ADVERTISEMENT

ಆರೋಗ್ಯ ಯೋಜನೆ: 1.20 ಕೋಟಿ ಜನರಿಗೆ ಉಚಿತ ಚಿಕಿತ್ಸೆ–ಸಚಿವ ಶಿವಾನಂದ ಎಸ್‌.ಪಾಟೀಲ್

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2018, 12:37 IST
Last Updated 29 ಸೆಪ್ಟೆಂಬರ್ 2018, 12:37 IST
ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ಎಸ್‌.ಪಾಟೀಲ್ ಸುರಕ್ಷಾ ಕಾರ್ಡ್‌ ವಿತರಿಸಿದರು.
ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ಎಸ್‌.ಪಾಟೀಲ್ ಸುರಕ್ಷಾ ಕಾರ್ಡ್‌ ವಿತರಿಸಿದರು.   

ಉಡುಪಿ: ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಹಾಗೂ ಕರ್ನಾಟಕ ಸರ್ಕಾರದ ಆರೋಗ್ಯ ಸುರಕ್ಷಾ ಯೋಜನೆಯಡಿ ರಾಜ್ಯದ 1 ಕೋಟಿ 20 ಲಕ್ಷ ಜನರು ಪ್ರತಿವರ್ಷ ₹5 ಲಕ್ಷದವರೆಗೆ ಆರೋಗ್ಯ ಸೇವೆ ಪಡೆಯಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ಎಸ್‌.ಪಾಟೀಲ್ ಹೇಳಿದರು.

ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಉಡುಪಿ ಮೊಗವೀರ ಯುವ ಸಂಘಟನೆ ಹಾಗೂ ಮಾಹೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಆರೋಗ್ಯ ಸುರಕ್ಷಾ ಕಾರ್ಡ್‌ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಜಾರಿಯಲ್ಲಿರುವ ಆರೋಗ್ಯ ಕರ್ನಾಟಕ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯ ಜತೆಗೆ ವಿಲೀನವಾಗಿದೆ. ಕೇಂದ್ರ ಸರ್ಕಾರದ ಯೋಜನೆಯ ವ್ಯಾಪ್ತಿಗೆ ಒಳಪಡುವ ರಾಜ್ಯದ 62 ಲಕ್ಷ ಕುಟುಂಬಗಳು ಹಾಗೂ ಆರೋಗ್ಯ ಕರ್ನಾಟಕ ಯೋಜನೆಯ ವ್ಯಾಪ್ತಿಗೆ ಒಳಪಡುವ 58 ಲಕ್ಷ ಬಡ ಕುಟುಂಬಗಳು ಆಯುಷ್ಮಾನ್‌ ಯೋಜನೆ ವ್ಯಾಪ್ತಿಗೆ ಬರುತ್ತವೆ. 1,600 ರೋಗಗಳಿಗೆ ಚಿಕಿತ್ಸೆ ಪಡೆಯಬಹುದು ಎಂದರು.

ADVERTISEMENT

ಪೊಲಿಯೊ, ಪ್ಲೇಗ್ ಸೇರಿದಂತೆ ಹಲವು ಮಾರಕ ರೋಗಗಳು ಸಮಾಜವನ್ನು ಬಾಧಿಸಿವೆ. ಎಲ್ಲ ರೋಗಗಳ ನಿರ್ಮೂಲನೆಗೆ ಸರ್ಕಾರದ ಶ್ರಮದ ಜತೆಗೆ ಸಂಘ, ಸಂಸ್ಥೆ, ಟ್ರಸ್ಟ್‌ಗಳ ಸಹಕಾರ ದೊಡ್ಡದಿದೆ. ಆರೋಗ್ಯವಂತ ಸಮಾಜ ರೂಪಿಸಲು, ಬಡಜನರ ಆರೋಗ್ಯ ಕಾಳಜಿಗೆ ಶ್ರಮಿಸುತ್ತಿರುವ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಕಾರ್ಯ ಶ್ಲಾಘನಿಯ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗ ಜನರಿಗೆ ಉಪಯುಕ್ತವಾದ ಆರೋಗ್ಯ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಆದರೆ, ಜಿ.ಶಂಕರ್ ಹಲವು ವರ್ಷಗಳ ಹಿಂದೆಯೇ ಬಡವರಿಗೆ ಆರೋಗ್ಯ ಸೇವೆ ನೀಡುವಲ್ಲಿ ಶ್ರಮಿಸಿದ್ದಾರೆ. ಅವರೊಂದಿಗೆ ಮಣಿಪಾಲದ ಮಾಹೆ ಮತ್ತು ಮೊಗವೀರ ಸಂಘಟನೆ ಸಹಕಾರ ನೀಡುತ್ತಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಟ್ರಸ್ಟ್‌ ಪ್ರವರ್ತಕರಾದ ಜಿ.ಶಂಕರ್‌ ಮಾತನಾಡಿ, 12 ವರ್ಷಗಳಿಂದ ಜಿಲ್ಲೆಯ ಜನರಿಗೆ ಆರೋಗ್ಯ ಸುರಕ್ಷಾ ಕಾರ್ಡ್‌ ವಿತರಣೆ ಮಾಡಲಾಗುತ್ತಿದೆ. 2,500 ಕುಟುಂಬಗಳಿಂದ ಆರಂಭವಾದ ಯೋಜನೆ ಇಂದು 30,000 ಕುಟುಂಬಗಳಿಗೆ ವಿಸ್ತರಣೆಯಾಗಿದೆ. ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ 1.35 ಲಕ್ಷ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಮಾಹೆ ಸಹ ಕುಲಪತಿ ಡಾ.ಎಚ್‌.ಎಸ್‌ ಬಲ್ಲಾಳ್‌, ಉಡುಪಿ ಶಾಸಕ ಕೆ.ರಘುಪತಿ ಭಟ್‌, ಮೋಗವೀರ ಸಂಘದ ಅಧ್ಯಕ್ಷ ವಿನಯ ಕರ್ಕೇರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.