ADVERTISEMENT

ಹೆಬ್ರಿ ವಂಡಾರಬೆಟ್ಟು ಶಾಲೆ: ಮುಖ್ಯಶಿಕ್ಷಕ ಸೇರಿ ಎಲ್ಲರೂ ವರ್ಗಾವಣೆ

ಶಿಕ್ಷಕರು ವರ್ಗಾವಣೆಗೊಳ್ಳದಂತೆ ಪೋಷಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 7:29 IST
Last Updated 1 ಆಗಸ್ಟ್ 2024, 7:29 IST
ಹೆಬ್ರಿ ಸಮೀಪದ ಚಾರ ವಂಡಾರಬೆಟ್ಟು ಶಾಲೆಯಲ್ಲಿ ನಡೆದ ಸಭೆಯಲ್ಲಿ ದಾನಿ, ಶಾಲೆಯ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ವಾದಿರಾಜ ಶೆಟ್ಟಿ ಮಾತನಾಡಿದರು
ಹೆಬ್ರಿ ಸಮೀಪದ ಚಾರ ವಂಡಾರಬೆಟ್ಟು ಶಾಲೆಯಲ್ಲಿ ನಡೆದ ಸಭೆಯಲ್ಲಿ ದಾನಿ, ಶಾಲೆಯ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ವಾದಿರಾಜ ಶೆಟ್ಟಿ ಮಾತನಾಡಿದರು   

ಹೆಬ್ರಿ: ಚಾರ ಪಂಚಾಯಿತಿ ವ್ಯಾಪ್ತಿಯ ವಂಡಾರಬೆಟ್ಟು ಸರ್ಕಾರಿ ಶಾಲೆಯಲ್ಲಿ ವರ್ಷದ ಆರಂಭದಲ್ಲೇ ಮುಖ್ಯ ಶಿಕ್ಷಕ ಸೇರಿದಂತೆ ಎಲ್ಲಾ ಕಾಯಂ ಶಿಕ್ಷಕರ ವರ್ಗಾವಣೆಯನ್ನು ಖಂಡಿಸಿ ಪೋಷಕರು, ಗ್ರಾಮಸ್ಥರು ಹಾಗೂ ಎಸ್‌ಡಿಎಂಸಿ ತುರ್ತು ಸಮಾಲೋಚನಾ ಸಭೆ ನಡೆಸಿ, ಶಿಕ್ಷಕರೆಲ್ಲರ ಮನವೊಲಿಸಲು ಯತ್ನಿಸಿದ ಪ್ರಸಂಗ ನಡೆಯಿತು.

60 ವರ್ಷಗಳ ಇತಿಹಾಸ ಇರುವ, ಗ್ರಾಮೀಣ ಭಾಗದ ಕುಟುಂಬದ ಮಕ್ಕಳಿಗೆ ಆಸರೆಯಾಗಿರುವ ವಂಡಾರಬೆಟ್ಟು ಶಾಲೆ ವಿದ್ಯಾಭಿಮಾನಿಗಳ, ದಾನಿಗಳ ನೆರವಿನಿಂದ ಉಳಿದಿದ್ದು ಇದೀಗ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ನಲ್ಲಿ ಮುಖ್ಯ ಶಿಕ್ಷಕರು ಸೇರಿದಂತೆ ಇಬ್ಬರು ಶಿಕ್ಷಕಿಯರು ವರ್ಗಾವಣೆಗೆ ಆಯ್ಕೆಯಾಗಿದ್ದಾರೆ.

ಹಿರಿಯ ಶಿಕ್ಷಕಿ ಇನ್ನೆರಡು ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದು, ಶಾಲೆಯಲ್ಲಿ ಪೂರ್ಣಾವಧಿ ಶಿಕ್ಷಕರಿಲ್ಲದ ಸ್ಥಿತಿ ನಿರ್ಮಾಣವಾಗಲಿದೆ, ಯಾವುದೇ ಶಿಕ್ಷಕರೂ ಶಾಲೆಯಿಂದ ವರ್ಗಾವಣೆಗೊಳ್ಳದಂತೆ ಕ್ಷೇತ್ರ ಶಿಕ್ಷಣಾಧಿಕಾರಿ, ಸಾರ್ವಜನಿಕ ಶಿಕ್ಷಣದ ಉಪ ನಿರ್ದೇಶಕರು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ದಾನಿ, ಶಾಲೆಯ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ವಾದಿರಾಜ ಶೆಟ್ಟಿ ಸಭೆಯಲ್ಲಿ ಒತ್ತಾಯಿಸಿದರು.

ADVERTISEMENT

ಕಾನೂನಾತ್ಮಕವಾಗಿ ಸರ್ಕಾರಿ ಶಾಲೆಯ ಶಿಕ್ಷಕರ ವರ್ಗಾವಣೆಯನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಆದರೆ ಈ ಶಾಲೆಯ ಉಳಿವಿಗಾಗಿ ಶಿಕ್ಷಕರಿಗೆ ಇಷ್ಟೊಂದು ಬೆಂಬಲ ನೀಡಿರುವ ಗ್ರಾಮಸ್ಥರಿಗೆ ಎಲ್ಲಾ ಕಾಯಂ ಶಿಕ್ಷಕರು ಶಾಲೆ ಬಿಟ್ಟು ಹೋಗಿ ಅತಿಥಿ ಶಿಕ್ಷಕರಿಂದ ಶಾಲೆ ನಿರ್ವಹಿಸಬೇಕಾದ ಭೀತಿ ಎದುರಾಗಿದೆ. ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಶೈಕ್ಷಣಿಕ ವರ್ಷದ ಮಾರ್ಚ್ ಅಂತ್ಯದವರೆಗೆ ಈ ಶಾಲೆಯಲ್ಲಿ ಶಿಕ್ಷಕರನ್ನು ಉಳಿಸಿ ಎಂದು ವಾದಿರಾಜ ಶೆಟ್ಟಿ ಒತ್ತಾಯಿಸಿದರು.

ಮಕ್ಕಳ ಸಂಖ್ಯೆ ಪಠ್ಯವಿಷಯಕ್ಕನುಗುಣವಾಗಿ ವರ್ಗಾವಣೆಗೊಳ್ಳಬಹುದಾಗಿದೆ. ಸರ್ಕಾರದ ನಿರ್ದೇಶನದಂತೆ ತಾಲ್ಲೂಕಿನಲ್ಲಿ ಶೇ 25ಕ್ಕಿಂತ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇದ್ದರೆ ಆ ತಾಲ್ಲೂಕಿನಿಂದ ಶಿಕ್ಷಕರು ವರ್ಗಾವಣೆ ಹೊಂದುವಂತಿಲ್ಲ. ಕಳೆದ ಬಾರಿಯೂ ಕಾರ್ಕಳ ತಾಲ್ಲೂಕಿನಲ್ಲಿ ಶೇ 25ರಷ್ಟು ಹುದ್ದೆ ಖಾಲಿ ಇದ್ದದ್ದರಿಂದ ವರ್ಗಾವಣೆ ಸಾಧ್ಯವಾಗಿಲ್ಲ. ಆದರೆ ಈ ಬಾರಿ ಶೇ 23ರಷ್ಟು ಹುದ್ದೆ ಖಾಲಿ ಇರುವುದರಿಂದ 10ರಿಂದ 15 ಮಂದಿ ಶಿಕ್ಷಕರ ವರ್ಗಾವಣೆಗೆ ಅವಕಾಶ ದೊರೆತಿದೆ. ಕಾರ್ಕಳ ತಾಲ್ಲೂಕಿನಲ್ಲಿ 142 ಅತಿಥಿ ಶಿಕ್ಷಕರ ಅವಶ್ಯಕತೆಯಿದ್ದು 85 ಅತಿಥಿ ಶಿಕ್ಷಕರ ನೇಮಕಾತಿ ನಡೆದಿದೆ. ನಾನು ಬಿಆರ್‌ಪಿ ಪರೀಕ್ಷೆ ಬರೆದಿದ್ದು ಫಲಿತಾಂಶ ಬಂದಿದ್ದು ಕೌನ್ಸೆಲಿಂಗ್ ಬಾಕಿ ಇದೆ. ಬಿಆರ್‌ಪಿಯಾಗಿ ಶಾಲೆ ಬಿಟ್ಟು ಹೋದರೆ ಈ ಶಾಲೆಯಲ್ಲಿ ಶಿಕ್ಷಕರ ಹುದ್ದೆ ಖಾಲಿ ಉಳಿಯುತ್ತದೆ ಎಂಬ ದೃಷ್ಟಿಯಿಂದ ವರ್ಗಾವಣೆಗೊಳ್ಳುತ್ತಿದ್ದೇನೆ.
–ಸತೀಶ್‌ಬಾಬು ವಂಡಾರಬೆಟ್ಟು, ಶಾಲಾ ಮುಖ್ಯ ಶಿಕ್ಷಕ

ಬದಲಿ ವ್ಯವಸ್ಥೆಯಾದ ನಂತರ ಇಲ್ಲಿಂದ ತೆರಳಿ ಎಂದು  ಪೋಷಕರೆಲ್ಲರೂ ಶಾಲೆಯಲ್ಲಿದ್ದ ಶಿಕ್ಷಕರನ್ನು ಒತ್ತಾಯಿಸಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಜಲಜಾ, ಕಾರ್ಯದರ್ಶಿ ನಾಗೇಂದ್ರ, ಪಂಚಾಯಿತಿ ಸದಸ್ಯ ದೇವದಾಸ ಶೆಟ್ಟಿ, ವಾಸುದೇವ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಾದಿರಾಜ ಶೆಟ್ಟಿ ಸೇರಿದಂತೆ ಪೋಷಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.