
ಬೈಂದೂರು: ‘ದೇಶಕ್ಕೆ ವೈದ್ಯಕೀಯ, ಧಾರ್ಮಿಕ, ರಾಜಕೀಯ ಕ್ಷೇತ್ರಕ್ಕೆ ಶ್ರೇಷ್ಠ ವ್ಯಕ್ತಿಗಳನ್ನು ನೀಡಿದ ಕ್ಷೇತ್ರ ಬೈಂದೂರು. ಹಲವು ವಿಭಾಗಗಳಲ್ಲಿ ತರಬೇತಿ ನೀಡಿ ಸಾಧನೆ ಮಾಡಿದ ಸುರಭಿ ಸಂಸ್ಥೆಯ ಸಹಯೋಗದಲ್ಲಿ ಪ್ರತಿ ವರ್ಷ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಸಲಿದ್ದೇವೆ’ ಎಂದು ಉಡುಪಿ ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ಡಾ.ಕೃಷ್ಣ ಪ್ರಸಾದ್ ಹೇಳಿದರು.
ಇಲ್ಲಿನ ಶಾರದಾ ವೇದಿಕೆಯಲ್ಲಿ ಭಾನುವಾರ ನಡೆದ ಸುರಭಿ ಬೈಂದೂರು ಸಾಂಸ್ಕೃತಿಕ ಸಾಹಿತ್ಯ, ಸೇವಾ ಪ್ರತಿಷ್ಠಾನದ ಸುರಭಿ ಜೈಸಿರಿ 2026 ಕಾರ್ಯಕ್ರಮ, ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ, ದಿ.ಹೊಸಾಡು ಸುಬ್ರಾಯ ಶೇರುಗಾರ್ ಸಂಸ್ಮರಣಿಯ ಸಾಂಸ್ಕೃತಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಆಶಯ ನುಡಿಗಳನ್ನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ, ಬೈಂದೂರಿಗೆ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತಂದು ಕೊಟ್ಟ ಸಂಸ್ಥೆ ಸುರಭಿ. ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಬದುಕುವ ಶಿಕ್ಷಣ ನೀಡಿ, ಅನೇಕ ಪ್ರತಿಭಾವಂತರನ್ನು ಸೃಷ್ಟಿ ಮಾಡಿದೆ ಎಂದರು.
ಡಾ.ಕೃಷ್ಣ ಪ್ರಸಾದ್, ಎಸ್. ರಾಜು ಪೂಜಾರಿ, ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಪ್ರಭಾಕರ ಎಚ್, ಗಿರೀಶ ಗಾಣಿಗ ಅವರನ್ನು ಸನ್ಮಾನಿಸಲಾಯಿತು. ಶಿವರಾಮ ಕಾರಂತ ಬಾಲ ಪ್ರಶಸ್ತಿ ಪುರಸ್ಕೃತ ದೀಪ್ತಾ ಡಿ. ಕುಂದರ್ ಅವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಅಧ್ಯಕ್ಷತೆ ವಹಿಸಿದ್ದರು. ಭಟ್ಕಳದ ಶ್ರೀಗುರು ವಿದ್ಯಾಧಿರಾಜ ನ್ಯೂ ಇಂಗ್ಲೀಷ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಿರೇಂದ್ರ ವಿ. ಶಾನುಭಾಗ್, ಸುರಭಿ ಚಿತ್ರಕಲಾ ಶಿಕ್ಷಕ ಗಿರೀಶ ಗಾಣಿಗ, ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಭಾಗವಹಿಸಿದ್ದರು.
ರಾಜೇಂದ್ರ ದೇವಾಡಿಗ ಸ್ವಾಗತಿಸಿದರು. ಸುರಭಿ ನಿರ್ದೇಶಕ ಸುಧಾಕರ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಆಚಾರ್ಯ ವಂದಿಸಿದರು. ನಾಗರಾಜ ದೇವಾಡಿಗ, ಗಣೇಶ ಪೂಜಾರಿ ನಿರೂಪಿಸಿದರು. ಸುರಭಿಯ ಸಂಗೀತ ಹಾಗೂ ಚಿತ್ರಕಲಾ ವಿದ್ಯಾರ್ಥಿಗಳಿಂದ ನಾದ ಗಾನಾಮೃತ, ಕುಂಚ ಸಂಭ್ರಮ ಹಾಗೂ ಮಂಗಳೂರು ಸನಾತನ ನಾಟ್ಯಾಲಯ ತಂಡದಿಂದ ಸನಾತನ ರಾಷ್ಟ್ರಾಂಜಲಿ ನಾಟ್ಯ ವೈವಿಧ್ಯ ಪ್ರದರ್ಶನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.