ADVERTISEMENT

ಸಂಭ್ರಮದ ಈದ್‌ ಉಲ್‌ ಫಿತ್ರ್‌ ಆಚರಣೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 15:49 IST
Last Updated 5 ಜೂನ್ 2019, 15:49 IST
ಪುಟಾಣಿಗಳು ಆಲಿಂಗಿಸಿಕೊಂಡು ಪರಸ್ಪರ ರಂಜಾನ್‌ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ಪ್ರಜಾವಾಣಿ ಚಿತ್ರ
ಪುಟಾಣಿಗಳು ಆಲಿಂಗಿಸಿಕೊಂಡು ಪರಸ್ಪರ ರಂಜಾನ್‌ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ಪ್ರಜಾವಾಣಿ ಚಿತ್ರ   

ಉಡುಪಿ: ಜಿಲ್ಲೆಯಾದ್ಯಂತ ಬುಧವಾರ ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಈದ್‌ ಉಲ್‌ ಫಿತ್ರ್‌ ಹಬ್ಬವನ್ನು ಆಚರಿಸಿದರು. ಈ ಮೂಲಕ ಒಂದು ತಿಂಗಳ ರಂಜಾನ್ ಮಾಸದ ಉಪವಾಸವನ್ನು ಅಂತ್ಯಗೊಳಿಸಿದರು.

ಉಡುಪಿಯ ಜಾಮೀಯ ಮಸೀದಿಯಲ್ಲಿ ಬೆಳಿಗ್ಗೆ 8.30ಕ್ಕೆ ಮೌಲಾನ ಅಬ್ದುರ್‌ ರಶೀದ್ ನದ್ವಿ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ನೂರಾರು ಮುಸ್ಲಿಮರು ನಮಾಜ್ ಮಾಡಿ ಅಲ್ಲಾಹುವಿನ ಸ್ಮರಣೆ ಮಾಡಿದರು.

ಅಂಜುಮಾನ್‌ ಮಸೀದಿಯಲ್ಲಿ ಬೆಳಿಗ್ಗೆ 9 ಗಂಟೆಗೆ ಮೌಲಾನ ಇನಾಯುತುಲ್ಲಾ ರಝ್ವಿ ನೇತೃತ್ವದಲ್ಲಿ ನಮಾಝ್‌, ಪ್ರವಚನ ಹಾಗೂ ಧಾರ್ಮಿಕ ಸಂದೇಶ ನಡೆಯಿತು. ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು.ಹಬ್ಬದ ಹಿನ್ನೆಲೆಯಲ್ಲಿ ಹೊಸಬಟ್ಟೆಗಳನ್ನು ಧರಿಸಿದ್ದ ಹಿರಿಯರು ಹಾಗೂ ಮಕ್ಕಳು ಗಮನ ಸೆಳೆದರು.

ADVERTISEMENT

ಉಡುಪಿಯ ಅಂಜುಮಾನ್‌ ಮಸೀದಿ, ಇಂದ್ರಾಳಿಯ ನೂರಾನಿ ಮಸೀದಿ, ಮಣಿಪಾಲದ ಜುಮಾ ಮಸೀದಿ, ಆತ್ರಾಡಿಯ ಜುಮಾ ಮಸೀದಿ, ಸಂತೋಷ್‌ ನಗರದ ಬದ್ರಿಯಾ ಜುಮಾ ಮಸೀದಿ, ಮಲ್ಪೆ ಅಬೂಬಕ್ಕರ್‌ ಸಿದ್ದೀಕ್‌ ಮಸೀದಿ, ಮಲ್ಪೆ ಮದೀನ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.

ಬ್ರಹ್ಮಗಿರಿ ನಾಯರ್‌ಕೆರೆ ಹಾಶ್ಮಿ ಮಸೀದಿಯಲ್ಲಿ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಎಲ್ಲರ ಮೊಗದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು.

ರಂಜಾನ್‌ನ ವಿಶೇಷ ಪ್ರಾರ್ಥನೆಯ ಬಳಿಕ ಮಸೀದಿಯ ಬಳಿ ಬಡವರಿಗೆ ದಾನ ಮಾಡಲಾಯಿತು. ಬಳಿಕ ಸಂಬಂಧಿಗಳ ಮನೆಗೆ ತೆರಳಿ ಹಬ್ಬದ ಶುಭಾಶಯ ತಿಳಿಸಿ ಹಿರಿಯರ ಆಶೀರ್ವಾದ ಪಡೆಯಲಾಯಿತು. ಈದ್ ಆಚರಣೆ ಹಿನ್ನೆಲೆಯಲ್ಲಿ ರಾತ್ರಿ ಬಗೆಬಗೆಯ ಮಾಂಸದ ಖಾದ್ಯಗಳನ್ನು ತಯಾರಿಸಿ ಹಬ್ಬದ ಸಂಭ್ರಮವನ್ನು ಒಟ್ಟಾಗಿ ಸವಿಯಲಾಯಿತು.

ಕುಂದಾಪುರ ಜುಮಾ ಮಸೀದಿಯಿಂದ ಈದ್‌ ಮೆರವಣಿಗೆ ಹೊರಟು, ಕುಂದಾಪುರ ಈದ್ಗಾ ಮೈದಾನದಲ್ಲಿ ಧರ್ಮಗುರು ಮೌಲಾನ ಮುಫ್ತಿ ಸಮಿಯುಲ್ಲಾ ನೇತೃತ್ವದಲ್ಲಿ ಈದ್‌ ವಿಶೇಷ ಪ್ರಾರ್ಥನೆ ನೆರವೇರಿತು. ಕಾರ್ಕಳ ಜಾಮೀಯ ಮಸೀದಿಯಲ್ಲಿ ಮೌಲಾನ ಜಾರ್ಹಿ ಅಹ್ಮದ್‌ ಅಲ್ಕಾಸ್ಮಿ ಹಾಗೂ ಬಂಗ್ಲೆಗುಡ್ಡೆ ಸಲ್ಮಾನ್‌ ಜುಮಾ ಮಸೀದಿಯಲ್ಲಿ ಮೌಲಾನ ಅಹ್ಮದ್‌ ಶರೀಫ್‌ ಸಅದಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.