ಉಡುಪಿ: ‘ರಾಜ್ಯದಲ್ಲಿ ಎಷ್ಟು ಜಾತಿಗಳಿವೆಯೋ ಎಲ್ಲವನ್ನೂ ಜಾತಿ ಗಣತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಂಖ್ಯೆ ಎಷ್ಟು ಎಂದು ಈಗ ನಾನು ಹೇಳಲಾರೆ’ ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸೋಮವಾರ ಇಲ್ಲಿ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ವರದಿ ಕುರಿತು ಸಂಪುಟದಲ್ಲಿ ಚರ್ಚೆ ಆದ ನಂತರ ಹೇಳಿಕೆ ಕೊಡೋಣ ಎಂದಿದ್ದೆ. ಆದರೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಗೊಂದಲ ಉಂಟಾಗಿರುವುದರಿಂದ ಸ್ಪಷ್ಟನೆ ನೀಡಬೇಕಾಗಿದೆ’ ಎಂದರು.
‘ಇದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಜಾತಿ ಗಣತಿ ಅಲ್ಲವೇ ಅಲ್ಲ. ಮಾಡಿರುವ ಸಮೀಕ್ಷೆಯಲ್ಲಿ ಜಾತಿ ಒಂದು ಅಂಶ ಅಷ್ಟೇ. ಜನರು ಹೇಳಿರುವ ಜಾತಿಯನ್ನು ಬರೆದುಕೊಳ್ಳಲಾಗಿದೆ. ಜನರ ಜಾತಿಯನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ. ಮನೆಯವರು ಕೊಟ್ಟ ಜಾತಿಯನ್ನು ನಮೂದಿಸಲಾಗಿದೆ’ ಎಂದರು.
ವರದಿ ಸಾರ್ವಜನಿಕಗೊಂಡ ನಂತರ ಚರ್ಚೆ ಮಾಡಬಹುದು. ವರದಿಯಲ್ಲಿ ತಪ್ಪಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ಇದೆ. ತಪ್ಪಾಗಿದ್ದರೆ ಸರಿ ಮಾಡುತ್ತೇವೆ ಎಂದು ಸರ್ಕಾರ ಹೇಳಿದೆ. ಶೇ 95 ರಷ್ಟು ಸರಿ ಇದೆ ಎಂದು ಮುಖ್ಯಮಂತ್ರಿಯೇ ಹೇಳಿದ್ದಾರೆ. ಏನನ್ನೂ ನೋಡದೆ ಇದು ವೈಜ್ಞಾನಿಕ ವರದಿ ಅಲ್ಲ ಎನ್ನಬಾರದು ಎಂದರು.
ಸಿದ್ದರಾಮಯ್ಯ ಅವರು ವರದಿ ಬರೆಯಿಸಿದ್ದಾರೆ ಎನ್ನುವುದು ಸರಿಯಲ್ಲ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆಯಾ ಜಿಲ್ಲಾಧಿಕಾರಿ ಸಮೀಕ್ಷೆ ನಡೆಸಿದ್ದಾರೆ. ತರಬೇತಿ ಪಡೆದ ಶಿಕ್ಷಕರು ಪ್ರತಿ ಹಳ್ಳಿಗೆ ಹೋಗಿ ಸಮೀಕ್ಷೆ ಮಾಡಿದ್ದಾರೆ. ಯಾವ ಶಿಕ್ಷಕರಿಗೂ ವೈಯಕ್ತಿಕ ಆಸಕ್ತಿ ಇರಲು ಸಾಧ್ಯವಿಲ್ಲ. ನೀಡಿರುವ ನಮೂನೆಯನ್ನು ತುಂಬಿಸಿಕೊಂಡು ಬಂದಿದ್ದಾರೆ. ಇದು ಖಾಸಗಿ ಅವರು ತಯಾರಿಸಿದ ವರದಿಯಲ್ಲ ಎಂದು ಸ್ಪಷ್ಟಪಡಿಸಿದರು.
ವರದಿ ಜಾರಿ ಆಗಬೇಕು ಎಂದು ನಾನು ಹಾರೈಸುತ್ತೇನೆ. ಸಾಕಷ್ಟು ಪ್ರಯತ್ನದ ನಂತರ ವರದಿ ತಯಾರಿಸಲಾಗಿದೆ. ಜನರ ಮನಸ್ಸಿನಲ್ಲಿರುವ ಅನುಮಾನ ದೂರವಾಗಲು ವರದಿ ಬಹಿರಂಗವಾಗಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.