ADVERTISEMENT

ಕೊರೊನಾ ಹೋರಾಟಕ್ಕೆ ಕೈಜೋಡಿಸಿದ ದಾನಿಗಳು

ವೈದ್ಯಕೀಯ ಉಪಕರಣಗಳ ನೆರವು ನೀಡಿದ ಇನ್‌ಫೋಸಿಸ್‌, ಉದ್ಯಮಿ ಜಿ.ಶಂಕರ್

ಪ್ರಜಾವಾಣಿ ವಿಶೇಷ
Published 31 ಮಾರ್ಚ್ 2020, 15:06 IST
Last Updated 31 ಮಾರ್ಚ್ 2020, 15:06 IST
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ   

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಾಗಿ ಬೇಕಿರುವ ಪಿಪಿಇ (ಪರ್ಸನಲ್‌ ಪ್ರೊಟೆಕ್ಟಿವ್ ಇಕ್ವಿಪ್‌ಮೆಂಟ್‌) ಹಾಗೂ ಎನ್‌ 95 ಮಾಸ್ಕ್‌ಗಳನ್ನು ಜಿಲ್ಲಾಡಳಿತ ಅಗತ್ಯ ಪ್ರಮಾಣದಲ್ಲಿ ದಾಸ್ತಾನಿರಿಸಿಕೊಂಡಿದೆ.

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಗೆ ಸರ್ಕಾರದಿಂದ 4,000 ಪಿಪಿಇ ಸಾಧನಗಳು ಪೂರೈಕೆಯಾಗಿದ್ದು, ಒಂದೂವರೆ ತಿಂಗಳ ಕಾಲ ಕೋವಿಡ್‌ ಸೋಂಕಿತರಿಗೆ ಹಾಗೂ ಐಸೊಲೇಟೆಡ್‌ ವಾರ್ಡ್‌ನಲ್ಲಿರುವ ಶಂಕಿತರಿಗೆ ಚಿಕಿತ್ಸೆ ನೀಡಲು ಬಳಸಬಹುದು ಎನ್ನುತ್ತಾರೆ ಅಧಿಕಾರಿಗಳು.

ಕೋವಿಡ್‌ ಸೋಂಕಿತರಿಗೆ ಹಾಗೂ ಹೈ ರಿಸ್ಕ್‌ ಪ್ರಕರಣದ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು, ದಾದಿಯರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಪಿಪಿಇ ಧರಿಸಬೇಕು. ಐಸೊಲೇಷನ್‌ ವಾರ್ಡ್‌ಗೆ ಹೋಗುವ ಪ್ರತಿಯೊಬ್ಬರಿಗೂ ಪಿಪಿಇ ಅಗತ್ಯವಿರುವುದರಿಂದ ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಇರಿಸಿಕೊಳ್ಳಬೇಕು. ಸದ್ಯದ ಪರಿಸ್ಥಿತಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು.

ADVERTISEMENT

ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆ:

ಜಿಲ್ಲೆಯ ಎಲ್ಲ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಿಗೆ ಪಿಪಿಇ ಹಾಗೂ ಮಾಸ್ಕ್‌ಗಳನ್ನು ಪೂರೈಸಲಾಗುವುದು. ಆಸ್ಪತ್ರೆಗಳಿಗೆ ದಾಖಲಾಗುವ ಶಂಕಿತ ರೋಗಿಗಳ ಆಧಾರದ ಮೇಲೆ ಸಾಧನಗಳನ್ನು ಒದಗಿಸಲಾಗುವುದು. ಖಾಸಗಿ ಆಸ್ಪತ್ರೆಗಳು ಸ್ವಂತ ಖರ್ಚಿನಲ್ಲಿ ಉಪಕರಣಗಳನ್ನು ಖರೀದಿಸುತ್ತವೆ ಎಂದು ತಿಳಿಸಿದರು.

ಬೈಂದೂರಿನಲ್ಲೂ ತಯಾರಿಕೆ:

ಒಂದು ವೇಳೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿಢೀರ್ ಹೆಚ್ಚಾದರೆ ಪಿಪಿಇ ಕೊರತೆ ಉಂಟಾಗಬಾರದು ಎಂಬ ಕಾರಣಕ್ಕೆ ಜಿಲ್ಲಾಡಳಿತ ಬೈಂದೂರಿನ ಧಾತ್ರಿ ಸಂಸ್ಥೆಗೆ ಪಿಪಿಇ ತಯಾರಿಕೆಗೆ ಅನುಮತಿ ನೀಡಿದೆ. ಮೊದಲ ಹಂತದಲ್ಲಿ ತಯಾರಾಗುವ 1,000 ಪಿಪಿಇಗಳನ್ನು ಅಲ್ಲಿಂದಲೂ ಖರೀದಿಸಲು ಸಿದ್ಧತೆ ಮಾಡಿಕೊಂಡಿದೆ. ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯನ್ನು ಖರೀದಿಗೆ ಬಳಸಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ದಾನಿಗಳ ನೆರವು:

ಜಿಲ್ಲಾಡಳಿತದ ಜತೆಗೆ ದಾನಿಗಳು ಸಹ ಕೈಜೋಡಿಸಿದ್ದು, ಜಿಲ್ಲೆಗೆ ಅಗತ್ಯವಿರುವ ಪಿಪಿಇ, ಥ್ರಿಪಲ್‌ ಲೇಯರ್ ಮಾಸ್ಕ್‌ ಹಾಗೂ ಎನ್‌–95 ಮಾಸ್ಕ್‌ಗಳನ್ನು ಒದಗಿಸಲು ಮುಂದೆ ಬಂದಿದ್ದಾರೆ. ಉದ್ಯಮಿ ಜಿ.ಶಂಕರ್ ಒಂದು ಲಕ್ಷ ತ್ರಿಪಲ್‌ ಲೇಯರ್ ಮಾಸ್ಕ್‌ ಹಾಗೂ 2,500 ಎನ್‌–95 ಮಾಸ್ಕ್ ಪೂರೈಸುವುದಾಗಿ ಭರವಸೆ ನೀಡಿದ್ದಾರೆ.

ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿರುವಇನ್‌ಫೋಸಿಸ್‌ ಸಂಸ್ಥೆ ಕೂಡ ಅಗತ್ಯ ಪ್ರಮಾಣದ ವೈದ್ಯಕೀಯ ಸಲಕರಣೆ ಪೂರೈಸಲು ಮುಂದೆ ಬಂದಿದ್ದು, ಹಂತ ಹಂತವಾಗಿ ತಲುಪಿಸುತ್ತಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.