ADVERTISEMENT

ಡಂಪಿಂಗ್‌ ಯಾರ್ಡ್‌: ತ್ಯಾಜ್ಯ ಕರಗಿಸಲು ಕ್ರಮ

ಅಲೆವೂರು: ಸ್ವಚ್ಛ ನಿಲ್ದಾಣ ಅಭಿಯಾನಕ್ಕೆ ಚಾಲನೆ ನೀಡಿ ಜಿಲ್ಲಾಧಿಕಾರಿ ಜಗದೀಶ್‌

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 15:01 IST
Last Updated 19 ನವೆಂಬರ್ 2019, 15:01 IST
‘ಸ್ವಚ್ಛ ನಿಲ್ದಾಣ– ಉಡುಪಿ ಸಿಟಿ ಬಸ್‌ ನಿಲ್ದಾಣ’ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಮಾತನಾಡಿದರು. –ಪ್ರಜಾವಾಣಿ ಚಿತ್ರ
‘ಸ್ವಚ್ಛ ನಿಲ್ದಾಣ– ಉಡುಪಿ ಸಿಟಿ ಬಸ್‌ ನಿಲ್ದಾಣ’ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಮಾತನಾಡಿದರು. –ಪ್ರಜಾವಾಣಿ ಚಿತ್ರ   

ಉಡುಪಿ: ಅಲೆವೂರಿನ ಪ್ರಗತಿನಗರದ ಡಂಪಿಂಗ್‌ ಯಾರ್ಡ್‌ನಲ್ಲಿ ಸಂಗ್ರಹಿಸಲಾಗಿರುವ ತ್ಯಾಜ್ಯವನ್ನು ತಮಿಳುನಾಡು ಮಾದರಿಯಲ್ಲಿ ಕರಗಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಈಗಾಗಲೇ ತಮಿಳುನಾಡಿನ ತಜ್ಞರೊಂದಿಗೆ ಚರ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದರು.

ಉಡುಪಿ ಸಿಟಿ ಬಸ್‌ ನಿಲ್ದಾಣದ ಸ್ವಚ್ಛತೆಯ ನಿರ್ವಹಣೆಗಾಗಿ ಉಡುಪಿ ಸಿಟಿ ಬಸ್‌ ನೌಕರರ ತುರ್ತು ಸೇವಾ ಸಂಘ ವತಿಯಿಂದ ಹಮ್ಮಿಕೊಂಡಿರುವ ‘ಸ್ವಚ್ಛ ನಿಲ್ದಾಣ– ಉಡುಪಿ ಸಿಟಿ ಬಸ್‌ ನಿಲ್ದಾಣ’ ಅಭಿಯಾನಕ್ಕೆ ಮಂಗಳವಾರ ಸಿಟಿ ಬಸ್‌ ನಿಲ್ದಾಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ತಮಿಳುನಾಡಿನ ಸುಮಾರು ನಗರಗಳಲ್ಲಿ ಡಂಪಿಂಗ್‌ ಯಾರ್ಡ್‌ಗಳನ್ನು ಬಯೋ ಮೈನಿಂಗ್‌ ಮಾಡುವ ಮೂಲಕ ಕರಗಿಸಿದ್ದಾರೆ. ಅದರಿಂದ ಉತ್ಪತ್ತಿಯಾಗುವ ಗೊಬ್ಬರವನ್ನು ರೈತರಿಗೆ ನೀಡಲಾಗಿದೆ. ಪ್ಲಾಸ್ಟಿಕ್‌ಗಳನ್ನು ಸಿಮೆಂಟ್‌ ಕಾರ್ಖಾನೆಗಳಿಗೆ ಹಾಗೂ ಮರುಬಳಕೆಗೆ ಉಪಯೋಗವಿಲ್ಲದ ತ್ಯಾಜ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಿದ್ದಾರೆ. ಹಾಗಾಗಿ ಇದೇ ಮಾದರಿಯಲ್ಲಿ ಅಲೆವೂರಿನ ಡಂಪಿಂಗ್‌ ಯಾರ್ಡ್‌ನ್ನು ಕರಗಿಸಲಾಗುವುದು ಎಂದರು.

ADVERTISEMENT

ಈ ಯೋಜನೆಗೆ ಎರಡರಿಂದ ಮೂರುವರೆ ಕೋಟಿ ರೂಪಾಯಿ ವೆಚ್ಚ ತಗುಲಲಿದ್ದು, ಅದನ್ನು ಸರ್ಕಾರದ ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಪಡೆಯಲಾಗುವುದು. ಆದಷ್ಟು ಬೇಗ ಡಿಪಿಆರ್‌ ತಯಾರಿಸಿ, ಟೆಂಡರ್‌ ಕರೆಯಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸ್ವಚ್ಛ ಭಾರತ್‌ ಆಂದೋಲನದಡಿ ಈಗಾಗಲೇ ಮಹತ್ವದ ಮೈಲುಗಲ್ಲು ಮುಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಒಣ ಕಸದ ಘಟಕ ಹಾಗೂ ಹಸಿ ಕಸದ ಘಟಕವನ್ನು ನಿರ್ಮಾಣ ಮಾಡಿ, ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಈಗಾಗಲೇ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ 40 ಗ್ರಾಮ ಪಂಚಾಯಿತಿಗಳಿಗೆ ಜಾಗ ನೀಡಲಾಗಿದ್ದು, ಇನ್ನು ಒಂದು ತಿಂಗಳೊಳಗೆ ಮತ್ತೆ ಶೇ 50ರಷ್ಟು ಪಂಚಾಯಿತಿಗಳಿಗೆ ಜಾಗವನ್ನು ನೀಡಲಾಗುವುದು. ನಂತರ ಪ್ರತಿ ಪಂಚಾಯಿತಿಗಳಲ್ಲಿಯೂ ಕಸ ವಿಲೇವಾರಿಗೆ ಜಾಗ ಗುರುತಿಸುವ ಕಾರ್ಯ ನಡೆಯಲಿದೆ ಎಂದರು.

ಕಸವನ್ನು ಹೆಚ್ಚೆಚ್ಚು ಉತ್ಪತ್ತಿ ಮಾಡುವ ಹೋಟೆಲ್‌, ಅಪಾರ್ಟ್‌
ಮೆಂಟ್‌, ಸಭೆ ಸಭಾಂಗಣಗಳ ಮಾಲೀಕರ ಸಭೆ ಕರೆದು, ಕಸವನ್ನು ಅವರೇ ವಿಲೇವಾರಿ ಮಾಡಲು ಸೂಚನೆ ನೀಡಲಾಗುವುದು. ಅದಕ್ಕೆ ಬೇಕಾಗುವ ವೈಜ್ಞಾನಿಕ ಸಲಹೆಗಳನ್ನು ನೀಡಲು ಜಿಲ್ಲಾಡಳಿತ ಸಿದ್ಧವಿದೆ. ಸಾರ್ವಜನಿಕರು ಹಸಿ ಕಸವನ್ನು ಕಾಂಪೋಸ್ಟ್‌ ಮಾಡಿ ತಮ್ಮ ಮನೆಯ ಗಿಡಗಳಿಗೆ ಬಳಸಬೇಕು. ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಮರ್ಪಕ ತ್ಯಾಜ್ಯ ನಿರ್ವಹಣೆಯಿಂದ ಸ್ವಚ್ಛತೆ ಕಾಪಾಡಲು ಸಾಧ್ಯ ಎಂದು ಹೇಳಿದರು.

ಉಡುಪಿ ಸಿಟಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಸುರೇಶ್‌ ನಾಯಕ್‌ ಕುಯಿಲಾಡಿ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ, ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿ, ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಸಹನಶೀಲ ಪೈ, ಸಿಟಿ ಬಸ್‌ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಸಂದೀಪ್‌, ಸಿಟಿ ಬಸ್‌ ನೌಕರರ ತುರ್ತು ಸೇವಾ ಸಂಘದ ಅಧ್ಯಕ್ಷ ಸಂತೋಷ್‌ ಪೂಜಾರಿ, ಸಿಟಿ ಬಸ್‌ ಮಾಲೀಕರಾದ ವದಿರಾಜ್‌, ವಿಜಯ ಭಂಡಾರಿ, ಸತೀಶ್‌, ದಯಾನಂದ, ನಾಗರಾಜ, ಭುವನೇಶ್ವರ್‌, ಕಲ್ಮಾಡಿ ಪ್ರಭಾಕರ, ವಾಸು ಗಾಣಿಗ, ಮುಖ್ಯೋಪಾಧ್ಯಾಯನಿ ಅಕ್ಷತಾ ಕಾಮತ್‌, ಪ್ರಧಾನ ಕಾರ್ಯದರ್ಶಿ ರಾಬರ್ಟ್‌ ಪಾಯಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.