ADVERTISEMENT

ಅಮೃತ ಜ್ಯೋತಿ ಯೋಜನೆ: ಮಾಸಿಕ 75 ಯೂನಿಟ್‌ವರೆಗೆ ಉಚಿತ ವಿದ್ಯುತ್

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 5:32 IST
Last Updated 10 ಜನವರಿ 2023, 5:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಉಡುಪಿ: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಡತನ ರೇಖೆಗಿಂತ ಕೆಳಗಿರುವ (ಬಿ.ಪಿ.ಎಲ್) ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರಿಗೆ (ಎಸ್‌ಸಿ, ಎಸ್‌ಟಿ, ಭಾಗ್ಯಜ್ಯೋತಿ/ ಕುಟೀರ ಜ್ಯೋತಿ ಬಳಕೆದಾರರನ್ನು ಒಳಗೊಂಡಂತೆ) ಮಾಸಿಕ 75 ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುವ ಅಮೃತ ಜ್ಯೋತಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ.

ಮೆಸ್ಕಾಂ ವ್ಯಾಪ್ತಿಯಲ್ಲಿ ಯೋಜನೆಯ ಅನುಷ್ಠಾನದ ಬಗ್ಗೆ ಸೇವಾ ಸಿಂಧು ತಂತ್ರಾಂಶದಲ್ಲಿ ಅರ್ಹರ ನೋಂದಾಯಿಸುವ ಕಾರ್ಯ ಪ್ರಗತಿಯಲ್ಲಿದ್ದು, ಫಲಾನುಭವಿಗಳಿಗೆ ಮಾಸಿಕ 75 ಯೂನಿಟ್‌ವರೆಗೆ ವಿದ್ಯುತ್ ಶುಲ್ಕದ ಮೊತ್ತವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ಮರುಪಾವತಿಸಲಾಗುವುದು.

ಈ ಸೌಲಭ್ಯವನ್ನು ಪಡೆಯಲು ಫಲಾನುಭವಿಗಳು ಬಿ.ಪಿ.ಎಲ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರದ ದೃಢೀಕೃತ ದಾಖಲೆಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಸೌಲಭ್ಯಕ್ಕೆ ಅರ್ಹರಾಗುವ ಗ್ರಾಹಕರು ಮಾಸಿಕ ವಿದ್ಯುತ್ ಬಿಲ್ ಅನ್ನು ಸಂಪೂರ್ಣವಾಗಿ ನಿಗದಿತ ಅವಧಿಯೊಳಗೆ ಬಿಲ್‌ ಪಾವತಿಸಿದ ನಂತರ ಗ್ರಾಹಕರಿಗೆ ಸಹಾಯಧನ ಮರು ಪಾವತಿಸಲಾಗುವುದು. ಗ್ರಾಹಕರು ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಬ್ಯಾಂಕ್ ಖಾತೆಯ ಸಂಖ್ಯೆ ಹಾಗೂ ಇತರೆ ಮಾಹಿತಿಗಳನ್ನು ಒದಗಿಸಬೇಕು. 2022ರ ಏ.30ರ ಅಂತ್ಯಕ್ಕೆ ಇರುವ ಬಾಕಿ ವಿದ್ಯುತ್ ಶುಲ್ಕದ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿದ್ದಲ್ಲಿ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಹೆಚ್ಚಿನ ಮಾಹಿತಿ ಮತ್ತು ನೋಂದಣಿಗೆ ಸಮೀಪದ ಮೆಸ್ಕಾಂ ಉಪವಿಭಾಗ ಕಚೇರಿ ಸಂಪರ್ಕಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.