ADVERTISEMENT

ತೆರೆದ ಶಾಲೆಗಳು; ತರಗತಿ ಪಾಠಕ್ಕೆ ಒಗ್ಗಬೇಕಿದೆ ಮಕ್ಕಳು

ಆನ್‌ಲೈನ್‌ನಿಂದ ಆಫ್‌ಲೈನ್ ಶಿಕ್ಷಣಕ್ಕೆ ಹೊಂದಿಕೊಳ್ಳಲು ವಿದ್ಯಾರ್ಥಿಗಳಿಗೆ ಕಾಡುತ್ತಿರುವ ಸಮಸ್ಯೆಗಳು

ಬಾಲಚಂದ್ರ ಎಚ್.
Published 21 ಫೆಬ್ರುವರಿ 2021, 14:32 IST
Last Updated 21 ಫೆಬ್ರುವರಿ 2021, 14:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಕೋವಿಡ್‌–19 ಕಾರಣದಿಂದ ತರಗತಿಯಲ್ಲಿ ಕುಳಿತು ಪಾಠ ಕೇಳುವ ಅವಕಾಶ ವಂಚಿತರಾಗಿದ್ದ ವಿದ್ಯಾರ್ಥಿಗಳು ಈಗ ಮರಳಿ ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಸರ್ಕಾರ ಹಂತ ಹಂತವಾಗಿ ಮಕ್ಕಳನ್ನು ಶಾಲೆಗೆ ಕರೆ ತರುತ್ತಿದೆ. ಆದರೆ, ಆನ್‌ಲೈನ್‌ ಶಿಕ್ಷಣಕ್ಕೆ ಒಗ್ಗಿಕೊಂಡಿದ್ದ ಮಕ್ಕಳನ್ನು ಮತ್ತೆ ತರಗತಿಯಲ್ಲಿ ಕುಳಿತು ಪಾಠ ಕೇಳುವ ವ್ಯವಸ್ಥೆಗೆ ಒಗ್ಗಿಸುವುದು ಶಿಕ್ಷಕರಿಗೆ ಸವಾಲಾಗಿ ಪರಿಣಮಿಸಿದೆ.

ಏಕಾಗ್ರತೆ ಸಮಸ್ಯೆ:ಲಾಕ್‌ಡೌನ್‌ನಲ್ಲಿ ಮುಚ್ಚಿದ್ದ ಶಾಲೆಗಳು ಈಗ ಹಂತ ಹಂತವಾಗಿ ತೆರೆಯುತ್ತಿದ್ದು, ಮಕ್ಕಳು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಆದರೆ ಪಾಠ ಕೇಳುವಾಗ ಏಕಾಗ್ರತೆಯ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೋವಿಡ್ ಪೂರ್ವದಲ್ಲಿನ ಚುರುಕುತನ ಕಾಣುತ್ತಿಲ್ಲ. ಪಾಠ ಆಲಿಸುವಾಗ ಆಲಸ್ಯದ ಲಕ್ಷಣಗಳು ಕಾಣುತ್ತಿವೆ. ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯೂ ಕಡಿಮೆಯಾಗಿದೆ. ತರಗತಿಯಲ್ಲಿದ್ದ ಶಿಸ್ತು ಕಾಣುತ್ತಿಲ್ಲ ಎನ್ನುತ್ತಾರೆ ಖಾಸಗಿ ಶಾಲೆಯ ಶಿಕ್ಷಕರೊಬ್ಬರು.

ಆನ್‌ಲೈನ್‌ ಶಿಕ್ಷಣಕ್ಕೆ ಒಗ್ಗಿಕೊಂಡಿದ್ದರಿಂದ ಮಕ್ಕಳು ಮತ್ತೆ ತರಗತಿ ಶಿಕ್ಷಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು. ಈ ನಿಟ್ಟಿನಲ್ಲಿ ಮಕ್ಕಳ ಸಮಸ್ಯೆಗಳನ್ನು ಅರಿತು ಶಿಕ್ಷಕರು ಪಾಠ ಮಾಡಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಅವಧಿಯೂ ಕಡಿಮೆ ಇರುವುದರಿಂದ ಹಿಂದಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಬೋಧನೆ ಮಾಡಬೇಕಾದ ಹೊಣೆಗಾರಿಕೆ ಇದೆ. ಬೋಧನೆಯಿಂದ ದೂರ ಉಳಿದಿದ್ದ ಶಿಕ್ಷಕರಿಗೂ ಸಾಕಷ್ಟು ಪೂರ್ವ ತಯಾರಿ ಅಗತ್ಯವಿದ್ದು, ಎಲ್ಲ ಅಗತ್ಯ ಕ್ರಮಗಳೊಂದಿಗೆ ಪಾಠ ಮಾಡಲು ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಬದಲಾದ ಶೈಕ್ಷಣಿಕ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ತಿಳಿಸಲಾಗಿದೆ ಎನ್ನುತ್ತಾರೆ ಖಾಸಗಿ ಶಾಲೆಯ ಮುಖ್ಯಸ್ಥರು.

ADVERTISEMENT

ಮಕ್ಕಳ ಕಲಿಕಾ ಮಟ್ಟ ಕುಸಿಯದಂತೆ ಶಿಕ್ಷಣ ಇಲಾಖೆ ಅಗತ್ಯ ಕ್ರಮ ತೆಗೆದುಕೊಂಡಿದೆ. ವಿದ್ಯಾರ್ಥಿಗಳ ಕಲಿಕಾ ಮಟ್ಟ ಅವಲೋಕಿಸಲು ತರಗತಿಗೆ ಹಾಜರಾದ ವಿದ್ಯಾರ್ಥಿಗಳಿಗೆ ಆರಂಭಿಕ ಪರೀಕ್ಷೆ ನಡೆಸಿ ಕಲಿಕಾ ಮಟ್ಟವನ್ನು ಗುರುತಿಸಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದಿರುವ ಹಾಗೂ ಪಾಠವನ್ನು ಗ್ರಹಿಸಲು ಕಷ್ಟಪಡುತ್ತಿರುವ ಮಕ್ಕಳನ್ನು ಗುರುತಿಸಿ ವಿಶೇಷ ತರಗತಿ, ಗುಂಪು ಅಧ್ಯಯನಗಳಲ್ಲಿ ಕಲಿಸಲಾಗುತ್ತಿದೆ. ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಚಿಕಿತ್ಸಕಾ ಬೋಧನಾ ಕ್ರಮ ಅಳವಡಿಸಿಕೊಳ್ಳಲಾಗಿದೆ ಎನ್ನುತ್ತಾರೆ ಡಿಡಿಪಿಐ ಎನ್‌.ಎಚ್‌.ನಾಗೂರ.

ತರಗತಿ ಪಾಠಕ್ಕೆ ಮಕ್ಕಳು ಉತ್ಸುಕತೆ:ಲಾಕ್‌ಡೌನ್ ಅವಧಿಯಲ್ಲಿ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ವಿದ್ಯಾಗಮದ ಮೂಲಕ ಪಾಠ ಪ್ರವಚನ ನೀಡಲಾಗಿತ್ತು. ಖಾಸಗಿ ಶಾಲೆಗಳು ಆನ್‌ಲೈನ್‌ ಮೂಲಕ ಶಿಕ್ಷಣ ನೀಡಿದರೆ, ಸರ್ಕಾರಿ ಶಾಲೆಗಳ ಮಕ್ಕಳಿಗೆ ವಾಟ್ಸ್‌ಆ್ಯಪ್‌, ಸ್ಮಾರ್ಟ್‌ ಕ್ಲಾಸ್‌ ಮೂಲಕ ಶಿಕ್ಷಣ ನೀಡಲಾಗಿತ್ತು. ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಹಾಗಾಗಿ, ವಿದ್ಯಾರ್ಥಿಗಳು ಮೊದಲಿನಂತೆ ಶಾಲೆಗೆ ಬರಲು, ಪಾಠ ಕೇಳಲು ಉತ್ಸುಕತೆ ತೋರುತ್ತಿದ್ದಾರೆ. ಆನ್‌ಲೈನ್‌ನಿಂದ ಆಫ್‌ಲೈನ್‌ಗೆ ಮರಳುತ್ತಿರುವುದು ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಖುಷಿ ಇದೆ ಎನ್ನುತ್ತಾರೆ ಡಿಡಿಪಿಐ.

ಜ.1ರಿಂದ 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲಿ ವಿದ್ಯಾಗಮ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತರಗತಿ ಶಿಕ್ಷಣಕ್ಕೆ ಸರ್ಕಾರ ಅನುಮತಿ ನೀಡಿದೆ. ಮಕ್ಕಳು ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಕಲಿಕೆಯಲ್ಲಿ ಗಂಭೀರವಾದ ಸಮಸ್ಯೆಗಳು ಕಂಡುಬಂದಿಲ್ಲ. ವಿದ್ಯಾಗಮಕ್ಕೆ ಹೋಲಿಸಿದರೆ ನೇರ ತರಗತಿಯಲ್ಲಿ ಕಲಿಕಾ ಮಟ್ಟ ಹೆಚ್ಚಾಗಿರುವುದು ಕಂಡುಬಂದಿದೆ ಎಂದರು.

ಫೆ.22ರಿಂದ 6 ರಿಂದ 9ನೇ ತರಗತಿ ಮಕ್ಕಳಿಗೆ ತರಗತಿ ಶಿಕ್ಷಣ ಆರಂಭವಾಗಲಿದ್ದು, ಶಿಕ್ಷಣ ಇಲಾಖೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಶಿಕ್ಷಕರು ಕೂಡ ಬೋಧನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿಯಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಾಗಿರುವುದರಿಂದ ಮಕ್ಕಳಿಗಾಗಲಿ, ಶಿಕ್ಷಕರಿಗಾಗಲಿ ಹೆಚ್ಚಿನ ಸಮಸ್ಯೆ ಎದುರಾಗಿಲ್ಲ ಎನ್ನುತ್ತಾರೆ ಡಿಡಿಪಿಐ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.