
‘ಪ್ರಜಾವಾಣಿ’ ಸಹಯೋಗದಲ್ಲಿ ನಡೆದ ಮಾದಕ ವ್ಯಸನ ಮುಕ್ತ, ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಎಂ. ಗಾಂವ್ಕರ್ ಮಾತನಾಡಿದರು
ಪಡುಬಿದ್ರಿ: ‘ಮಾದಕ ವಸ್ತುಗಳು ದೇಶದ ಆರ್ಥಿಕತೆಯನ್ನೇ ಬುಡಮೇಲುಗೊಳಿಸುತ್ತವೆ. ಮುಂದಿನ ಭವಿಷ್ಯವಾದ ಯುವ ಸಂಪನ್ಮೂಲವು ಅವುಗಳ ವ್ಯಸನಕ್ಕೆ ತುತ್ತಾದರೆ ದೇಶದ ಭವಿಷ್ಯಕ್ಕೇ ಕಂಟಕ ಎದುರಾಗಲಿದೆ’ ಎಂದು ಕಾಪು ಸರ್ಕಲ್ ಇನ್‌ಸ್ಪೆಕ್ಟರ್ ಅಝ್ಮತ್ ಆಲಿ ಅಭಿಪ್ರಾಯಪಟ್ಟರು
‘ಪ್ರಜಾವಾಣಿ’ ಸಹಯೋಗದಲ್ಲಿ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮಾದಕ ವ್ಯಸನಮುಕ್ತ ಜಾಗೃತಿ ಸಮಿತಿ, ಯೂತ್ ರೆಡ್‌ಕ್ರಾಸ್ ಸಮಿತಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾದಕ ವ್ಯಸನ ಮುಕ್ತ ಹಾಗೂ ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಡ್ರಗ್ಸ್ ಮಾಫಿಯಾವನ್ನು ಮಟ್ಟಹಾಕಬೇಕಾದರೆ ವಿದ್ಯಾರ್ಥಿಗಳ ಸಹಕಾರ ಅತ್ಯಗತ್ಯ. ಯುವ ಸಮೂಹವೇ ಇದರ ನೇತೃತ್ವವನ್ನು ವಹಿಸಿಕೊಳ್ಳಬೇಕು. ಹಾಗಿದ್ದರೆ ಮಾತ್ರ ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯ’ ಎಂದು ಅವರು ಹೇಳಿದರು.
‘ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾದವರ ಸಹವಾಸ ಮಾಡಬಾರದು. ಅವರ ಸ್ನೇಹದಿಂದ ನೀವೂ ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆಗಳಿರುತ್ತವೆ. ಕಲಿಕೆಯ ಕಡೆಗೆ ಹೆಚ್ಚಿನ ಗಮನ ನೀಡಿದರೆ ನಿಮ್ಮ ಬದುಕು ಉಜ್ವಲವಾಗುತ್ತದೆ’ ಎಂದರು.
‘ಯಾರು ಧೂಮಪಾನ, ಮದ್ಯಪಾನ, ಗುಟ್ಕಾ ತಿನ್ನುವ ವ್ಯಸನಕ್ಕೆ ಒಳಗಾಗಿರುತ್ತಾರೋ ಅಂತಹವರನ್ನು ಡ್ರಗ್ ಪೆಡ್ಲರ್‌ಗಳು ಗುರುತಿಸಿ, ಅವರ ಸ್ನೇಹ ಮಾಡುತ್ತಾರೆ. ಬಳಿಕ ಅವರಿಗೆ ಮಾದಕ ವಸ್ತುಗಳನ್ನು ನೀಡುತ್ತಾರೆ. ಮುಂದೆ ಅವರು ಅದರ ದಾಸರಾಗುತ್ತಾರೆ. ಒಮ್ಮೆ ವ್ಯಸನಗಳಿಗೆ ದಾಸರಾದರೆ ಅದರಿಂದ ಹೊರಬರಲು ತುಂಬಾ ಕಷ್ಟವಿದೆ’ ಎಂದು ಹೇಳಿದರು.
‘ಮಾದಕ ವ್ಯಸನಕ್ಕೆ ಒಳಗಾದವರು ದೈಹಿಕ, ಮಾನಸಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಬಲಹೀನರಾಗುತ್ತಾರೆ. ಮಾದಕ ವ್ಯಸನಗಳಿಗೆ ಒಳಗಾಗಿರುವ ವಿದ್ಯಾರ್ಥಿಗಳನ್ನು ಪತ್ತೆಹಚ್ಚುವ ಜವಾಬ್ದಾರಿ ಶಿಕ್ಷಕರ ಮೇಲೂ ಇದೆ’ ಎಂದರು.
‘ಕೆಲವೊಂದು ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ಖಿನ್ನತೆಗೆ ಜಾರಿದರೆ, ಓದಿನಲ್ಲಿ ನಿರಾಸಕ್ತಿ ತೋರಿದರೆ, ತರಗತಿಗೆ ಬಾರದಿರುವುದು ಕಂಡು ಬಂದರೆ ಆ ವಿಚಾರವನ್ನು ಪೊಲೀಸರ ಗಮನಕ್ಕೆ ತರಬೇಕು. ಪ್ರಾರಂಭಿಕ ಹಂತದಲ್ಲೇ ಗೊತ್ತಾದರೆ ಅವರನ್ನು ಅದರಿಂದ ಹೊರತರಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
‘ಮಾದಕವಸ್ತು ಮಾರಾಟ, ಸಾಗಾಟ ಮಾಡುವವರಿಗೆ ಮಾತ್ರವಲ್ಲ ಅವುಗಳನ್ನು ಸೇವನೆ ಮಾಡುವವರಿಗೂ ಒಂದು ವರ್ಷದ ವರೆಗೆ ಶಿಕ್ಷೆ ಹಾಗೂ ₹ 20 ಸಾವಿರ ದಂಡ ವಿಧಿಸಬಹುದಾಗಿದೆ’ ಎಂದು ಹೇಳಿದರು.
ಯೂತ್ ರೆಡ್‌ಕ್ರಾಸ್ ಸಮಿತಿ ಸಂಯೋಜಕ ರಾಘವ ನಾಯ್ಕ್, ಮಾದಕ ವ್ಯಸನ ಮುಕ್ತ ಜಾಗೃತಿ ಸಮಿತಿ ಸಂಯೋಜಕಿ ಸವಿತಾ, ಎನ್‌ಎಸ್‌ಎಸ್ ಯೋಜನಾಧಿಕಾರಿ ಮಂಜುಳಾ ಎಚ್.ಎಸ್. ಉಪಸ್ಥಿತರಿದ್ದರು.
ಹಮೀದ್ ಪಡುಬಿದ್ರಿ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರೀತಿ ಕಾರ್ಯಕ್ರಮ ನಿರೂಪಿಸಿದರು. ಸಂಜನಾ ವಂದಿಸಿದರು.
‘ಪ್ರಜಾವಾಣಿ’ ಸಹಯೋಗದ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಅತ್ಯಂತ ಉಪಯುಕ್ತ ಮಾಹಿತಿ ನೀಡಿದ್ದಾರೆ. ಮಾದಕ ವ್ಯಸನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮನಮುಟ್ಟುವಂತೆ ತಿಳಿಸಿದ್ದಾರೆಪ್ರೀತಿ ದ್ವಿತೀಯ ಬಿ.ಎ.
ಮೊಬೈಲ್ ಬಳಕೆಯ ವೇಳೆ ಎಚ್ಚರಿಕೆ ವಹಿಸಬೇಕಾದ ಹಲವು ಹೊಸ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಬೆಳಕು ಚೆಲ್ಲಿದ್ದಾರೆ. ನಮಗೆ ಗೊತ್ತಿಲ್ಲದ ಹಲವು ಹೊಸ ವಿಷಯಗಳನ್ನು ತಿಳಿದುಕೊಂಡೆವುಮನಿಷಾ, ಅಂತಿಮ ಬಿ.ಎ.
ಜಾಗೃತಿ ಕಾರ್ಯಕ್ರಮ ಅತ್ಯಂತ ಮಾಹಿತಿಪೂರ್ಣವಾಗಿತ್ತು. ಇನ್ನೂ ಇಂತಹ ಕಾರ್ಯಕ್ರಮಗಳು ನಡೆದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆಸಚೇತ್, ಅಂತಿಮ ಬಿ.ಕಾಂ.
‘ಅಪರಾಧಿಕ ಚಟುವಟಿಕೆಗಳಲ್ಲಿ ಭಾಗಿ’
‘ಯಾರು ಮಾದಕ ವ್ಯಸನಗಳಿಗೆ ದಾಸರಾಗುತ್ತಾರೋ ಅವರು ಮುಂದೆ ಮಾದಕ ದ್ರವ್ಯಗಳು ಸಿಗದಿದ್ದರೆ ಕಳವು ಸುಲಿಗೆ ಮೊದಲಾದ ಅಪರಾಧಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ’ ಎಂದು ಅಝ್ಮತ್ ಆಲಿ ಹೇಳಿದರು. ‘ಅಪರಾಧಿಕ ಚಟುವಟಿಕೆಗಳಲ್ಲಿ ಬಂಧನಕ್ಕೊಳಗಾಗುವವರಲ್ಲಿ ಹೆಚ್ಚಿನವರು ಮಾದಕ ದ್ರವ್ಯ ವ್ಯಸನಕ್ಕೆ ಒಳಗಾಗಿರುವುದು ಕಂಡು ಬರುತ್ತಿದೆ’ ಎಂದರು. ‘ಯಾರು ಪೋಷಕರ ಶಿಕ್ಷಕರ ಮಾತುಗಳನ್ನು ಕೇಳುವುದಿಲ್ಲವೋ ಅವರು ದಾರಿ ತಪ್ಪುತ್ತಾರೆ ಮತ್ತು ವ್ಯಸನಗಳಿಗೆ ಬಲಿಯಾಗುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು’ ಎಂದು ತಿಳಿಸಿದರು.
‘ವಿದ್ಯಾರ್ಥಿಗಳು ಪೊಲೀಸರ ಸಲಹೆ ಪಾಲಿಸಿ’
‘ಮಾದಕ ವ್ಯಸನದ ವಿರುದ್ಧ ನಾವು ಶಿಕ್ಷಕರು ವಿದ್ಯಾರ್ಥಿಗಳಿಗೆ ಒಂದಷ್ಟು ಮಾಹಿತಿ ಮತ್ತು ತಿಳಿವಳಿಕೆಯನ್ನು ನೀಡುತ್ತೇವೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವ ಸಂದರ್ಭದಲ್ಲಿ ಲೋಪಗಳಾದರೆ ಪೊಲೀಸರ ಸಹಾಯ ಬೇಕಾಗುತ್ತದೆ. ಅವರ ಸಹಾಯ ಇದ್ದಾಗ ಮಾತ್ರ ಕಾಲೇಜನ್ನು ಶೇ 100 ರಷ್ಟು ಮಾದಕ ವ್ಯಸನ ಮುಕ್ತವಾಗಿಸಲು ಸಾಧ್ಯ’ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಗೋಪಾಲಕೃಷ್ಣ ಎಂ. ಗಾಂವ್ಕರ್ ಹೇಳಿದರು. ‘ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಹೆಚ್ಚಿನ ಅನುಕೂಲವಾಗುತ್ತದೆ. ಪೊಲೀಸರು ನೀಡುವ ಮಾರ್ಗದರ್ಶನ ಸಲಹೆಯನ್ನು ವಿದ್ಯಾರ್ಥಿಗಳು ಚಾಚೂ ತಪ್ಪದೆ ಪಾಲಿಸಬೇಕು’ ಎಂದರು.
‘ಡಿಜಿಟಲ್ ಅರೆಸ್ಟ್ ಪರಿಕಲ್ಪನೆಯೇ ಇಲ್ಲ’
ಶಿರ್ವ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮಂಜುನಾಥ್ ಅವರು ಸೈಬರ್ ಕ್ರೈಂ ವಿಷಯದ ಬಗ್ಗೆ ಮಾತನಾಡಿ ‘ಡಿಜಿಟಲ್ ಅರೆಸ್ಟ್ ಎಂಬ ಪರಿಕಲ್ಪನೆಯು ಪೊಲೀಸ್ ಇಲಾಖೆಯಲ್ಲಿಯೇ ಇಲ್ಲ. ಆದ್ದರಿಂದ ಆನ್‌ಲೈನ್‌ನಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ವೇಷದಲ್ಲಿ ಬರುವ ಮೋಸಗಾರರನ್ನು ನಂಬಬೇಡಿ’ ಎಂದು ಹೇಳಿದರು. ‘ನಮ್ಮ ಮೊಬೈಲ್‌ನಲ್ಲಿರುವ ದತ್ತಾಂಶವನ್ನು ಯಾರು ಬೇಕಾದರೂ ಕದಿಯಬಹುದು. ಈ ಕಾರಣಕ್ಕೆ ಮೊಬೈಲ್ ಬಳಕೆಯ ವೇಳೆ ಅತ್ಯಂತ ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು. ‘ಇಂದು ಕೆಲಸ ಕೊಡಿಸುವ ಆಮಿಷವೊಡ್ಡಿ ಟ್ಯೂಷನ್ ಹೆಸರಿನಲ್ಲೂ ಸೈಬರ್ ಅಪರಾಧ ಪ್ರಕರಣಗಳು ನಡೆಯುತ್ತಿರುತ್ತವೆ. ನಿಮ್ಮ ಮೊಬೈಲ್‌ಗಳಿಗೆ ಬರುವ ಎಪಿಕೆ ಫೈಲ್‌ಗಳ ಬಗ್ಗೆ ಎಚ್ಚರವಿರಲಿ. ಅವುಗಳನ್ನು ತೆರೆಯಲು ಹೋಗಬೇಡಿ. ಸೈಬರ್ ವಂಚನೆಗೆ ಒಳಗಾದರೆ 1930 ಸಹಾಯವಾಣಿಗೆ ಕರೆ ಮಾಡಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.