ಉಡುಪಿ: ಟ್ರಾಲ್ ಬೋಟ್ ನಿಷೇಧ ಜಾರಿಗೆ ಬಂದು ಮೀನುಗಾರಿಕಾ ದೋಣಿಗಳೆಲ್ಲವೂ ದಡ ಸೇರಿದ ಬೆನ್ನಲ್ಲೇ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಬಲೆ ದುರಸ್ತಿ ಕಾರ್ಯ ಚುರುಕುಗೊಂಡಿವೆ.
ಯಾಂತ್ರೀಕೃತ ದೋಣಿಗಳಲ್ಲಿ ಹಾಗೂ ನಾಡ ದೋಣಿಗಳಲ್ಲಿ ಮೀನು ಹಿಡಿಯಲು ಬಳಸುವ ಬಲೆಗಳನ್ನು ಸಿದ್ಧಪಡಿಸುವ ಮತ್ತು ದುರಸ್ತಿ ಮಾಡುವ ಕಾರ್ಯದಲ್ಲಿ ಸ್ಥಳೀಯ ಮೀನುಗಾರರು ನಿರತರಾಗಿದ್ದಾರೆ.
ಆಳಸಮುದ್ರ ಮೀನುಗಾರಿಗೆ ನಿಷೇಧದ ಅವಧಿಯಲ್ಲಿ ಮೀನುಗಾರಿಕಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸ್ಥಳೀಯ ಮೀನುಗಾರರಿಗೆ ಕೆಲಸ ಇರುವುದಿಲ್ಲ. ಅಂತಹವರು ಈ ವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತಾರೆ.
ಮೀನುಗಾರರು, ದೋಣಿಗಳ ಪಾಲುದಾರರು ಸೇರಿ ಬಲೆ ಸರಿಪಡಿಸುವ ಕೆಲಸದಲ್ಲಿ ನಿರತರಾಗುತ್ತಾರೆ ಇದರಿಂದ ಸ್ಥಳೀಯ ಮೀನುಗಾರರಿಗೆ ದುಡಿಮೆ ಸಿಕ್ಕಂತಾಗುತ್ತದೆ.
ಮೀನುಗಾರಿಕಾ ಋತು ಆರಂಭವಾಗುವಾಗ ಆಳ ಸಮುದ್ರ ದೋಣಿಗಳಿಗೆ ಬಿಡುವಿರುವುದಿಲ್ಲ ಈ ಕಾರಣಕ್ಕೆ ಟ್ರಾಲಿಂಗ್ ನಿಷೇಧದ ಅವಧಿಯಲ್ಲಿ ಬಲೆಯ ಕೆಲಸಗಳು ನಡೆಯುತ್ತವೆ.
ಈ ಅವಧಿಯಲ್ಲಿ ಸಾಂಪ್ರದಾಯಿಕ ನಾಡ ದೋಣಿಗಳು ಮೀನುಗಾರಿಕೆ ನಡೆಸಲು ಕಡಲಿಗಿಳಿಯುವುದರಿಂದ ನಾಡ ದೋಣಿಗಳಲ್ಲಿ ಮೀನುಗಾರಿಕೆಗೆ ಬಳಸುವ ಬಲೆಗಳ ದುರಸ್ತಿ ಕಾರ್ಯವು ಕೂಡ ಭರದಿಂದ ನಡೆಯುತ್ತದೆ.
‘ಡಿಸ್ಕೊ ದೋಣಿಗಳಲ್ಲಿ ಬಳಸುವ ಬಲೆ, ಪರ್ಸಿನ್ ಮೊದಲಾದ ಬಲೆಗಳ ದುರಸ್ತಿ ಕಾರ್ಯವನ್ನು ನಡೆಸುತ್ತಿದ್ದೇವೆ. ಸುಮಾರು 30 ರಿಂದ 40 ಮಂದಿ ಸೇರಿ ಈ ಕೆಲಸದಲ್ಲಿ ನಿರತರಾಗಿದ್ದೇವೆ’ ಎನ್ನುತ್ತಾರೆ ಮಲ್ಪೆಯ ಮೀನುಗಾರ ಮಾಧವ ಕರ್ಕೇರ.
‘ಹಿಂದೆ ಮಲ್ಪೆಯಲ್ಲಿ 60 ಜೋಡಿಗೂ ಹೆಚ್ಚು ಸಾಂಪ್ರದಾಯಿಕ ನಾಡ ದೋಣಿಗಳಿದ್ದವು. ಈಗ ಅವುಗಳ ಸಂಖ್ಯೆ ತೀರಾ ಕಡಿಮೆಯಾಗಿದೆ’ ಎನ್ನುತ್ತಾರೆ ಅವರು.
‘ನಾಡ ದೋಣಿಗಳಲ್ಲಿ ಬಳಸುವ ಬಲೆಗಳ ದುರಸ್ತಿ ಕಾರ್ಯವನ್ನು ತ್ವರಿತವಾಗಿ ನಡೆಸುತ್ತಿದ್ದೇವೆ. ಆಳ ಸಮುದ್ರ ದೋಣಿಗಳು ಎರಡು ತಿಂಗಳು ಬಿಟ್ಟು ಸಮುದ್ರಗಿಳಿಯಲಿರುವುದರಿಂದ ಅವುಗಳಲ್ಲಿ ಬಳಸುವ ಬಲೆಗಳ ದುರಸ್ತಿಯನ್ನು ನಿಧಾನಗತಿಯಲ್ಲಿ ಮಾಡುತ್ತಿದ್ದೇವೆ’ ಎಂದೂ ಅವರು ವಿವರಿಸಿದರು.
‘ಕಳೆದ ಮೀನುಗಾರಿಕಾ ಋತುವಿನಲ್ಲಿ ಬಳಕೆ ಮಾಡಿದ ಬಲೆಗಳು ಅಲ್ಲಲ್ಲಿ ಹರಿದಿರುತ್ತವೆ ಅವುಗಳನ್ನು ಜೋಡಿಸಿ, ಸರಿಪಡಿಸುತ್ತಿದ್ದೇವೆ. ಸಿಗಡಿಗಳನ್ನು ಹಿಡಿಯುವ ಬಲೆಗಳು ಹರಿದರೆ ಸಿಗಡಿಗಳು ಸಿಗುವುದಿಲ್ಲ. ಆ ಕಾರಣಕ್ಕೆ ನಾಜೂಕಾಗಿ ಬಲೆಯನ್ನು ಸರಿಪಡಿಸುತ್ತಿದ್ದೇವೆ’ ಎನ್ನುತ್ತಾರೆ ಮಲ್ಪೆಯ ಮೀನುಗಾರ ದೇವು ಮೆಂಡನ್.
‘ಪರ್ಸಿನ್ ದೋಣಿಗಳಲ್ಲಿ ಬಳಸುವ ಬಲೆಯ ದುರಸ್ತಿ ನಾಜೂಕಿನ ಕೆಲಸವಾಗಿದೆ. ಅದಕ್ಕೆ ಕೌಶಲ ಅಗತ್ಯವಿರುತ್ತದೆ. ಸ್ವಲ್ಪ ವ್ಯತ್ಯಾಸವಾದರೂ ಮೀನುಗಾರಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ’ ಎನ್ನುತ್ತಾರೆ ಅವರು.
ದೋಣಿಗಳ ಪಾಲುದಾರರು ತಾಂಡೇಲರು ಸೇರಿದಂತೆ ಸ್ಥಳೀಯ ಮೀನುಗಾರರು ಹಾಗೂ ಕಾರ್ಮಿಕರು ಸೇರಿ ಬಲೆ ದುರಸ್ತಿ ಮಾಡುತಿದ್ದೇವೆ.– ಮಾಧವ ಕರ್ಕೇರ, ಮಲ್ಪೆಯ ಮೀನುಗಾರ
ಕಳೆದ ಮೀನುಗಾರಿಕಾ ಋತುವಿನಲ್ಲಿ ಮತ್ಸ್ಯ ಕ್ಷಾಮ ತಲೆದೋರಿ ನಷ್ಟ ಉಂಟಾಗಿತ್ತು. ಅದು ಕಾರ್ಮಿಕರ ಮೇಲೂ ಪರಿಣಾಮ ಬೀರಿತ್ತು. ಈ ಬಾರಿ ನಾಡದೋಣಿಗಳಲ್ಲಿ ಉತ್ತಮ ಮೀನುಗಾರಿಕೆಯ ನಿರೀಕ್ಷೆಯಲ್ಲಿದ್ದೇವೆ.– ದೇವು ಮೆಂಡನ್, ಮಲ್ಪೆಯ ಮೀನುಗಾರ
ಊರಿಗೆ ಮರಳಿದ ಕಾರ್ಮಿಕರು
ಟ್ರಾಲಿಂಗ್ ನಿಷೇಧ ಜಾರಿಗೆ ಬಂದ ಬಳಿಕ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ದುಡಿಯುವ ಅನ್ಯರಾಜ್ಯಗಳ ನೂರಾರು ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ್ದಾರೆ. ಮಲ್ಪೆಯಲ್ಲಿ ಸ್ಥಳೀಯ ಕಾರ್ಮಿಕರ ಕೊರತೆಯಿಂದಾಗಿ ಮೀನುಗಾರಿಕೆಗೆ ಸಂಬಂಧಿಸಿದ ಕೆಲಸಗಳಲ್ಲಿ ಒಡಿಶಾ ಪಶ್ಚಿಮ ಬಂಗಾಳ ಆಂಧ್ರಪ್ರದೇಶ ತಮಿಳುನಾಡಿನ ಕಾರ್ಮಿಕರು ದುಡಿಯುತ್ತಿದ್ದಾರೆ.
‘ಪಶ್ಚಿಮ ಬಂಗಾಳ ಆಂಧ್ರ ಪ್ರದೇಶದ ಕಾರ್ಮಿಕರು ಮೀನುಗಾರಿಕಾ ವೃತ್ತಿಯಲ್ಲಿ ನುರಿತವರಾಗಿರುತ್ತಾರೆ. ಈ ಕಾರಣಕ್ಕೆ ಅವರನ್ನು ದೋಣಿಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ಮಲ್ಪೆಯ ಮೀನುಗಾರರ ರತನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.