
ಹೆಬ್ರಿ: ಯುವಕರು ನಿಸ್ವಾರ್ಥವಾಗಿ ಸಮಾಜಮುಖಿ ಸೇವೆಗಳನ್ನು ಮಾಡಿದಾಗ ಸದೃಢ ಸಮಾಜ ನಿರ್ಮಾಣವಾಗುತ್ತದೆ. ಯುವ ಮನಸ್ಸುಗಳು ಒಂದಾದಾಗ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಆರೋಗ್ಯ ಸೇವೆಯ ಜೊತೆ ಜನಸೇವೆಗೆ ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆ ಮಾದರಿಯಾಗಿದೆ ಎಂದು ಶಾಸಕ ಸುನಿಲ್ ಕುಮಾರ್ ಶ್ಲಾಘಿಸಿದರು.
ಅವರು ಭಾನುವಾರ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆ ವತಿಯಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಜನನಿ ಫ್ರೆಂಡ್ಸ್ ನಡೆಸಿದ ಆರೋಗ್ಯ ತಪಾಸಣಾ ಕಾರ್ಯ ಮಹತ್ವದ್ದು. ನಾವು ಇಂದು ಒತ್ತಡ ಮುಕ್ತವಾಗಿ ಆರೋಗ್ಯಯುತವಾಗಿ ಸಾರ್ಥಕ ಜೀವನ ನಡೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆ ಅಧ್ಯಕ್ಷ ಚೇತನ್ ಕುಮಾರ್ ಮಾತನಾಡಿವರು, ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಆರೋಗ್ಯ ಸೇವೆ, ಆರ್ಥಿಕ ನೆರವು, ಶಾಲೆ ಮತ್ತು ಶ್ರದ್ಧಾ ಕೇಂದ್ರಗಳ ಪರಿಸರ ಸ್ವಚ್ಛತೆ, ಮಾನವ ಸಂಪತ್ತಿನ ಅಭಿವೃದ್ಧಿ, ಮಾವಿನಕಟ್ಟೆಯ ಹೆಸರನ್ನು ಉಳಿಸಿ ಬೆಳೆಸಲು ಮಾವಿನ ಗಿಡ ನೆಡುವ ಯೋಜನೆ ಸಹಿತ ಮುಂದಿನ ವರ್ಷದ ಹಲವು ಸಮಾಜಮುಖಿ ಯೋಜನೆಗಳನ್ನು ಪ್ರಕಟಿಸಿದರು.
ವರಂಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಅಮೀನ್ ಶಿಬಿರ ಉದ್ಘಾಟಿಸಿದರು. ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆ ಆಶ್ರಯದಲ್ಲಿ ನಡೆದ ಶಿಬಿರಕ್ಕೆ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುದ್ರಾಡಿ ವಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಮುನಿಯಾಲು, ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ, ಸಮುದಾಯ ವೈದ್ಯಕೀಯ ವಿಭಾಗ ಕಸ್ತೂರಬಾ ಮೆಡಿಕಲ್ ಕಾಲೇಜು ಮಣಿಪಾಲ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಸಹಯೋಗ ನೀಡಿದ್ದವು.
ಕಡ್ತಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಕೇಶ ಹೆಗ್ಡೆ, ಅಜೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಸತೀಶ ಪೂಜಾರಿ ಮುಳ್ಕಾಡು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುದ್ರಾಡಿ ವಲಯದ ಮೇಲ್ವಿಚಾರಕಿ ಸುಮಲತಾ, ಮುನಿಯಾಲು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯಸ್ಥೆ ಡಾ.ಸೌಮ್ಯಾ, ಮಣಿಪಾಲ ಕೆಎಂಸಿಯ ತಜ್ಞ ವೈದ್ಯರಾದ ಡಾ.ವೃಂದಾಲತ್, ಡಾ.ವಿಧಿ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರಿನ ಸ್ವಾತಿ, ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಜಯಲೀಲಾ, ಶಿಕ್ಷಕಿ ಶೃತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಶೆಟ್ಟಿ, ಪಡುಪರ್ಕಳ ಶಂಕರ ಶೆಟ್ಟಿ, ಸೇವಾ ಪ್ರತಿನಿಧಿ ಚಿತ್ರಾ, ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ಪದಾಧಿಕಾರಿಗಳು, ಗಣ್ಯರು, ಸಂಘಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು. ಮುನಿಯಾಲು ಕೆಪಿಎಸ್ ಶಿಕ್ಷಕ ಮಾತಿಬೆಟ್ಟು ಪ್ರಕಾಶ ಪೂಜಾರಿ ನಿರೂಪಿಸಿದರು. ಜನನಿ ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಸನ್ನ ಶೆಟ್ಟಿ ವಂದಿಸಿದರು.
ಶಿಬಿರದಲ್ಲಿ...
ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆ ಗೌರವ ಸಲಹೆಗಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜಸೇವಕ ಮಾವಿನಕಟ್ಟೆ ಶಂಕರ ಶೆಟ್ಟಿ ಪಂಚವಟಿ ಮುನಿಯಾಲು ಅವರನ್ನು ಸನ್ಮಾನಿಸಲಾಯಿತು. ಹೃದಯ ತಪಾಸಣೆ ಸ್ತನ ಮತ್ತು ಗರ್ಭಕೋಶ ತಪಾಸಣೆ ಸಿಪಿಆರ್ ತರಬೇತಿ ಮಧುಮೇಹ ಸಾಮಾನ್ಯ ಪರೀಕ್ಷೆಗಳು ನಡೆದವು. ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದರು. ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆಯ ನೂತನ ಲೋಗೊ ಬಿಡುಗಡೆಗೊಳಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರುಬೀಡು ಎಂ.ಡಿ.ಅಧಿಕಾರಿ ಅವರ ಪುತ್ಥಳಿಗೆ ನಿವೃತ್ತ ಪೋಸ್ಟ್‌ಮಾಸ್ಟರ್ ಎಳ್ಳಾರೆ ಕೆಂಜರಜಡ್ಡು ವಿಶ್ವನಾಥ ನಾಯಕ್ ಮಾಲಾರ್ಪಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.