ಕುಂದಾಪುರ: ‘ಶಿಕ್ಷಣದಿಂದ ಮಾತ್ರ ದೇಶ ಹಾಗೂ ಸಮಾಜ ಉದ್ಧಾರವಾಗಲು ಸಾಧ್ಯ. ಸಮಾಜದ ಕಟ್ಟಕಡೆಯ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಬೇಕು ಎನ್ನುವ ಗುರಿ ಹಾಗೂ ಬದ್ಧತೆಯನ್ನು ಕುಂದಾಪುರ ಎಜುಕೇಷನಲ್ ಸೊಸೈಟಿಯ ಶಿಕ್ಷಣ ಸಂಸ್ಥೆಗಳಿಗಿದೆ’ ಎಂದು ಕುಂದಾಪುರ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು.
ಕುಂದಾಪುರ ಎಜುಕೇಷನಲ್ ಸೊಸೈಟಿ ಪ್ರವರ್ತಿತ ವಿ.ಕೆ.ಆರ್.ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಮಟ್ಟದಲ್ಲಿ 8 ಸ್ಥಾನಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಮಕ್ಕಳ ಈ ಸಾಧನೆಯ ಹಿಂದೆ ಪೋಷಕರ ಹಾಗೂ ಶಿಕ್ಷಕರ ಪಾತ್ರ ಬಹು ದೊಡ್ಡದು. ಅವರೆಲ್ಲರ ಸಮುಷ್ಠಿ ಪ್ರಯತ್ನದಿಂದ ಸಂಸ್ಥೆಯ ಗೌರವ ಹೆಚ್ಚಿದೆ ಎಂದರು.
ಪ್ರಾಂಶುಪಾಲೆ ಚಿಂತನಾ ರಾಜೇಶ್ ಮಾತನಾಡಿ, ‘ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಸಂಘಟಿತ ಪ್ರಯತ್ನದಿಂದಾಗಿ ಈ ಫಲಿತಾಂಶ ಬಂದಿದೆ. ಗುಣಮಟ್ಟದ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣಕ್ಕೂ ಒತ್ತು ನೀಡಲಾಗುತ್ತಿದ್ದು, ಅದಕ್ಕಾಗಿ ನಿರಂತರ ಪ್ರಯತ್ನ ಪಡುತ್ತಿದ್ದೇವೆ. ಮಕ್ಕಳ ಮೇಲಿನ ಪ್ರೀತಿ, ಕಾಳಜಿ ಹಾಗೂ ಜ್ಞಾನಾರ್ಜನೆಯೇ ನಮ್ಮ ಮುಖ್ಯ ಧ್ಯೇಯವಾಗಿದ್ದು, ಅದಕ್ಕಿಂದು ಫಲ ಸಿಕ್ಕಿದೆ’ ಎಂದರು.
ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ಸಾಯಿಸ್ಪರ್ಶ ಕೆ., ಚತುರ್ಥ ಸ್ಥಾನ ಪಡೆದ ಬಿ.ವಿ. ಜಯಸೂರ್ಯ ಹಾಗೂ ಪ್ರಿಯಾ, 5ನೇ ಸ್ಥಾನ ಪಡೆದ ಭಕ್ತಿ ಶೆಟ್ಟಿ ಹಾಗೂ ನಿರೀಕ್ಷಾ ಎನ್.ಶೆಟ್ಟಿಗಾರ್, 7ನೇ ಸ್ಥಾನ ಪಡೆದ ಸನ್ವಿತ್ ಶೆಟ್ಟಿ ಹಾಗೂ ವಿನ್ಯಾಸ್ ಅಡಿಗ ಮತ್ತು 10ನೇ ಸ್ಥಾನ ಪಡೆದ ಸಮನ್ವಿ ಎಸ್ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರನ್ನು ಗೌರವಿಸಲಾಯಿತು.
ಕುಂದಾಪುರ ಎಜುಕೇಷನಲ್ ಸೊಸೈಟಿ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯ ನಾರಾಯಣ ನಾಯಕ್ ನೇರಳಕಟ್ಟೆ, ಉಪ ಪ್ರಾಂಶುಪಾಲೆ ಶುಭಾ ಕೆ.ಎನ್, ಸಹ ಶಿಕ್ಷಕ ಚಂದ್ರಶೇಖರ್ ಶೆಟ್ಟಿ ಇದ್ದರು.
ಶಿಕ್ಷಕರಾದ ಸುರೇಂದ್ರ ಶೆಟ್ಟಿ ನಿರೂಪಿಸಿದರು. ಸ್ವಪ್ನ ಸನ್ಮಾನಿತರ ವಿವರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.