ADVERTISEMENT

ಮಕ್ಕಳ ಆಸಕ್ತಿಯ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಿ–ರವೀಂದ್ರ ರೈ

ರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 14:46 IST
Last Updated 2 ಜುಲೈ 2019, 14:46 IST
ಬ್ಯಾಡ್ಮಿಂಟನ್‌ ಆಡುವ ಮೂಲಕ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಗೆ ಉಡುಪಿ ಜಿಲ್ಲಾಽಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಮಂಗಳವಾರ ಚಾಲನೆ ನೀಡಿದರು.ಪ್ರಜಾವಾಣಿ ಚಿತ್ರ
ಬ್ಯಾಡ್ಮಿಂಟನ್‌ ಆಡುವ ಮೂಲಕ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಗೆ ಉಡುಪಿ ಜಿಲ್ಲಾಽಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಮಂಗಳವಾರ ಚಾಲನೆ ನೀಡಿದರು.ಪ್ರಜಾವಾಣಿ ಚಿತ್ರ   

ಉಡುಪಿ: ಇಂದು ಕ್ರೀಡೆಯಲ್ಲಿ ಸಾಕಷ್ಟು ಅವಕಾಶಗಳಿದ್ದು, ಮಕ್ಕಳು ಆಸಕ್ತಿ ತೋರಿಸುವ ಕ್ಷೇತ್ರಗಳಿಗೆ ಪೋಷಕರು ಪ್ರೋತ್ಸಾಹ ನೀಡಬೇಕು. ಇದರಿಂದ ಮಕ್ಕಳು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಬ್ಯಾಂಕ್‌ ಆಫ್‌ ಬರೋಡಾದ ಪ್ರಾದೇಶಿಕ ಪ್ರಬಂಧಕ ರವೀಂದ್ರ ರೈ ಅಭಿಪ್ರಾಯಪಟ್ಟರು.

ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ವತಿಯಿಂದ ಬ್ಯಾಂಕ್‌ ಆಫ್‌ ಬರೋಡ ಸಹ ಪ್ರಾಯೋಜಕತ್ವದಲ್ಲಿ13 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗೆ ಏರ್ಪಡಿಸಲಾದ ಆರು ದಿನಗಳ ಅಖಿಲ ಭಾರತ ಸಬ್‌ ಜ್ಯೂನಿಯರ್‌ ರ್‍ಯಾಂಕಿಂಗ್‌ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಮೆಂಟ್‌ಗೆ ಮಂಗಳವಾರ ಮಣಿಪಾಲದ ಮರಿನಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಆಫ್‌ ಇಂಡಿಯಾದ ವೀಕ್ಷಕ ಸುಖಾಂತ ದಾಸ್‌ ಮಾತನಾಡಿ, ಇಂದು ಭಾರತದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಯುವಜನತೆಯಿಂದ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಕ್ರಿಕೆಟ್‌ ನಂತರ ಬ್ಯಾಡ್ಮಿಂಟನ್‌ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಆದ್ದರಿಂದ ಈ ಕ್ರೀಡೆಯಲ್ಲಿ ಮಕ್ಕಳಿಗೆ ಉತ್ತಮ ಭವಿಷ್ಯ ಇದೆ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ)ಯ ಸಹಕುಲಪತಿ ಡಾ. ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪೂರಕವಾಗಿವೆ. ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಉತ್ತಮ ಮಾನಸಿಕ ಹಾಗೂ ದೈಹಿಕ ಕ್ಷಮತೆಯನ್ನು ಕಾಪಾಡಿಕೊಂಡು ಬರಬಹುದು ಎಂದರು.

ಬ್ಯಾಡ್ಮಿಂಟನ್‌ ಆಡುವ ಮೂಲಕ ಪಂದ್ಯಾಟಕ್ಕೆ ಉಡುಪಿ ಜಿಲ್ಲಾಽಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕ್ರೀಡಾಕೂಟಕ್ಕೆ ಬ್ಯಾಂಕ್‌ ಆಫ್‌ ಬರೋಡಾದಿಂದ ನೀಡಲಾದ ಐದು ಲಕ್ಷ ರೂ. ಮೊತ್ತದ ಚೆಕ್‌ನ್ನು ರವೀಂದ್ರ ರೈ ಅವರು ಅಸೋಸಿಯೇಶನ್‌ ಅಧ್ಯಕ್ಷ ರಘುಪತಿ ಭಟ್‌ ಅವರಿಗೆ ಹಸ್ತಾಂತರಿಸಿದರು.

ಉಡುಪಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ದಿನಕರ ಬಾಬು, ಉದ್ಯಮಿಗಳಾದ ಗುರ್ಮೆ ಸುರೇಶ್‌ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಬಡಗಬೆಟ್ಟು ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಮೀನು ಮಾರಾಟ -ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಎ. ಸುವರ್ಣ, ಮಾಹೆ ಕ್ರೀಡಾ ನಿರ್ದೇಶಕ ಡಾ. ವಿನೋದ್‌ ನಾಯಕ್‌ ಉಪಸ್ಥಿತರಿದ್ದರು.

ಉಡುಪಿ ಶಾಸಕ ಹಾಗೂ ಅಸೋಸಿಯೇಶನ್‌ ಅಧ್ಯಕ್ಷ ಕೆ. ರಘುಪತಿ ಭಟ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ವೈ. ಸುಧೀರ್‌ ಕುಮಾರ್‌ ವಂದಿಸಿದರು. ಶೋಭಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.