ADVERTISEMENT

ಉಡುಪಿ: ಪಚ್ಚಿಲೆ ಕೃಷಿಯತ್ತ ಮೀನುಗಾರರ ಚಿತ್ತ

ಮತ್ಸ್ಯಕ್ಷಾಮದ ನಡುವೆ ಕುದುರಿದ ಬೇಡಿಕೆ: ಮೀನುಗಾರರ ಕೈ ಹಿಡಿದ ಉಪಕಸುಬು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 6:36 IST
Last Updated 17 ಏಪ್ರಿಲ್ 2025, 6:36 IST
<div class="paragraphs"><p>ಪಚ್ಚಿಲೆಯೊಂದಿಗೆ ಕೃಷಿಕ ಬಾಬು</p><p></p></div>

ಪಚ್ಚಿಲೆಯೊಂದಿಗೆ ಕೃಷಿಕ ಬಾಬು

   

ಉಡುಪಿ: ಸಮುದ್ರದಲ್ಲಿ ತೀವ್ರ ಮತ್ಸ್ಯಕ್ಷಾಮ ಎದುರಿಸುತ್ತಿರುವ ಈ ದಿನಗಳಲ್ಲಿ ಜಿಲ್ಲೆಯ ಹಿನ್ನೀರಿನಲ್ಲಿ ಪಚ್ಚಿಲೆ ಕೃಷಿಯತ್ತ ಮುಖ ಮಾಡಿರುವ ಮೀನುಗಾರರು ಅದರಲ್ಲಿ ಯಶಸ್ಸು ಕಂಡಿದ್ದಾರೆ.

ADVERTISEMENT

ಉಡುಪಿ, ಕುಂದಾಪುರ ವ್ಯಾಪ್ತಿಯಲ್ಲಿ ಮೀನುಗಾರರು ಸೇರಿದಂತೆ ಹಲವರು ಪಚ್ಚಿಲೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ತಾರಾಪತಿ, ಕೊಡಿ ಕನ್ಯಾನ, ಕಲ್ಯಾಣಪುರ ಮೊದಲಾದೆಡೆಯ ಹಿನ್ನೀರಿನಲ್ಲಿ ಈ ಕೃಷಿ ಗರಿಗೆದರಿದೆ.

ಮೀನುಗಾರಿಕಾ ಇಲಾಖೆಯ ಮಾಹಿತಿಯಂತೆ ಉಡುಪಿ ತಾಲ್ಲೂಕಿನಲ್ಲಿ 131 ಮಂದಿ ಹಾಗೂ ಕುಂದಾಪುರ ವ್ಯಾಪ್ತಿಯಲ್ಲಿ ಅಂದಾಜು 20 ಕ್ಕೂ ಹೆಚ್ಚು ಮಂದಿ ಪಚ್ಚಿಲೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪಚ್ಚಿಲೆ ಕೃಷಿಯು ಕಡಿಮೆ ನಿರ್ವಹಣೆ ಮತ್ತು ಹೆಚ್ಚು ಲಾಭದಾಯಕ ಉಪ ಕಸುಬಾಗಿದೆ. ಆದರೆ ಪರಿಶ್ರಮ ಅಗತ್ಯವಿದೆ. ಇತರ ಮೀನು ಸಾಕಣೆಯಲ್ಲಿ ದಿವಸಕ್ಕೆ ಎರಡು ಸಲ ಮೀನಿಗೆ ಆಹಾರ ನೀಡಬೇಕಾಗುತ್ತದೆ ಆದರೆ ಪಚ್ಚಿಲೆಗೆ ಆಹಾರ ನೀಡುವ ಅಗತ್ಯ ಇರುವುದಿಲ್ಲ. ಅದು ನೈಸರ್ಗಿಕವಾಗಿಯೇ ಬೆಳೆಯುತ್ತದೆ ಎನ್ನುತ್ತಾರೆ ಪಚ್ಚಿಲೆ ಕೃಷಿಕರು.

ಬಿದಿರು ಅಥವಾ ಕಬ್ಬಿಣದ ಚೌಕಟ್ಟು ರಚಿಸಿ ಅದರಲ್ಲಿ ಹಗ್ಗವನ್ನು ಇಳಿಬಿಟ್ಟು ಪಚ್ಚಿಲೆ ಕೃಷಿ ಮಾಡಲಾಗುತ್ತದೆ. ಉಪ್ಪು ನೀರಿರುವ ಹೊಳೆಯಲ್ಲಿ 4ರಿಂದ 5 ಅಡಿ ಆಳವಿರುವ ಕಡೆ ಈ ಕೃಷಿ ಮಾಡಲಾಗುತ್ತದೆ. ಹಗ್ಗಗಳ ಮೇಲೆ ಪಚ್ಚಿಲೆ ಮರಿಗಳನಿಟ್ಟು ಅದರ ಮೇಲೆ ಬಟ್ಟೆ ಸುತ್ತಲಾಗುತ್ತದೆ. ಮೂರ್ನಾಲ್ಕು ದಿನಗಳಲ್ಲಿ ಮರಿಗಳು ಹಗ್ಗಕ್ಕೆ ಅಂಟಿಕೊಳ್ಳುತ್ತವೆ. ಸುತ್ತಿದ ಬಟ್ಟೆಯು ಕೆಲ ದಿನಗಳಲ್ಲಿ ಕರಗಿ ಹೋಗುತ್ತದೆ.

‘ಅಕ್ಟೋಬರ್‌, ನವೆಂಬರ್‌ ತಿಂಗಳಲ್ಲಿ ಪಚ್ಚಿಲೆ ಕೃಷಿ ಆರಂಭಿಸಲಾಗುತ್ತದೆ. ಮೇ, ಜೂನ್‌ ತಿಂಗಳಲ್ಲಿ ಕೊಯ್ಲು ನಡೆಯುತ್ತದೆ. ಗೋವಾದಲ್ಲೂ ಪಚ್ಚಿಲೆಗೆ ಬೇಡಿಕೆ ಇರುವುದರಿಂದ ನಮ್ಮ ಕಡೆಯಿಂದ ಗೋವಾಗೂ ಕಳುಹಿಸಲಾಗುತ್ತಿದೆ. ಸ್ಥಳೀಯವಾಗಿಯೂ ಮಾರುಕಟ್ಟೆ ಇದೆ. ಪಚ್ಚಿಲೆ ಕೆ.ಜಿ.ಗೆ ₹150 ಬೆಲೆ ಇದೆ’ ಎನ್ನುತ್ತಾರೆ ಬೈಂದೂರಿನ ತಾರಾಪತಿಯ ಪಚ್ಚಿಲೆ ಕೃಷಿಕ ಬಾಬು.

ಪಚ್ಚಿಲೆ ಕೃಷಿ ಮಾಡಲು ಹುರಿ ಹಗ್ಗ ಬಳಸಿದರೆ ಉತ್ತಮ ಆದರೆ ನಾವು ಮೀನುಗಾರಿಕೆಗೆ ಬಳಸಿ, ಉಪಯೋಗ ಶೂನ್ಯವಾದ ಹಗ್ಗಗಳನ್ನು ಬಳಸುತ್ತೇವೆ. ಇದರಿಂದ ವೆಚ್ಚ ಕಡಿಮೆಯಾಗುತ್ತದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಪಚ್ಚಿಲೆ ಇರುವ ಹಗ್ಗಕ್ಕೆ ಅಂಟಿಕೊಳ್ಳುವ ಕೆಸರನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಪಚ್ಚಿಲೆ ಬೆಳವಣಿಗೆಯಾಗುವುದಿಲ್ಲ ಎಂದೂ ಹೇಳುತ್ತಾರೆ ಅವರು.

ಹೊಳೆಯ ನೀರಿನಲ್ಲಿ ಉಪ್ಪಿನಂಶ ಕಡಿಮೆಯಾದಾಗ ಮತ್ತು ನೀರಿನ ಬಣ್ಣ ಬದಲಾದಾಗ ಪಚ್ಚಿಲೆಗಳು ಸಾಯುವ ಸಾಧ್ಯತೆಗಳೂ ಇರುತ್ತವೆ ಎಂದೂ ಅವರು ಹೇಳುತ್ತಾರೆ.

ಪಚ್ಚಿಲೆ ಕೃಷಿ ಮಾಡುವ ಮಹಿಳೆಯರಿಗೆ ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆಯ ಮೂಲಕ ₹12 ಸಾವಿರ ಮತ್ತು ಪುರುಷರಿಗೆ ₹ 8 ಸಾವಿರ ಸಹಾಯಧನ ನೀಡಲಾಗುತ್ತಿದೆ ಎಂದು ಮೀನುಗಾರಿಕೆ ಇಲಾಖೆಯ ಮೂಲಗಳು ತಿಳಿಸಿವೆ.

‘ಕಳೆದ ವರ್ಷ 600 ಕೆ.ಜಿ.ಯಷ್ಟು ಪಚ್ಚಿಲೆ ಇಳುವರಿ ಸಿಕ್ಕಿದೆ. ಈ ವರ್ಷ ಮೇ ತಿಂಗಳಲ್ಲಿ ಕೊಯ್ಲು ನಡೆಯಲಿದೆ. 4 ಇಂಚಿನಷ್ಟು ಗಾತ್ರದ ಪಚ್ಚಿಲೆಗೆ ಉತ್ತಮ ದರವಿದೆ. ದೊಡ್ಡ ಗಾತ್ರದ ಪಚ್ಚಿಲೆಯ ಖಾದ್ಯಗಳಿಗೆ ಹೋಟೆಲ್‌ಗಳಲ್ಲಿ ಹೆಚ್ಚಿನ ಬೇಡಿಕೆ ಇದೆ’ ಎನ್ನುತ್ತಾರೆ ಕೊಡೇರಿಯ ಪಚ್ಚಿಲೆ ಕೃಷಿಕ ಕೃಷ್ಣ.

ಪಚ್ಚಿಲೆ ಕೃಷಿ ಆರಂಭಿಸುವ ಮೊದಲು ಗುಣಮಟ್ಟದ ಮರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅವು ಬೆಳವಣಿಗೆ ಹೊಂದದೆ ನಷ್ಟ ಉಂಟಾಗುತ್ತದೆ.
ಕೃಷ್ಣ, ಪಚ್ಚಿಲೆ ಕೃಷಿಕ ಕೊಡೇರಿ
ಕೆಲವರು ಮಾಹಿತಿ ಕೊರತೆಯಿಂದ ವೈಜ್ಞಾನಿಕ ರೀತಿಯಲ್ಲಿ ಪಚ್ಚಿಲೆ ಕೃಷಿ ಮಾಡುತ್ತಿಲ್ಲ. ಪಚ್ಚಿಲೆ ಕೃಷಿಕರಿಗೆ ಇಲಾಖೆಯ ವತಿಯಿಂದ ತರಬೇತಿ ನೀಡುವ ಚಿಂತನೆ ಇದೆ.
ರವಿ ಎಂ., ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ ಉಡುಪಿ
ಹೆಚ್ಚು ಪೋಷಕಾಂಶ ಹೊಂದಿರುವ ಪಚ್ಚಿಲೆ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದೆ. ಇದು ಕೆಲವು ಋತುಗಳಲ್ಲಿ ಮಾತ್ರ ಸಿಗುವುವುದರಿಂದ ಜನರು ಖರೀದಿಸುತ್ತಾರೆ.
ಬಾಬು, ಪಚ್ಚಿಲೆ ಕೃಷಿಕ ತಾರಾಪತಿ
ಪಚ್ಚಿಲೆ
ಪಚ್ಚಿಲೆ ಮರಿಗಳನ್ನು ಬಟ್ಟೆಯ ಸಹಾಯದಿಂದ ಹಗ್ಗಕ್ಕೆ ಜೋಡಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.