ADVERTISEMENT

ನಗರಸಭೆ ವಿರುದ್ಧ ದಸಂಸ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 14:11 IST
Last Updated 16 ಮಾರ್ಚ್ 2021, 14:11 IST
ಉಡುಪಿ: ನಗರಸಭೆ ಸ್ವಚ್ಛತಾ ಕಾರ್ಮಿಕನ ಮೇಲಿನ ಹಲ್ಲೆ ಖಂಡಿಸಿ ಹಾಗೂ ಹಲ್ಲೆ ಸಂತ್ರಸ್ತನ ಪರ ನಿಲ್ಲಲು ಮೀನಮೇಷ ಎಣಿಸಿದ ನಗರಸಭೆ ಅಧಿಕಾರಿಗಳ ವಿರುದ್ಧ ದಲಿತ ಸಂಘರ್ಷ ಸಮಿತಿ ಸದಸ್ಯರು ಮಂಗಳವಾರ ನಗರಸಭೆಯ ಎದುರು ಪ್ರತಿಭಟನೆ ನಡೆಸಿದರು.

ಸಮಿತಿಯ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ‘ದಲಿತ ಸ್ವಚ್ಛತಾ ಕಾರ್ಮಿಕನ ಮೇಲೆ ಹಲ್ಲೆ ನಡೆದ ಬಳಿಕ ಪ್ರಕರಣ ದಾಖಲಿಸಲು ಮೀನಮೀಷ ಎಣಿಸಲಾಯಿತು. ಸ್ಥಳ ಮಹಜರಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬರಲಿಲ್ಲ. ಬಳಿಕ ಹಲ್ಲೆಗೊಳಗಾದ ವ್ಯಕ್ತಿಯ ಪರವಾಗಿ ನಿಂತಿರುವುದಾಗಿ ಬಿಂಬಿಸಿಕೊಳ್ಳಲಾಯಿತು. ನಗರಸಭೆಗೆ ಪೌರ ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲ’ ಎಂದು ಟೀಕಿಸಿದರು.

ನಗರಸಭೆಯಲ್ಲಿ ಅವ್ಯವಹಾರಗಳು ನಡೆಯುತ್ತಿದ್ದು, ಮೃತಪಟ್ಟವರ ಹೆಸರಿನಲ್ಲಿ ಆರೋಗ್ಯ ಕಾರ್ಡ್‌ಗಳನ್ನು ಸೃಷ್ಟಿಸಲಾಗಿದೆ. ಹಣ ದುರುಪಯೋಗ ನಡೆದಿದೆ. ನಗರದಲ್ಲಿ ಕಸ ಸಂಗ್ರಹಣೆಯ ಟೆಂಡರ್ ಹಂಚಿಕೆ ಸಮರ್ಪಕವಾಗಿ ನಡೆದಿಲ್ಲ. ನಷ್ಟವಾಗುವಂತಹ ವಾರ್ಡ್‌ಗಳನ್ನು ಬಡ ಸ್ವಸಹಾಯ ಮಹಿಳಾ ಗುಂಪುಗಳಿಗೆ ನೀಡಲಾಗಿದೆ ಎಂದು ಆರೋಪಿಸಿದರು.

ADVERTISEMENT

ಸಮಿತಿಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಮಾತನಾಡಿ, ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಕಸ ಸಂಗ್ರಹಣೆ ಜವಾಬ್ದಾರಿ ಹೊತ್ತಿರುವ ಮಹಿಳಾ ಸ್ವಸಹಾಯ ಗುಂಪುಗಳಿಗೆ ಹಾಗೂ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಕೆಲಸದಿಂದ ವಜಾಗೊಳಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ದೂರಿದರು.

ಬಳಿಕ ಸಮಿತಿಯಿಂದ ಪೌರ ಕಾರ್ಮಿಕರ ಭದ್ರತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು, ವೇತನ ಹೆಚ್ಚಿಸಬೇಕು, ಪಿಎಫ್‌, ಆರೋಗ್ಯ ತಪಾಸಣೆ, ಸಮವಸ್ತ್ರ, ಶೂ, ಕೈಗವಸು ನೀಡಬೇಕು, ಕಸವಿಲೇವಾರಿ ಹೊಣೆ ನಗರಸಭೆ ಸದಸ್ಯರ ಬದಲು ನೇರವಾಗಿ ಸ್ವಸಹಾಯ ಸಂಘಗಳಿಗೆ ನೀಡಬೇಕು, ಎಸ್‌ಸಿ ಮೀಸಲು ನಿಧಿಯನ್ನು ಪ್ರಧಾನ ಮಂತ್ರಿ ವಸತಿ ಯೋಜನೆಗೆ ಬಳಸಬೇಕು, ಭ್ರಷ್ಟಾಚಾರದಲ್ಲಿ ಭಾಗಿಯಾದ ನಗರಸಭೆಯ ಅಧಿಕಾರಿಗಳನ್ನು ವರ್ಗಾವನೆ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿ.ಜಗದೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮುಖಂಡರಾದ ಪರಮೇಶ್ವರ ಉಪ್ಪೂರು, ಅಣ್ಣಪ್ಪ ನಕ್ರೆ, ಶ್ರೀಧರ್ ಕುಂಜಿಬೆಟ್ಟು, ದೇವು ಹೆಬ್ರಿ, ಶಂಕರದಾಸ್‌ ಚೆಂಡ್ಕಳ, ಸುಖೇಶ್ ಪಡುಬಿದ್ರಿ, ಶಿವಾನಂದ ಮೂಡುಬೆಟ್ಟು, ಮಂಜುನಾಥ್‌ ಬಾಳ್ಕುದ್ರು, ನಗರಸಭೆ ಸದಸ್ಯ ರಮೇಶ್ ಕಾಂಚನ್, ಮುಖಂಡರಾದ ಗಣೇಶ್ ನೆರ್ಗಿ, ಡಾ.ಸುನಿತಾ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.