ADVERTISEMENT

ಉಡುಪಿ | ಮಳೆಗಾಲ ಸನಿಹ: ಸಿದ್ಧತೆ ದೂರ

ಇನ್ನೂ ನಡೆದಿಲ್ಲ ಇಂದ್ರಾಣಿ ನದಿಯ ಹೂಳು ತೆಗೆಯುವ ಕಾಮಗಾರಿ

ನವೀನ್‌ಕುಮಾರ್ ಜಿ
Published 21 ಏಪ್ರಿಲ್ 2025, 7:34 IST
Last Updated 21 ಏಪ್ರಿಲ್ 2025, 7:34 IST
ಪ್ರಭಾಕರ ಪೂಜಾರಿ
ಪ್ರಭಾಕರ ಪೂಜಾರಿ   

ಉಡುಪಿ: ಮಳೆಗಾಲ ಸನಿಹವಾಗುತ್ತಿದ್ದರೂ ನಗರದಲ್ಲಿ ಸಿದ್ಧತೆ ಕಾರ್ಯ ಚುರುಕಾಗದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ನಗರದ ಕೆಲವೆಡೆ ಚರಂಡಿಗಳ ಸ್ವಚ್ಛತೆ ಕಾರ್ಯ ಆರಂಭಗೊಂಡರೂ ಇಂದ್ರಾಣಿ ನದಿಯ ಹೂಳೆತ್ತುವ ಕಾಮಗಾರಿ ಇನ್ನೂ ಆರಂಭಗೊಳ್ಳದಿರುವುದು ಜನರ ಅಸಮಧಾನಕ್ಕೆ ಕಾರಣವಾಗಿದೆ.

ಮಳೆಗಾಲ ಬಂತೆಂದರೆ ನಗರದ ಕೆಲವು ಪ್ರದೇಶಗಳ ಜನರಲ್ಲಿ ಭಯಾತಂಕ ಮೂಡುತ್ತದೆ. ಅದಕ್ಕೆ ಮುಖ್ಯ ಕಾರಣ ನೆರೆ ಹಾವಳಿ. ತಗ್ಗು ಪ್ರದೇಶಗಳ ಕೆಲವು ಅಪಾರ್ಟ್‌ಮೆಂಟ್‌ಗಳ ತಳ ಮಹಡಿ, ಅಂಗಡಿ, ಮನೆಗಳಿಗೆ ಮಳೆ ನೀರು ನುಗ್ಗುವುದು ಪ್ರತಿವರ್ಷ ಸಾಮಾನ್ಯ ಎಂಬಂತಾಗಿದೆ.

ADVERTISEMENT

ನೆರೆ ಹಾವಳಿ ವೇಳೆ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆ ಪ್ರತಿ ವರ್ಷವೂ ನಡೆಯುತ್ತದೆ. ಮಳೆ ನೀರು ಮನೆಗಳಿಗೆ ನುಗ್ಗಿ ಎಲೆಕ್ಟ್ರಾನಿಕ್‌ ವಸ್ತುಗಳು ಸೇರಿದಂತೆ ಪ್ರತಿವರ್ಷ ಬೆಲೆಬಾಳುವ ಸಾಮಗ್ರಿಗಳು ಹಾಳಾಗುತ್ತಿವೆ ಎನ್ನುತ್ತಾರೆ ನೆರೆಬಾಧಿತ ಪ್ರದೇಶದ ಜನರು.

ಮಳೆಗಾಲ ಆರಂಭವಾಗುವುದಕ್ಕೂ ಮುನ್ನ ನಗರದಾದ್ಯಂತ ಚರಂಡಿ, ರಾಜಕಾಲುವೆಗಳ ಹೂಳು ತೆಗೆದು ಸ್ವಚ್ಛಗೊಳಿಸದ ಕಾರಣ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪ. ಇನ್ನೇನು ಮಳೆಗಾಲ ಆರಂಭವಾಗಲಿದೆ ಎನ್ನುವಾಗ ನಗರಸಭೆಯವರು ಚರಂಡಿ ಸ್ವಚ್ಛಗೊಳಿಸಲು ಹೊರಡುತ್ತಾರೆ. ಸಾಕಷ್ಟು ಮೊದಲೇ ಈ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎಂದು ಅವರು ದೂರುತ್ತಾರೆ.

ನಗರದ ಗುಂಡಿಬೈಲ್, ಶ್ರೀಕೃಷ್ಣ ಮಠದ ಪಾರ್ಕಿಂಗ್‌ ಪ್ರದೇಶ, ಬನ್ನಂಜೆ, ಬಡಗುಪೇಟೆ ಮೊದಲಾದ ಪ್ರದೇಶಗಳಲ್ಲಿ ಪ್ರತಿ ವರ್ಷ ನೆರೆಹಾವಳಿ ಕಾಡುತ್ತದೆ. ಆದರೆ ಅದಕ್ಕೆ ಶಾಶ್ವತ ಪರಿಹಾರ ಒದಗಿಲ್ಲ. ಮಳೆ ನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಇರದಿರುವುದೇ ನೆರೆಗೆ ಕಾರಣ ಎನ್ನುತ್ತಾರೆ ನಗರವಾಸಿಗಳು.

ಕಟ್ಟಡಗಳನ್ನು ನಿರ್ಮಿಸುವ ಕೆಲವು ಖಾಸಗಿ ವ್ಯಕ್ತಿಗಳು, ಕೆಲ ಮನೆಯವರು ಚರಂಡಿ ಜಾಗವನ್ನು ಒತ್ತುವರಿ ಮಾಡುವುದರಿಂದಲೂ ಚರಂಡಿ ಅಗಲ ಕಿರಿದಾಗಿ ಮಳೆ ನೀರು ಹರಿದು ಹೋಗುತ್ತಿಲ್ಲ ಎಂಬುದು ಜನರ ಆರೋಪವಾದರೂ ಚರಂಡಿ ಒತ್ತುವರಿ ತೆರವುಗೊಳಿಸುವ ಕಾರ್ಯ ನಡೆದಿಲ್ಲ. ಅವೈಜ್ಞಾನಿಕ ರಸ್ತೆ ಕಾಮಗರಿಗಳಿಂದಲೂ ಕೆಲವೆಡೆ ಮಳೆಗಾಲದಲ್ಲಿ ಸಮಸ್ಯೆ ಉಂಟಾಗುತ್ತಿದೆ. ಮುಖ್ಯವಾಗಿ ಕರಾವಳಿ ಬೈಪಾಸ್‌ ಬಳಿಯಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಾರಣ ಜೋರಾಗಿ ಮಳೆ ಬಂದಾಗ ಸರ್ವಿಸ್ ರಸ್ತೆ ಕೆರೆಯಂತಾಗುತ್ತದೆ.

ಈ ಬಾರಿ ಅಂಬಲಪಾಡಿಯಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳೂ ಸೇರಿದಂತೆ ಹೆಚ್ಚಿನ ವಾಹನಗಳು ಸರ್ವಿಸ್‌ ರಸ್ತೆಗಳಲ್ಲೇ ಸಂಚರಿಸುತ್ತವೆ. ಈ ಸರ್ವಿಸ್ ರಸ್ತೆಗಳಲ್ಲಿ ಮಳೆ ನೀರು ನಿಂತರೆ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗಲಿದೆ ಎಂದು ಜನರು ಅಭಿಪ್ರಾಯಪಡುತ್ತಾರೆ. ಮಳೆಗಾಲ ಎದುರಿಸಲು ನಗರ ಸಭೆಯವರು ಈಗಲೇ ಸಿದ್ಧತೆ ಆರಂಭಿಸಬೇಕು ಎಂದೂ ಆಗ್ರಹಿಸಿದ್ದಾರೆ.

ಇಂದ್ರಾಣಿ ನದಿಯಲ್ಲಿ ಹೂಳು ತುಂಬಿರುವುದು   ಪ್ರಜಾವಾಣಿ ಚಿತ್ರಗಳು: ಉಮೇಶ್‌ ಮಾರ್ಪಳ್ಳಿ
ಕೆಲವರು ಕಸವನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿಸಿ ಚರಂಡಿಗೆ ಎಸೆಯುತ್ತಿದ್ದಾರೆ. ಇದರಿಂದ ಮಳೆಗಾಲದಲ್ಲಿ ಚರಂಡಿಗಳು ಕಟ್ಟಿನಿಂತು ನೀರು ರಸ್ತೆಯಲ್ಲೇ ಹರಿಯುತ್ತದೆ.
–ಗೋಪಾಲಕೃಷ್ಣ, ಅಂಬಲಪಾಡಿ
ನಗರದ ನೆರೆ ಬರುವ ಪ್ರದೇಶಗಳಲ್ಲಿ ಆದ್ಯತೆಯ ಮೇರೆಗೆ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಜೋರಾಗಿ ಮಳೆ ಬಂದರೆ ಸಮಸ್ಯೆಯಾಗಬಹುದು.
–ವಿದ್ಯಾಧರ, ಗುಂಡಿಬೈಲ್‌

‘ಟೆಂಡರ್‌ ಕರೆಯಲಾಗುವುದು’

ನಗರಸಭೆಯ ವ್ಯಾಪ್ತಿಯಲ್ಲಿ ಚರಂಡಿಗಳ ಸ್ವಚ್ಛತೆ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ. ರಾಜಕಾಲುವೆಗಳು ದೊಡ್ಡ ಚರಂಡಿಗಳ ಹೂಳು ತೆಗೆಸುವ ಕಾರ್ಯಕ್ಕೆ ಶೀಘ್ರ ಟೆಂಡರ್‌ ಕರೆಯಲಾಗುವುದು. ಈ ಬಾರಿ ಹೂಳು ತೆಗೆಯುವ ಕೆಲಸವನ್ನು ಬೇಗ ಆರಂಭಿಸಲಿದ್ದೇವೆ. 3 ತಿಂಗಳ ಅವಧಿಗೆ ಪ್ರತಿ ದಿನ 50 ಜನ ಕಾರ್ಮಿಕರನ್ನು ಚರಂಡಿ ಸ್ವಚ್ಛತೆಗಾಗಿ ನೇಮಕ ಮಾಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದರು.

‘ಕಾರ್ಯಪಡೆ ರಚಿಸಿ’

ಪ್ರತಿವರ್ಷ ಮಳೆಗಾಲ ಪೂರ್ವದಲ್ಲಿ ಚರಂಡಿ ಸ್ವಚ್ಛತೆ ಕಾರ್ಯ ನಡೆಯುತ್ತದೆ. ಈ ಬಾರಿಯೂ ಆರಂಭಗೊಂಡಿದೆ ಆದರೆ ಆ ಕೆಲಸ ತೀವ್ರಗತಿ ಪಡೆದುಕೊಂಡಿಲ್ಲ. ಎಲ್ಲಾದರೂ ದೊಡ್ಡ ಮಳೆ ಬಂದರೆ ಸಮಸ್ಯೆ ಉಂಟಾಗಬಹುದು. ಮಳೆಗಾಲದಲ್ಲಿ ರಾತ್ರಿ ವೇಳೆ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ತುರ್ತಾಗಿ ಸ್ಪಂದಿಸಲು ನಗರಸಭೆಯಲ್ಲಿ ಕಾರ್ಯಪಡೆ ರಚಿಸಬೇಕು. ಜೆಸಿಬಿ ಹಾಗೂ ಅಗತ್ಯ  ಉಪಕರಣಗಳನ್ನು ಒದಗಿಸಬೇಕು ಎಂದು ನಗರಸಭೆಯ ವಿರೋಧ ಪಕ್ಷದ ನಾಯಕ ರಮೇಶ್‌ ಕಾಂಚನ್ ಆಗ್ರಹಿಸಿದ್ದಾರೆ.

‘ರಾಜ ಕಾಲುವೆಯ ಕಸ ತೆರವುಗೊಳಿಸಿ’

ನಗರಸಭೆ ಈಗಲೇ ಎಚ್ಚೆತ್ತುಕೊಂಡು ದೊಡ್ಡ ಚರಂಡಿಗಳ ಹೂಳು ತೆಗೆಯುವ ಕಾಮಗಾರಿ ಆರಂಭಿಸಬೇಕು. ಚರಂಡಿಯ ಹೂಳನ್ನು ಹೊರ ತೆಗೆದು ಅದರ ಬದಿಯಲ್ಲೇ ಹಾಕದೆ ಬೇರೆಡೆ ಸಾಗಿಸಬೇಕು. ಇಲ್ಲದಿದ್ದರೆ ಆ ಹೂಳು ಮತ್ತೆ ಚರಂಡಿ ಸೇರುತ್ತದೆ. ಕಲ್ಸಂಕ ಪರಿಸರದಲ್ಲಿ ಇಂದ್ರಾಣಿ ನದಿಯಲ್ಲಿ ಹೂಳಿನ ಜೊತೆ ಕಸದ ರಾಶಿ ತುಂಬಿದೆ. ಸಂಬಂಧಪಟ್ಟವರು ಕಸ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.