವಾಧಿಕಾರವನ್ನು ತೊಡೆದುಹಾಕುವುದೇ ನಿಜವಾದ ತಾತ್ವಿಕ ಪ್ರಜಾಪ್ರಭುತ್ವ. ಇಂದು ರಾಜಕಾರಣಿಗಳಲ್ಲಿ ನುಡಿ ನೈತಿಕತೆಯೇ ಇಲ್ಲವಾಗಿದೆ. ಪ್ರಜಾಪ್ರಭುತ್ವದ ಸಂಸದೀಯ ಪರಿಭಾಷೆಗೆ ಧಕ್ಕೆಯಾಗುತ್ತಿದೆ ಎಂದರು.

ADVERTISEMENT

ಪ್ರಶ್ನೆ ಮಾಡುವ ಹಕ್ಕನ್ನು ಪ್ರಜಾಪ್ರಭುತ್ವ ನಮಗೆ ನೀಡಿದೆ. ಆದರೆ ಇಂದು ಪ್ರಶ್ನೆಗಳಿಗೆ ಉತ್ತರ ಸಿಗುತ್ತಿದೆಯೇ ಎಂದು ಪ್ರಶ್ನಿಸಿದ ಅವರು, ಮನಸ್ಸನ್ನು ಮಾರುಕಟ್ಟೆ ಮಾಡಿದರೆ ಸಾಲದು ಅದನ್ನು ಮೌಲ್ಯಕಟ್ಟೆ ಮಾಡಬೇಕು. ಬದುಕುವ ಸ್ವಾತಂತ್ರ್ಯ ಉಳಿದಾಗ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ ಎಂದು ತಿಳಿಸಿದರು.

ನಮ್ಮ ದೇಶದಲ್ಲಿ ಜ್ಞಾನಮುಖಿ ಶಿಕ್ಷಣ ಮತ್ತು ಉದ್ಯೋಗಮುಖಿ ಶಿಕ್ಷಣದ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ತಳೆದಿಲ್ಲ. ಇದು ಸರ್ಕಾರಗಳ ಶಿಕ್ಷಣ ನೀತಿಯಲ್ಲಿಲ್ಲ. ಇದರಿಂದಾಗಿ ಶಿಕ್ಷಣದಲ್ಲಿ ಮಾನವೀಯ ವಿಷಯಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ನಮ್ಮಲ್ಲಿ ಮಾನವೀಯ ಮೌಲ್ಯ ಬೆಳೆಯಬೇಕಾದರೆ ಸಾಂಸ್ಕೃತಿಕ, ಸಾಮಾಜಿಕ ಪ್ರಜ್ಞೆ ಇರಬೇಕು. ಮಾನವೀಯ ವಿಷಯಗಳನ್ನು ಕಲಿತರೆ ಇಂತಹ ಮೌಲ್ಯಗಳು ನಮ್ಮಲ್ಲಿ ಬೆಳೆದುಬರುತ್ತದೆ ಎಂದರು.

ಇಂದು ದೇಶದಲ್ಲಿ ಸಂವಾದಕ್ಕಿಂತ ಉನ್ಮಾದ ಹೆಚ್ಚಾಗಿದೆ, ವಿವೇಕದ ಬದಲಿಗೆ ಅವಿವೇಕ ಜಾಸ್ತಿಯಾಗಿದೆ. ಪ್ರೀತಿಯ ಜಾಗದಲ್ಲಿ ದ್ವೇಷ ಆವರಿಸಿಕೊಂಡಿದೆ. ಸತ್ಯಕ್ಕೆ ಸಾಕ್ಷಿ ಕೇಳುವ ಕಾಲದಲ್ಲಿ ನಾವಿದ್ದೇವೆ ಎಂದೂ ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಸೋಜನ್‌ ಕೆ.ಜಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮ ಪಾಲಕರಾದ ನಿಕೇತನಾ, ಸಹ ಪ್ರಾಧ್ಯಾಪಕಿ ಸುಚಿತ್ರಾ ಟಿ. ಉಪಸ್ಥಿತರಿದ್ದರು. ಸೌಮ್ಯಶ್ರೀ ಭಾವಗೀತೆ ಹಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಮುಂಜುನಾಥ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.