
ಉಡುಪಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರಾಯೋಜಿತ ಯೋಜನೆಗಳಡಿ ಆಯ್ಕೆಯಾಗಿ ಆರ್ಥಿಕ ನೆರವು ನೀಡಲು ಶಿಫಾರಸಾದ ಅರ್ಜಿಗಳನ್ನು ಆದ್ಯತೆಯ ಮೇಲೆ ಜನರಿಗೆ ಅನುಕೂಲವಾಗುವಂತೆ, ಸರಳ ರೀತಿಯಲ್ಲಿ ನಿಯಮಾನುಸಾರ ವಿಲೇವಾರಿ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಿ.ಎಂ. ವಿಶ್ವಕರ್ಮ ಯೋಜನೆಯಡಿ ಈವರೆಗೆ 5,661 ಅರ್ಜಿಗಳು ಸ್ವೀಕೃತವಾಗಿದ್ದು, 1,337 ಅರ್ಜಿಗಳು ತಿರಸ್ಕೃತಗೊಂಡು, 3,937 ಫಲಾನುಭವಿಗಳಿಗೆ ₹35.29 ಕೋಟಿ ಸಾಲ ವಿತರಿಸಲಾಗಿದೆ. ತಿರಸ್ಕೃತ ಅರ್ಜಿಗಳ ಸಂಖ್ಯೆ ಕಡಿಮೆಯಾಗಬೇಕು ಎಂದ ಅವರು, ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಶೀಘ್ರ ಕ್ರಮ ವಹಿಸಬೇಕು ಎಂದರು.
ಜಿಲ್ಲೆಯ ಉದ್ಯಮಿಗಳಿಗೆ ಜೀವನೋಪಾಯದ ಚಟುವಟಿಕೆಗಳಿಗಾಗಿ ಹಾಗೂ ಜಿಲ್ಲೆಯ ಉದ್ಯಮಿಗಳನ್ನು ಬೆಂಬಲಿಸುವುದರೊಂದಿಗೆ ಉದ್ಯೋಗಾವಕಾಶ ಸೃಷ್ಟಿಸಲು ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ 129 ನಿಗದಿತ ಗುರಿಯಲ್ಲಿ, 91 ಫಲಾನುಭವಿಗಳಿಗೆ ₹10.06 ಕೋಟಿ ಆರ್ಥಿಕ ನೆರವು ವಿತರಿಸಲಾಗಿದೆ. ಯಾವುದೇ ಯೋಜನೆಗಳಡಿ ಅರ್ಜಿ ಸಲ್ಲಿಕೆಯಾದಾಗ ಅರ್ಜಿಗಳನ್ನು ಬಾಕಿ ಉಳಿಸದೇ ಅರ್ಜಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಬೇಕು ಎಂದರು.
ಕೃಷಿ ವಲಯಕ್ಕೆ ₹4,230 ಕೋಟಿ ನಿಗದಿತ ಗುರಿಯಲ್ಲಿ ₹2,274 ಕೋಟಿ ಗುರಿ ಸಾಧಿಸಿ ಶೇ 53.76ರಷ್ಟು, ಎಂ.ಎಸ್.ಎಂ.ಇ. ವಲಯಕ್ಕೆ ₹3,713 ಕೋಟಿ ಗುರಿ ನಿಗದಿಪಡಿಸಲಾಗಿದ್ದು, ₹2,426 ಕೋಟಿ ಗುರಿ ಸಾಧಿಸಿ ಶೇ 65.35ರಷ್ಟು ಸಾಧನೆ ಮಾಡಲಾಗಿದೆ ಎಂದು ವಿವರಿಸಿದರು.
ಶಿಕ್ಷಣ ವಲಯಕ್ಕೆ ₹187 ಕೋಟಿ ನಿಗದಿತ ಗುರಿಯಲ್ಲಿ ₹116 ಕೋಟಿ ಗುರಿ ಸಾಧಿಸಿ ಶೇ 62.12ರಷ್ಟು, ವಸತಿ ಕ್ಷೇತ್ರಗಳಿಗೆ ₹510 ಕೋಟಿ ನಿಗದಿತ ಗುರಿಯಲ್ಲಿ ₹111 ಕೋಟಿ ಗುರಿ ಸಾಧಿಸಿ ಶೇ 21.85ರಷ್ಟು, ಇತರೆ ಕ್ಷೇತ್ರಗಳಿಗೆ ₹399 ಕೋಟಿ ನಿಗದಿತ ಗುರಿಯಲ್ಲಿ ₹193 ಕೋಟಿ ಗುರಿ ಸಾಧಿಸಿ ಶೇ 48.46ರಷ್ಟು ಹಾಗೂ ಆದ್ಯತೇತರ ವಲಯಗಳಿಗೆ ₹6,474 ಕೋಟಿ ನಿಗದಿತ ಗುರಿಯಲ್ಲಿ ₹3,819 ಕೋಟಿ ಗುರಿ ಸಾಧಿಸಿ ಶೇ 58.99ರಷ್ಟು ಸಾಧನೆ ಮಾಡಲಾಗಿದೆ ಎಂದರು.
ಕೆನರಾ ಬ್ಯಾಂಕ್ ರೀಜನಲ್ ಮ್ಯಾನೇಜರ್ ಮಹಾಮಾಯ ಪ್ರಸಾದ್ ರಾಯ್ ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದರೆ ಬ್ಯಾಂಕಿಂಗ್ ಠೇವಣಿ ಅನುಪಾತವು ಶೇ 47.66ರಷ್ಟು ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ 48.62ರಷ್ಟಾಗಿ ಶೇ 0.96ರಷ್ಟು ಏರಿಕೆಯಾಗಿದೆ’ ಎಂದರು.
ಸಭೆಯಲ್ಲಿ ನಬಾರ್ಡ್‌ನ ಡಿ.ಡಿ.ಎಂ ಸಂಗೀತಾ ಕಾರ್ಥಾ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ. ಇದ್ದರು.
ಆರ್.ಬಿ.ಐ ನಿಯಮಾನುಸಾರ ಜಿಲ್ಲೆಗಳ ಸಾಲ ಠೇವಣಿ (ಸಿ.ಡಿ.) ಅನುಪಾತವು ಶೇ 50ಕ್ಕಿಂತ ಕಡಿಮೆ ಇರಬಾರದು. ಅದನ್ನು ಹೆಚ್ಚಿಸಲು ಎಲ್ಲಾ ಬ್ಯಾಂಕ್‌ಗಳ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕುನಿಶಾ ಠಾಕೂರ್, ಆರ್‌ಬಿಐ ಎಫ್.ಐ.ಡಿ.ಡಿ ಲೀಡ್ ಡಿಸ್ಟ್ರಿಕ್ಟ್ ಆಫೀಸರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.